ಚಿಕ್ಕಮಗಳೂರು ಟಾಪ್ ನ್ಯೂಸ್
* ತೆಂಗಕಾಯಿ ಬೆಲೆ ಗಗನಕ್ಕೆ,ತೋಟದಲ್ಲಿ ಸಂಗ್ರಹಿಸಿಟ್ಟಿದ್ದ 4,250 ತೆಂಗಿನಕಾಯಿ ಕಳವು
* ಹೃದಯಾಘಾತಕ್ಕೆ ಬಲಿಯಾದ ಉಪನ್ಯಾಸಕ
* ದಿನವಿಡೀ ಸುರಿದ ಮಳೆಗೆ ಕುಸಿದ ಕಟ್ಟಡ,ಅಪಾರ ಹಾನಿ
NAMMMUR EXPRESS NEWS
* ತೆಂಗಕಾಯಿ ಬೆಲೆ ಗಗನಕ್ಕೆ,ತೋಟದಲ್ಲಿ ಸಂಗ್ರಹಿಸಿಟ್ಟಿದ್ದ 4,250 ತೆಂಗಿನಕಾಯಿ ಕಳವು
ಚಿಕ್ಕಮಗಳೂರು: ತೆಂಗಿನಕಾಯಿ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ ಕಳ್ಳರು ಇದೀಗ ತೆಂಗಿನಕಾಯಿ ಶೆಡ್‌ಗಳನ್ನು ಟಾರ್ಗೆಟ್ ಮಾಡಲು ಶುರುಮಾಡಿದ್ದಾರೆ. ಇತ್ತೀಚೆಗೆ ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಗ್ರಾಮದ ಮೈಲಾರ ದೇವಸ್ಥಾನದ ಹತ್ತಿರ ವಾಸವಿರುವ ಚಂದ್ರೇಗೌಡ ಅವರ ತೋಟದ ಶೆಡ್‌ನ ಬೀಗವನ್ನು ಕಳ್ಳರು ಮುರಿದು ಒಳ ಪ್ರವೇಶಿಸಿ, ಶೆಡ್‌ನಲ್ಲಿ ಇಟ್ಟಿದ್ದ 4,250 ತೆಂಗಿನಕಾಯಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಕಳವುಗೊಂಡ ತೆಂಗಿನಕಾಯಿಗಳ ಮೌಲ್ಯವನ್ನು ಸುಮಾರು ₹1,05,000 ರೂ.ಗಳು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಪೊಲೀಸರು ತನಿಖೆ ಆರಂಭಿಸಿದ್ದಾರೆ.
* ಹೃದಯಾಘಾತಕ್ಕೆ ಬಲಿಯಾದ ಉಪನ್ಯಾಸಕ
ಎನ್.ಆರ್.ಪುರ: ಚಿಕ್ಕಮಗಳೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಶನಿವಾರ ಉಪನ್ಯಾಸಕರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಎನ್ ಆರ್ ಪುರ ತಾಲ್ಲೂಕಿನ ಕಾನೂರು ಗ್ರಾಮದ ನಿವಾಸಿ ಅರವಿಂದ್ (41) ಅವರು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಕಳೆದ 13 ವರ್ಷಗಳಿಂದ ಕೊಪ್ಪದ ಜೆ.ಎಫ್.ಜಿ.ಸಿ ಸೇರಿದಂತೆ ಹಲವಾರು ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಇತ್ತೀಚೆಗೆ ಎನ್.ಆರ್ ಪುರದ ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಅರವಿಂದ್ ಅವರ ಮರಣದ ಸುದ್ದಿ ಕೇಳಿ ಕಾಲೇಜು ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದು, ತಮ್ಮ ಪ್ರೀತಿಪಾತ್ರ ಉಪನ್ಯಾಸಕನನ್ನು ಕಳೆದುಕೊಂಡು ದುಃಖದಿಂದ ಶೋಕಾಚರಣೆ ಮಾಡಿದ್ದಾರೆ. ಶಿಸ್ತಿನ ಪಾಠ ಮತ್ತು ವಿದ್ಯಾರ್ಥಿಗಳೊಂದಿಗೆ ಪ್ರೀತಿಯ ನಡವಳಿಕೆಯಿಂದ ಅವರು ಎಲ್ಲರ ಮನಗೆದ್ದಿದ್ದರು.
* ದಿನವಿಡೀ ಸುರಿದ ಮಳೆಗೆ ಕುಸಿದ ಕಟ್ಟಡ,ಅಪಾರ ಹಾನಿ
ಮೂಡಿಗೆರೆ: ತಾಲೂಕಿನಾದ್ಯಂತ ಭಾನುವಾರ ಬಿದಡೇ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮಳೆಯಿಂದ ತಾಲ್ಲೂಕಿನ ಗಂಗನಮಕ್ಕಿ ಗ್ರಾಮದಲ್ಲಿ ಹಳೆಯ ಕಟ್ಟಡವೊಂದು ಕುಸಿದಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಮಂಜುನಾಥ್ ಹಾಗೂ ಗಿರೀಶ್ ಎಂಬುವರ ಒಡೆತನದಲ್ಲಿದ್ದ ಕಟ್ಟಡವು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಏಕಾಏಕಿ ಕುಸಿದು ಬಿಟ್ಟಿದ್ದು, ಕಟ್ಟದಲ್ಲಿದ್ದ ಅಕ್ಕಲ್ ಖಾನ್ ಎಂಬುವರಿಗೆ ಸೇರಿದ ಎಲೆಕ್ಟ್ರಿಕಲ್ ಅಂಗಡಿಯು ಸಂಪೂರ್ಣವಾಗಿ ಹಾನಿಯಾಗಿದೆ. ಕಟ್ಟಡದ ಬಳಿ ನಿಲ್ಲಿಸಿದ್ದ ಕಾರು, ಎರಡು ಬೈಕ್ ಗಳು ಕೂಡ ಜಖಂ ಗೊಂಡಿದ್ದು ನಷ್ಟ ಉಂಟಾಗಿದೆ. ಕಟ್ಟಡದಲ್ಲಿ ಸುಮಾರು 10 ಕ್ಕೂ ಹೆಚ್ಚು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಘಟನೆ ಸಂಭವಿಸುವ ವೇಳೆ ಊಟಕ್ಕಾಗಿ ಹೊರ ಹೋಗಿದ್ದರಿಂದ ಜೀವ ಹಾನಿ ತಪ್ಪಿದಂತಾಗಿದೆ.
ಮಳೆಯಿಂದ ಗೆಂಡೆಹಳ್ಳಿ ಬೇಲೂರು ರಸ್ತೆಯಲ್ಲಿ ಮರಬಿದ್ದು ಸಂಚಾರಕ್ಕೆ ಅಡ್ಡಿಯಾಗಿದ್ದು, ಸ್ಥಳೀಯರು ಮರವನ್ನು ತೆರವುಗೊಳಿಸಿದ ಬಳಿಕ ಸಂಚಾರ ಸುಗಮವಾಗಿತ್ತು.