ಸರ್ಕಾರಿ ಜಾಗದಲ್ಲಿದ್ದ ಮರಗಳ ಮಾರಣ ಹೋಮ..!!
– ಅರಣ್ಯ ಇಲಾಖೆಯ ವಾರ್ನಿಂಗ್ ನಂತರವೂ ರಾತ್ರೋ ರಾತ್ರಿ ಮರಗಳು ನೆಲಸಮ
– ಬಗರ್ ಹುಕ್ಕುಂ ಅಧ್ಯಕ್ಷ ಮತ್ತು ಸಂಗಡಿಗರಿಂದ ಕೃತ್ಯ
– ಯಾರ ಅನುಮತಿ ಪಡೆಯದೆ ತೆರವು ಆರೋಪ,ಪ್ರಶ್ನಿಸಿದವರಿಗೆ ನಿಂದನೆ
NAMMUR EXPRESS NEWS
ಎನ್.ಆರ್ ಪುರ: ಮುಚ್ಚಿದ ಸರ್ಕಾರಿ ಶಾಲೆಯ ಜಾಗದಲ್ಲಿದ್ದ ಮರಗಳನ್ನು ಸಂಬಂಧ ಪಟ್ಟ ಇಲಾಖೆಯ ಯಾರ ಅನುಮತಿ ಪಡೆಯದೇ ಬುಡಸಮೇತ ಕಡಿದು ಟ್ರಾಕ್ಟರ್ನಲ್ಲಿ ಸಾಗಿಸಿದ ಘಟನೆ ಎನ್.ಆರ್ ಪುರ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ನಾಗಲಾಪುರ ಗ್ರಾಮದ ಸರ್ವೇ ನಂ.58 ರಲ್ಲಿನ ಸರ್ಕಾರಿ ಶಾಲೆಯ ಜಾಗದಲ್ಲಿದ್ದ ಮರಗಳನ್ನು ಎನ್.ಆರ್.ಪುರ ಬಗರ್ ಹುಕ್ಕುಂ ಸಮಿತಿ ಅಧ್ಯಕ್ಷ ಇ.ಸಿ ಜಾಯ್ ಎಂಬುವರು ಮತ್ತವರ ಸಂಗಡಿಗರು ಸೇರಿ ಬುಡ ಸಮೇತ ಕಡಿದು,ಟ್ರಾಕ್ಟರ್‌ನಲ್ಲಿ ಸಾಗಿಸಿದ್ದಾರೆ. ಸಂಜೆ ವೇಳೆ ಮರ ಕಡಿಯುತ್ತಿದ್ದಾಗ ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಎಚ್ಚರಿಸಿ ಸ್ಥಗಿತಗೊಳಿಸಿರುತ್ತಾರೆ. ಆದರೆ ಮತ್ತದೇ ತಂಡವು ರಾತ್ರಿ ಸಮಯದಲ್ಲಿ ಯಾರ ಅನುಮತಿ ಪಡೆಯದೇ ಮರಗಳನ್ನು ಕಡಿಯಲು ಪ್ರಾರಂಭಿಸಿೆ. ವಿಷಯ ತಿಳಿದು ಸ್ಥಳಕ್ಕೆ ಬಂದು ಪ್ರಶ್ನಿಸಿದ ಸ್ಥಳೀಯರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಅರಣ್ಯ ಇಲಾಖೆ ಕೆಲಸ ಸ್ಥಗಿತಗೊಳಿಸುವಂತೆ ಹೇಳಿದ ಮೇಲೂ ಯಾರನ್ನೂ ಲೆಕ್ಕಿಸದೆ ಈ ಕೃತ್ಯ ಎಸಗಿರುವುದು ಇದರ ಹಿಂದೆ ಪ್ರಭಾವಿಗಳ ಕೈವಾಡವಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
