ಕರಾವಳಿ ಟಾಪ್ ನ್ಯೂಸ್
• ಮಂಗಳೂರು: ಮಾದಕ ವಸ್ತು ಮಾರಾಟ ಮತ್ತು ಸಾಗಾಟ; ಆರೋಪಿಗಳ ಬಂಧನ
• ಕಾಪು: ಐದು ದಿನಗಳಿಂದ ಒಂದೆಡೆ ನಿಂತಿರುವ ಟ್ಯಾಂಕರ್; ಅಪಾಯ ಸಂಭವಿಸುವ ಸಾಧ್ಯತೆ
• ಮೂಡಬಿದರೆ: ದೂರು ನೀಡಲು ಬಂದ ಮಹಿಳೆಯೊಂದಿಗೆ ಅಶ್ಲೀಲವಾಗಿ ನಡೆದುಕೊಂಡ ಪೊಲೀಸ್ ಸಿಬ್ಬಂದಿ
• ಉಡುಪಿ: ಮಗನಿಗೆ ಕೆಲಸ ಸಿಗದ ಕಾರಣ ಮನನೊಂದು ತಾಯಿ ಆತ್ಮಹತ್ಯೆ
• ಪುತ್ತೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಕಳ್ಳತನಕ್ಕೆ ಯತ್ನ.
• ಕುಂದಾಪುರ: ಅಪರಿಚಿತ ವ್ಯಕ್ತಿಯ ಶವ ಪತ್ತೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
•ಮಂಗಳೂರು: ಮಾದಕ ವಸ್ತು ಮಾರಾಟ ಮತ್ತು ಸಾಗಾಟ; ಆರೋಪಿಗಳ ಬಂಧನ
ಮಂಗಳೂರು: ತೋಕೂರು ರೈಲ್ವೆ ನಿಲ್ದಾಣದ ಬಳಿ, ಸಾರ್ವಜನಿಕರು ಸಂಚರಿಸುವ ರಸ್ತೆ ಬದಿಯಲ್ಲಿ ಇಬ್ಬರು ಯುವಕರು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಪಣಬಂದೂರು ಠಾಣೆಯ ಪಿಎಸ್ಐ ಅವರಿಗೆ ನಿರ್ದಿಷ್ಟ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಮಂಗಳೂರು ನಗರ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಕಾಂತ್ ಕೆ ಅವರ ನಿರ್ದೇಶನದಂತೆ ಹಾಗೂ ಪಣಬಂದೂರು ಪೊಲೀಸ್ ಠಾಣೆಯ ನಿರೀಕ್ಷಕರಾದ ಮೊಹಮ್ಮದ್ ಸಲೀಂ ಅಬ್ಬಾಸ್ ಅವರ ನೇತೃತ್ವದಲ್ಲಿ ಜ್ಞಾನಶೇಖರ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ, ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಹರ್ಷಕುಮಾರ್ ಮತ್ತು ಅಮರ್ ಕುಮಾರ್ ಎಂದು ಗುರುತಿಸಲಾಗಿದೆ. ಹರ್ಷಕುಮಾರ್ ಬಿಹಾರದಲ್ಲಿ ಮೀಶೋ, ಫ್ಲಿಪ್ ಕಾರ್ಟ್ ಹಬ್ ನಲ್ಲಿ ಮತ್ತು ಅಮರ್ ಕುಮಾರ್ ದೆಹಲಿಯಲ್ಲಿ ತರಕಾರಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ದಾಳಿಯ ಸಂದರ್ಭದಲ್ಲಿ ಪೊಲೀಸರು ಹರ್ಷ ಕುಮಾರ್ ಬಳಿಯಿದ್ದ 1ಕೆಜಿ 230 ಗ್ರಾಂ ಮತ್ತು ಅಮರ್ ನಿಂದ 80 ಗ್ರಾಂ ಗಾಂಜಾ ಮಾದಕ ವಸ್ತುವನ್ನು, ಇವುಗಳೊಂದಿಗೆ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು, ಮಾದಕ ವಸ್ತುಗಳನ್ನು ಮಾರಾಟ ಮಾಡಲು ಉಪಯೋಗಿಸುತ್ತಿದ್ದ ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಎರಡೂ ಸೇರಿ ಒಟ್ಟು 75,೦೦೦ ರೂಪಾಯಿ ಬೆಲೆ ಬಾಳಬಹುದು ಎಂದು ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪಣಬಂದೂರು ಪೊಲೀಸ್ ಠಾಣೆಯಲ್ಲಿ 75/2025ರ ಅನ್ವಯ ಪ್ರಕರಣ ದಾಖಲಾಗಿದೆ.
•ಕಾಪು: ಐದು ದಿನಗಳಿಂದ ಒಂದೆಡೆ ನಿಂತಿರುವ ಟ್ಯಾಂಕರ್; ಅಪಾಯ ಸಂಭವಿಸುವ ಸಾಧ್ಯತೆ
ಕಾಪು: ದಿನಂಪ್ರತಿ ವಾಹನಗಳ ಸಂದಣಿ ಮತ್ತು ಜನನಿಬಿಡ ಪ್ರದೇಶವಾದ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್ ಬಳಿ, ಸ್ವಲ್ಪ ದೂರದಲ್ಲಿ 16 ಚಕ್ರದ ಬೃಹತ್ ಟ್ಯಾಂಕರ್ ವೊಂದು ಕೆಲವು ದಿನಗಳಿಂದ ನಿಂತಲ್ಲಿಯೇ ನಿಂತಿದೆ. ಮಳೆ ಮತ್ತು ಕತ್ತಲಾದ ಸಂದರ್ಭದಲ್ಲಿ ವಾಹನ ಚಾಲಕರು ವೇಗವಾಗಿ ಹೋಗಲು ಪ್ರಯತ್ನಿಸಿದರೆ ಟ್ಯಾಂಕರ್ ಗೆ ಢಿಕ್ಕಿ ಹೊಡೆದು, ಅಪಘಾತ ಸಂಭವಿಸುವ ಸಾಧ್ಯತೆ ಅಧಿಕ ಪ್ರಮಾಣದಲ್ಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಇದಕ್ಕೆ ಸಂಬಂಧಿಸಿದ ವ್ಯಕ್ತಿಗಳು ಇಲ್ಲವೇ ಇಲಾಖೆಯವರು ಕೂಡಲೇ ಇದರತ್ತ ಗಮನಹರಿಸಿ, ಅಪಘಾತ ಸಂಭವಿಸುವ ಮೊದಲೇ ಈ ದೈತ್ಯಾಕಾರದ ವಾಹನವನ್ನು ಅಲ್ಲಿಂದ ತೆರುವುಗೊಳಿಸಿ, ವಾಹನಗಳ ಮತ್ತು ಪಾದಾಚಾರಿಗಳ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸುವಂತಹ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಪಡಿಸಿದ್ದಾರೆ.
• ಮೂಡಬಿದರೆ: ದೂರು ನೀಡಲು ಬಂದ ಮಹಿಳೆಯೊಂದಿಗೆ ಅಶ್ಲೀಲವಾಗಿ ನಡೆದುಕೊಂಡ ಪೊಲೀಸ್ ಸಿಬ್ಬಂದಿ
ಮೂಡಬಿದರೆ: ತೋಡೂರು ಸಮೀಪದ ವಿವಾಹಿತ ಮಹಿಳೆಯೊಬ್ಬರು ತಮ್ಮ ಕೌಟುಂಬಿಕ ಸಮಸ್ಯೆಯ ಕುರಿತು, ಆಗಸ್ಟ್ 23ರಂದು ಮೂಡಬಿದರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯ ನಿರೀಕ್ಷಕರಾದ ಸಂದೇಶ ಅವರು ದೂರು ನೀಡಿದ ಮಹಿಳೆ ಮತ್ತು ಆಕೆಯ ಪತಿಯನ್ನು ಠಾಣೆಗೆ ಕರೆಸಿಕೊಂಡು, ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿ ಕಳುಹಿಸಿಕೊಟ್ಟಿದ್ದರು. ನಂತರ ಮತ್ತೊಂದು ರೀತಿಯ ಸಮಸ್ಯೆ ಮಹಿಳೆಗೆ ತಲೆದೋರಿತು. ಆಕೆಯು ನೀಡಿದ ದೂರು ಪ್ರತಿಯಲ್ಲಿದ್ದ ಮೊಬೈಲ್ ಸಂಖ್ಯೆಯನ್ನು ಪೊಲೀಸ್ ಠಾಣೆಯ ಸಿಬ್ಬಂದಿ ಶಾಂತಪ್ಪ ಎನ್ನುವವನು ಪಡೆದುಕೊಂಡು, ಆಗಸ್ಟ್ ಇಪ್ಪತ್ತೈದರಿಂದ ಸೆಪ್ಟೆಂಬರ್ ಒಂದರವರೆಗೆ ಆ ಮಹಿಳೆಗೆ ಸತತವಾಗಿ ಕರೆ ಮಾಡುವುದು, ಅಶ್ಲೀಲ ಸಂದೇಶಗಳನ್ನು ಕಳುಹಿಸಿ ತನ್ನೊಂದಿಗೆ ಬರುವಂತೆ ಕರೆದಿದ್ದಾರೆ. ಆಗ ಮಹಿಳೆಯು ಶಾಂತಪ್ಪ ತನಗೆ ಕರೆ ಮಾಡಿರುವ ಕುರಿತು ರೆಕಾರ್ಡ್ ಸಮೇತ ಠಾಣೆಗೆ ದೂರು ನೀಡಿದರು. ಇದಕ್ಕೆ ಸಂಬಂಧಿಸಿದಂತೆ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಶಾಂತಪ್ಪ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.
• ಉಡುಪಿ: ಮಗನಿಗೆ ಕೆಲಸ ಸಿಗದ ಕಾರಣ ಮನನೊಂದು ತಾಯಿ ಆತ್ಮಹತ್ಯೆ
ಉಡುಪಿ: ಮಹಾರಾಷ್ಟ್ರ ಮೂಲದ ಲತಾ ಎನ್ನುವ ಮಹಿಳೆಯು ಕಳೆದ ತಿಂಗಳು ಮನೆಯಿಂದ ಹೊರಹೋಗಿದ್ದವರು ನಾಪತ್ತೆಯಾಗಿದ್ದರು. ಬಳಿಕ ಮಹಿಳೆಯು ವಿಷ ಸೇವಿಸಿರುವ ಸಂಗತಿ ತಿಳಿದು ಬಂದು, ಆಕೆಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಕಳೆದೆರಡು ದಿನಗಳ ಹಿಂದೆ ಮೃತಪಟ್ಟಿದ್ದಾರೆ. ಮಗನಿಗೆ ಸರಿಯಾದ ಕೆಲಸವಿಲ್ಲದ ಕಾರಣ, ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಪುತ್ತೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಕಳ್ಳತನಕ್ಕೆ ಯತ್ನ.
ಪುತ್ತೂರು: ಉಪ್ಪಿನಂಗಡಿಯ ಚಿನ್ನಾಭರಣ ಅಂಗಡಿಗೆ ಆಗಮಿಸಿದ ವ್ಯಕ್ತಿಗಳಿಬ್ಬರು, ಆಭರಣವನ್ನು ಖರೀದಿಸುವ ನೆಪದಲ್ಲಿ ಕದಿಯುವ ಪ್ರಯತ್ನ ಮಾಡಿದ್ದಾರೆ. ಒಬ್ಬನು ಆಭರಣವನ್ನು ಕೈಯಲ್ಲಿ ಹಿಡಿದು ನೋಡುವಂತೆ ಮಾಡಿ ತಕ್ಷಣ ಮತ್ತೊಂದು ಕೈಗೆ ರವಾನಿಸುತ್ತಿದ್ದ, ಬಳಿಕ ಇನ್ನೊಂದು ಆಭರಣ ತೋರಿಸುವಂತೆ ಸಿಬ್ಬಂದಿಗೆ ಹೇಳಿ ಲಪಟಾಯಿಸಲು ಪ್ರಯತ್ನಿಸಿದ, ಮತ್ತೋರ್ವ ವ್ಯಕ್ತಿ ಕೂಡ ಅದೇ ರೀತಿ ಆಭರಣದ ವಿನ್ಯಾಸದ ಕುರಿತು ಸಿಬ್ಬಂದಿಗಳೊಂದಿಗೆ ಚರ್ಚಿಸುತ್ತಾ, ತಮ್ಮ ಕೃತ್ಯದತ್ತ ಗಮನಹರಿಸದಂತೆ ವಂಚಿಸುತ್ತಿದ್ದ. ಇದನ್ನು ಗಮನಿಸುತ್ತಿದ್ದ ಆಭರಣ ಅಂಗಡಿಯ ಮತ್ತೋರ್ವ ಸಿಬ್ಬಂದಿಯು ತಕ್ಷಣ ಎಚ್ಚೆತ್ತುಕೊಂಡು ಇಬ್ಬರ ಕೃತ್ಯವನ್ನು ಕುರಿತು ಆಕ್ಷೇಪಿಸಿದಾಗ, ಅವರು ಕೈಯಲ್ಲಿದ್ದ ಆಭರಣವನ್ನು ಅದರ ಡಬ್ಬಿಯಲ್ಲಿಯೇ ಇಟ್ಟಿದ್ದಾರೆ.ಇದು ಕೂಡ ಸಿಸಿ ಕ್ಯಾಮೆರಾದ ಮೂಲಕ ಕಂಡುಬಂದಿದೆ. ಕೃತ್ಯ ಎಸಗಿದವರು ಹಿಂದಿ ಮಾತನಾಡುತ್ತಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ. “ಸಿಬ್ಬಂದಿಗಳ ನೆರವಿನಿಂದ ಕಳ್ಳತನವಾಗುವುದು ತಪ್ಪಿದೆ. ನಮ್ಮಲ್ಲಿ ಯಾವುದೇ ಆಭರಣ ಕಳುವಾಗಿಲ್ಲ” ಎಂದು ಅಂಗಡಿಯ ಮಾಲೀಕರು ಸ್ಪಷ್ಟಪಡಿಸಿದ್ದಾರೆ. ಮತ್ತು ಪೊಲೀಸರಿಗೆ ದೂರನ್ನು ಸಹ ನೀಡಿಲ್ಲ ಎನ್ನಲಾಗಿದೆ. ಆರೋಪಿಗಳು ಆಭರಣ ಕಳ್ಳತನ ಮಾಡಲು ಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
• ಕುಂದಾಪುರ: ಕಂದಾವರ ಗ್ರಾಮದಲ್ಲಿ ಸುಮಾರು 30 ರಿಂದ 40 ವರ್ಷ ವಯಸ್ಸಿನ ಅಪರಿಚಿತ ಪುರುಷನೊಬ್ಬನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಒಂದು ಕಾಲಿನ ಮೂಳೆಯು ಮೃತದೇಹದಿಂದ ಸ್ವಲ್ಪ ದೂರದಲ್ಲಿ ಬಿದ್ದಿದ್ದು, ಚರ್ಮ ಮತ್ತು ಮಾಂಸ ಅಧಿಕ ಪ್ರಮಾಣದಲ್ಲಿ ನಾಶವಾಗಿದೆ. ಮತ್ತು ಮೃತದೇಹದ ಬಳಿ ಕೀಟನಾಶಕ ಬಾಟಲಿಯ ಹೊರಕವಚ ಮತ್ತು ನೀರಿನ ಬಾಟಲಿ ಪತ್ತೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಂದಾವರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.