ಓಬಿಸಿ ವರ್ಗದ ನಿಗಮಗಳಿಗೆ ಅನುದಾನ ಕಡಿತ: ಬಿಜೆಪಿ ಪ್ರತಿಭಟನೆ
– ಬಿಜೆಪಿ ಓಬಿಸಿ ಮೋರ್ಚಾ ಚಿಕ್ಕಮಗಳೂರು ವತಿಯಿಂದ ಪ್ರತಿಭಟನೆ
– ಹೊಸ ಅನುದಾನವಿಲ್ಲ,ಬಿಡುಗಡೆಯಾಗಿದ್ದ ಅನುದಾನಗಳಿಗೂ ಕತ್ತರಿ
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ನಲ್ಲಿ ಬಿಜೆಪಿ ಓಬಿಸಿ ಮೋರ್ಚಾದ ವತಿಯಿಂದ ಓಬಿಸಿ ಸಮುದಾಯದ ನಿಗಮಗಳಿಗೆ ಅನುದಾನ ತಡೆಹಿಡಿದಿರುವುದನ್ನು ಮತ್ತು ಬಿಡುಗಡೆಗೊಂಡ ಅನುದಾನವನ್ನು ಕಡಿತಗೊಳಿಸಿದ್ದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರದ ಸಚಿವರು,ಶಾಸಕರು ಜನಪರ ಅಭಿವೃದ್ಧಿ ಕಾರ್ಯಗಳನ್ನು ಕುಂಠಿತಗೊಳಿಸಿ ಕೇವಲ ತಮ್ಮ ವೈಯಕ್ತಿಕ ಲಾಭವನ್ನು ಹೆಚ್ಚುಗೊಳಿಸಿ ಸರ್ಕಾರದ ಸಾವಿರಾರು ಕೋಟಿ ರೂ. ಹಣವನ್ನು ಹಗಲು ದರೋಡೆ ಮಾಡುತ್ತಿದ್ದಾರೆ. ರಾಜ್ಯದ ಯಾವುದೇ ಭಾಗಗಳಿಗೆ ಹೋದರೆ ಯಾವುದೇ ಜಿಲ್ಲೆ ಅಥವಾ ತಾಲೂಕಿಗೆ ರಾಜ್ಯ ಕಾಂಗ್ರೇಸ್ ಸರ್ಕಾರ ಅನುದಾನ ನೀಡಿಲ್ಲ ಕೇವಲ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸುವುದೇ ದೊಡ್ಡ ಸಾಧನೆಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳಿಂದ ಓಬಿಸಿ ಸಮುದಾಯಗಳಿಗೆ ದ್ರೋಹ: ಬಿ.ರಾಜಪ್ಪ
ಹಿಂದುಳಿದ ವರ್ಗವೆಂದು ಅಧಿಕಾರ ಹಿಡಿದ ಮುಖ್ಯಮಂತ್ರಿಗಳು ಹಿಂದುಳಿದ ಸಮುದಾಯಕ್ಕೆ ದ್ರೋಹವೆಸಗಿದ್ದಾರೆ, ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಯ ನಿರೀಕ್ಷೆಯಲ್ಲಿದ್ದ ಬಹಳ ನಿರಾಶೆಯುಂಟಾಗಿದೆ. ರಾಜ್ಯದ ಮುಖ್ಯಮಂತ್ರಿಗಳು ರಾಜಕೀಯ ಮತ್ತು ಆರ್ಥಿಕ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ,ಒಂದೆಡೆ ಗ್ಯಾರಂಟಿಗಳಿಗೆ ಹಣ ಒಟ್ಟುಗೂಡಿಸುವಲ್ಲಿ ಮುಖ್ಯಮಂತ್ರಿಗಳು ವಿಫಲವಾದರೆ ಇನ್ನೊಂದೆಡೆ ಸ್ವಪಕ್ಷೀಯರೇ ಅಧಿಕಾರದಿಂದ ಕೆಳಗಿಳಿಸಲು ಮುಂದಾಗಿದ್ದಾರೆ. ಇದೇ ಕಾರಣದಿಂದಾಗಿ ಅಧಿಕಾರಿಗಳ ಸಭೆ ನಡೆಸದೇ ಕೇವಲ ಅಧಿಕಾರಿಗಳಿಗೆ ಹಣ ಸಂಗ್ರಹಿಸಲು ಸೂಚನೆ ನೀಡಲಾಗಿದೆ ಎಂದು ರಾಜ್ಯ ಓಬಿಸಿ ಮೋರ್ಚಾ ಕಾರ್ಯದರ್ಶಿ ಬಿ.ರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು.
