ಶಮಿತಾ ಆತ್ಮಹತ್ಯೆ ಪ್ರಕರಣಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಎಂಟ್ರಿ
* ಶಮಿತಾ ತಂದೆ ದೂರಿನ ಮೇಲೆ ಚಿಕ್ಕಮಗಳೂರು ಎಸ್‌ಪಿಗೆ ನೋಟಿಸ್ ಜಾರಿ
* ಏಳು ದಿನಗಳೊಳಗೆ ಪ್ರಕರಣದ ಸಂಪೂರ್ಣ ಸಂಪೂರ್ಣ ವರದಿ ಕೊಡುವಂತೆ ನೋಟಿಸ್
NAMMMUR EXPRESS NEWS
ಕೊಪ್ಪ:ಪಟ್ಟಣದಲ್ಲಿನ ಮೊರಾರ್ಜಿ ವಸತಿ ಶಾಲೆಯಲ್ಲಿ ಎರಡು ತಿಂಗಳ ಹಿಂದೆ ನಡೆದ ಅಪ್ರಾಪ್ತ ಬಾಲಕಿ ಶಮಿತಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಯೊಂದು ನಡೆದಿದೆ. ಈಗ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಎಂಟ್ರಿಕೊಟ್ಟಿದ್ದು, ಆಯೋಗವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯ ಪೊಲೀಸ್ ಎಸ್‌ಪಿಗೆ ನೋಟಿಸ್ ಜಾರಿ ಮಾಡಿದೆ. ಏಳು ದಿನಗಳೊಳಗೆ ಪ್ರಕರಣದ ಸಂಪೂರ್ಣ ವರದಿ ಸಲ್ಲಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ಕಳೆದ ಜೂನ್ 29ರಂದು ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 9ನೇ ತರಗತಿ ಬಾಲಕಿ ಶಮಿತಾ, ಹಾಸ್ಟೆಲ್‌ನ ಶೌಚಾಲಯದಲ್ಲಿ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಘಟನೆ ನಡೆದು ಎರಡು ತಿಂಗಳೇ ಕಳೆದರೂ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಹೋರಾಟ ಇನ್ನು ನಡೆಯುತ್ತಿದೆ.
ಈ ಸಂಬಂಧ ಕೊಪ್ಪದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು,ಪ್ರಕರಣದ ಸೂಕ್ತ ತನಿಖೆಗೆ ಒತ್ತಾಯಿಸಿ ಹಲವು ಸಂಘಟನೆಗಳಿಂದ ಪ್ರತಿಭಟನೆಗಳು ನಡೆದು ಕೊಪ್ಪ ಬಂದ್ ಕೂಡ ನಡೆದಿತ್ತು. ಇದೇ ಶಾಲೆಯಲ್ಲಿ 2023ರಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಅದೇ ಸ್ಥಳದಲ್ಲಿ ಅದೇ ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಜನರಲ್ಲಿ ಇನ್ನಷ್ಟು ಅಸಮಾಧಾನ ಹಾಗೂ ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಸೂಕ್ತ ತನಿಖೆ ನಡೆಸುವಂತೆ ವಿವಿಧ ಸಂಘಟನೆಗಳು, ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು ಹೋರಾಟ ನಡೆಸಿದ್ದವು. ನಂತರ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿತ್ತು. ಆದರೂ ಶಮಿತಾ ಸಾವಿಗೆ ನ್ಯಾಯ ಸಿಕ್ಕಿಲ್ಲ ಎಂಬ ಭಾವನೆ ಈಗಲೂ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ.
ಇದರಿಂದ ಶಮಿತಾ ತಂದೆ ಸಂದೇಶ್ ಶೆಟ್ಟಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.ಪ್ರಕರಣದ ಸೂಕ್ತ ತನಿಖೆ ನಡೆಸಿ ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು. ಆ ದೂರಿನ ಆಧಾರದ ಮೇಲೆ ಆಯೋಗವು ಚಿಕ್ಕಮಗಳೂರು ಪೊಲೀಸ್ ಎಸ್‌ಪಿಗೆ ಏಳು ದಿನಗಳೊಳಗೆ ಪ್ರಕರಣದ ಸಂಪೂರ್ಣ ವರದಿ ಸಲ್ಲಿಸುವಂತೆ ನೋಟಿಸ್ ನೀಡಿದೆ.
ಒಂದು ಕಡೆ ಸಾರ್ವಜನಿಕ ಹೋರಾಟ ಮುಂದುವರಿದರೆ, ಮತ್ತೊಂದು ಕಡೆ ಮಕ್ಕಳ ಹಕ್ಕುಗಳ ಆಯೋಗದ ಎಂಟ್ರಿ ಕೊಟ್ಟಿರುವುದು ಪ್ರಕರಣಕ್ಕೆ ಹೊಸ ದಿಕ್ಕು ತರುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಾಗುವ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿದೆ.