ಚಿಕ್ಕಮಗಳೂರು ಟಾಪ್ ನ್ಯೂಸ್ !!
* ಮುಖ್ಯಮಂತ್ರಿಗಳನ್ನು ಭೇಟಿಯಾದ ಕಾಫಿನಾಡಿನ ಐವರು ಶಾಸಕರು
* ಪೊಲೀಸ್ ಜೀಪ್ ಡಿಕ್ಕಿ ಬೈಕ್ ಸವಾರ ಸಾವು
* ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಗಿತಗೊಳಿಸುವಂತೆ ಆರು ಗ್ರಾಮಸ್ಥರ ಪ್ರತಿಭಟನೆ
* ಭದ್ರಾ ನದಿಯಲ್ಲಿ ಎಸ್ಸೆಸೆಲ್ಸಿ ವಿದ್ಯಾರ್ಥಿಯ ಶವ ಪತ್ತೆ
NAMMUR EXPRESS NEWS
* ಮುಖ್ಯಮಂತ್ರಿಗಳನ್ನು ಭೇಟಿಯಾದ ಕಾಫಿನಾಡಿನ ಐವರು ಶಾಸಕರು
ಚಿಕ್ಕಮಗಳೂರು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ಶಾಸಕರು ಚಿಕ್ಕಮಗಳೂರು ಉಸ್ತುವಾರಿ ಹಾಗೂ ಇಂಧನ ಸಚಿವ ಕೆ ಜೆ ಚಾರ್ಜ್ ಅವರ ನೇತೃತ್ವದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಬೆಂಗಳೂರಿನಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಶಾಸಕರು ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದರು. ಅಲ್ಲದೇ ಮಲೆನಾಡು ಭಾಗದಲ್ಲಿ ಹೆಚ್ಚುತ್ತಿರುವ ಕಾಡಾನೆ, ಕಾಡುಕೋಣಗಳ ಹಾವಳಿಯನ್ನು ತಪ್ಪಿಸ ಬೇಕಾದ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಮಲೆನಾಡು ಭಾಗದ ಶಾಸಕರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಬಯಲು ಸೀಮೆ ಭಾಗದ ಶಾಸಕರು ಕುಡಿಯುವ ನೀರು, ಕೆರೆ ತುಂಬಿಸುವ ಯೋಜನೆ ಹಾಗೂ ಭದ್ರಾ ಉಪಕಣಿವೆ ಯೋಚನೆಗಳ ಕುರಿತು ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿದ್ದಾರೆ. ಶಾಸಕರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಆದಷ್ಟು ಬೇಗ ಕ್ಷೇತ್ರವಾರು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
* ಪೊಲೀಸ್ ಜೀಪ್ ಡಿಕ್ಕಿ ಬೈಕ್ ಸವಾರ ಸಾವು
ಕಡೂರು: ಬೈಕಿಗೆ ಪೊಲೀಸ್ ಜೀಪ್ ಡಿಕ್ಕಿ ಹೊಡೆದಿದೆ ಎಂದು ಮೃತಪಟ್ಟ ವ್ಯಕ್ತಿಯ ದೇಹವನ್ನು ತೆಗೆಯಲು ಬಿಡದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮಚ್ಚೇರಿ ಗ್ರಾಮದಲ್ಲಿ ನಡೆದಿದೆ. ಬೈಕಿಗೆ ಹಿಂಬದಿಯಿಂದ ಪೊಲೀಸ್ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದಾನೆಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.
ಕಡೂರು ತಾಲೂಕಿನ ಸಿಂಗಟಗೆರೆ ಪೊಲೀಸ್ ಠಾಣೆಯ ಜೀಪ್ ಪಟ್ಟದೇವರಹಳ್ಳಿ ಮೂಲದ ವ್ಯಕ್ತಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದ್ದು ಘಟನೆಯಲ್ಲಿ ಬೈಕ್ ಚಾಲಕ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಹೀಗಾಗಿ ಆತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿ ಮೃತ ದೇಹವನ್ನು ತೆಗೆಯಲು ಬಿಡದೆ ಪೊಲೀಸ್ ಜೀಪ್ ಚಾಲಕನ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಜೀಪ್ ಚಾಲಕ ಶಿವಕುಮಾರ್ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಶಿವಕುಮಾರ್ ನನ್ನು ಅಮಾನತು ಮಾಡಿ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ ಆದೇಶ ಹೊರಡಿಸಿದ್ದಾರೆ.
* ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಗಿತಗೊಳಿಸುವಂತೆ ಆರು ಗ್ರಾಮಸ್ಥರ ಪ್ರತಿಭಟನೆ
ಅಜ್ಜಂಪುರ : ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣ ಪಂಚಾಯತಿ ಪಟ್ಟಣದಲ್ಲಿ ಸಂಗ್ರಹಿಸುತ್ತಿರುವ ಘನ ತ್ಯಾಜ್ಯ ವಸ್ತುಗಳನ್ನು ಸೊಲ್ಲಾಪುರ ಗ್ರಾಮ ಪಂಚಾಯತಿ ಸೌತನಹಳ್ಳಿ ಗ್ರಾಮದಲ್ಲಿ ವಿಲೇವಾರಿ ಮಾಡಲು ತೀರ್ಮಾನ ಮಾಡಿರುವುದನ್ನು ವಿರೋಧಿಸಿ ಬೇಗೂರು, ಅಸಂದಿ, ಮುಗುಳಿ, ಚಿಣ್ಣಪುರ, ಸೊಲ್ಲಾಪುರ, ಸೌತನಹಳ್ಳಿ, ಗ್ರಾಮಸ್ಥರು ಅನಿರ್ದಿಷ್ಠಾವಧಿ ಮುಷ್ಕರ ಆರಂಭಿಸಿದ್ದಾರೆ.
ಈ ಸಂಬಂಧ ನಿನ್ನೆ ಸಾಣೆಹಳ್ಳಿ ಶ್ರೀಗಳ ನೇತೃತ್ವದಲ್ಲಿ ಗ್ರಾಮಸ್ಥರು ಸಭೆಯನ್ನು ನಡೆಸಿ ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಖುದ್ದಾಗಿ ಬಂದು ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಗಿತಗೊಳಿಸಿ ಎಂದಿನಂತೆ ಗೋಮಾಳಕ್ಕೆ ಜಾಗವನ್ನು ಬಿಟ್ಟು ಕೊಡುವವರೆಗೆ ಮುಷ್ಕರವನ್ನು ಮುಂದುವರಿಸಲಾಗುವುದು ಎಂದು ಪ್ರತಿಭಟನಾನಿರತರು ತಿಳಿಸಿದ್ದಾರೆ.
* ಭದ್ರಾ ನದಿಯಲ್ಲಿ ಎಸ್ಸೆಸೆಲ್ಸಿ ವಿದ್ಯಾರ್ಥಿಯ ಶವ ಪತ್ತೆ
ಕಳಸ: ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯೋರ್ವ ಭದ್ರಾನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಳುವಳ್ಳಿ ಬಳಿ ನಡೆದಿದೆ.
ಕಳಸ ಪಬ್ಲಿಕ್ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಳೆಹೊಳೆಯ ಶ್ರೇಯಸ್, ಮಾರ್ಚ್ 16ರಿಂದ ಕಾಣೆಯಾಗಿದ್ದ. ಅಂದು ತರಗತಿ ಮುಗಿದ ನಂತರ ಶ್ರೇಯಸ್ ಮನೆಗೆ ಹೋಗಿರಲಿಲ್ಲ. ಈ ಬಗ್ಗೆ ಕಳಸ ಠಾಣೆಗೆ ಪೋಷಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವಿದ್ಯಾರ್ಥಿಯ ಪತ್ತೆಗಾಗಿ ಹುಡುಕಾಟ ನಡೆಸಿದ್ರು. ನಿನ್ನೆ ಸಂಜೆ ಕಳಸ ಬಾಳೆಹೊಳೆ ನಡುವಿನ ಹಳುವಳ್ಳಿ ಬಳಿ ಭದ್ರಾ ನದಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು.
ಇದೀಗ ಶವದ ಗುರುತು ಪತ್ತೆಯಾಗಿದ್ದು, ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶವವೆಂದು ಖಚಿತವಾಗಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಇನ್ನೆರಡು ದಿನ ಬಾಕಿ ಇರುವಂತೆ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.