ಕರಾವಳಿ ಟಾಪ್ ನ್ಯೂಸ್
– ಕುಂದಾಪುರ: ಮನೆಯಂಗಳದಲ್ಲಿ ಚಿರತೆ ಪ್ರತ್ಯಕ್ಷ!
– ಉಡುಪಿ: ಬೈಕ್ ವೀಲಿಂಗ್ :ಎಫ್ ಐ ಆರ್ ದಾಖಲು
– ಕಾಸರಗೋಡು: ಎನ್‌ಐಎ ತಂಡದಿಂದ ಉಗ್ರಗಾಮಿಯ ಬಂಧನ
– ಮಂಗಳೂರು: ಸಾಲಗಾರನಿಗೆ ಆತ್ಮಹತ್ಯೆ ಪ್ರಚೋದನೆ, ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಅರೆಸ್ಟ್
NAMMUR EXPRESS NEWS
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ ಮಾಡುತ್ತಿದ್ದ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ತಾಲೂಕಿನ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಡಾಡಿ-ಮತ್ಯಾಡಿ ಗ್ರಾಮದ ಕರಿನಕಟ್ಟೆ ರಾಮದಾಸ ಭಂಡಾರಿ ಎಂಬವರು ಮನೆಯ ಅಂಗಳದಲ್ಲಿ ಚಿರತೆ ಸಂಚಾರ ನಡೆಸಿದ್ದು, ಇದ್ದರಿಂದ ಮನೆಯವರು, ನೆರೆ-ಹೊರೆಯವರು ಆತಂಕಗೊಂಡಿದ್ದಾರೆ. ಪದೇ ಇಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಇದರ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
* ಉಡುಪಿ: ಬೈಕ್ ವೀಲಿಂಗ್ : ಸವಾರನ ವಿರುದ್ಧ ಎಫ್ ಐ ಆರ್
ಉಡುಪಿ: ದ್ವಿಚಕ್ರ ವಾಹನ ಸವಾರನೊರ್ವ ತನ್ನ ವಾಹನದ ಮುಂದಿನ ಚಕ್ರವನ್ನು ಮೇಲೆಕ್ಕೆತ್ತಿ ವೀಲಿಂಗ್ ಮಾಡಿರುವ ಘಟನೆ ಅಂಬಲಪಾಡಿ ಬುಲೆಟ್ ಶೋರೂಮ್ ಎದುರುಗಡೆ ಸರ್ವಿಸ್ ರಸ್ತೆಯಲ್ಲಿ ನಡೆದಿದ್ದು, ಇದೀಗ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ನಿರೀಕ್ಷಿತ್, ತನ್ನ ದ್ವಿಚಕ್ರ ವಾಹನದ ಮುಂದಿನ ಚಕ್ರವನ್ನು ಮೇಲೆಕ್ಕೆತ್ತಿ ವೀಲಿಂಗ್ ಮಾಡಿ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಾಲನೆ ಮಾಡಿದ್ದು, ಸವಾರನ ವಿರುದ್ಧ ಉಡುಪಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಕಾಸರಗೋಡು: ಎನ್‌ಐಎ ತಂಡದಿಂದ ಉಗ್ರಗಾಮಿಯ ಬಂಧನ
ಕಾಸರಗೋಡು: ಉಗ್ರಗಾಮಿ ಪ್ರಕರಣವೊಂದಕ್ಕೆ ಸಂಬಂಧಿಸಿ ತಲೆಮರೆಸಿಕೊಂಡು ಹೊಸದುರ್ಗ ಪಡನ್ನದ ರಹಸ್ಯ ಕೇಂದ್ರವೊಂದರಲ್ಲಿ ನೆಲೆಸಿದ್ದ ಉಗ್ರಗಾಮಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿದ ಘಟನೆ ನಡೆದಿದೆ. ಪಶ್ಚಿಮ ಬಂಗಾಲ ನಿವಾಸಿ ಎಂ.ಬಿ. ಶಾಬ್ ಶೇಖ್ (32) ಬಂಧಿತ. ಈತ ಬಾಂಗ್ಲಾ ದೇಶದ ಪ್ರಜೆಯಾಗಿರುವ ಶಂಕೆಯನ್ನು ತನಿಖಾ ತಂಡ ವ್ಯಕ್ತಪಡಿಸಿದ್ದು, ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಬಂಧಿತನು ಅಸ್ಸಾಂನಲ್ಲಿ ಇತ್ತೀಚೆಗೆ ನಡೆದ ಉಗ್ರಗಾಮಿ ಪ್ರಕರಣವೊಂದರ ಆರೋಪಿಯಾಗಿದ್ದಾನೆ. ಆತನ ವಿರುದ್ಧ ಯು.ಎ.ಪಿ.ಎ. ಪ್ರಕಾರ ಪ್ರಕರಣ ದಾಖಲಿಸಲಾಗಿದ್ದು, ಬಳಿಕ ಆತ ಅಸ್ಸಾಂನಿಂದ ಪರಾರಿಯಾಗಿ ಕೇರಳಕ್ಕೆ ಬಂದಿದ್ದ. ಈ ಮಾಹಿತಿ ತನಿಖಾ ತಂಡಕ್ಕೆ ಲಭಿಸಿತ್ತು. ಆತನ ಪತ್ತೆಗಾಗಿ ಅಸ್ಸಾಂ ಪೊಲೀಸರು ಹಾಗೂ ಪ್ರಕರಣದ ವಿಶೇಷ ತನಿಖೆ ನಡೆಸುತ್ತಿರುವ ಎನ್‌ಐಎ ಕೂಡ ಲುಕೌಟ್ ನೋಟಿಸ್ ಜಾರಿಗೊಳಿಸಿತ್ತು.ಆರೋಪಿಯನ್ನು ಈಗ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
* ಮಂಗಳೂರು: ಸಾಲಗಾರನಿಗೆ ಆತ್ಮಹತ್ಯೆ ಪ್ರಚೋದನೆ, ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಅರೆಸ್ಟ್
ಮಂಗಳೂರು: ನಗರದಲ್ಲಿ ಸಾಲಗಾರನೋರ್ವನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದಲ್ಲಿ ನಗರದ ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಬ್ಯಾಂಕ್‌ನಿಂದ ಸಾಲ ಪಡೆದಿದ್ದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುಟಿನ್ಹೋ ಪದವಿನ ನಿವಾಸಿ ಮನೋಹರ್ ಪಿರೇರಾ(47) ಅವರು ಮಂಗಳವಾರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ತನ್ನ ಆತ್ಮಹತ್ಯೆಗೆ ಬ್ಯಾಂಕ್ ಅಧ್ಯಕ್ಷರೇ ಹೊಣೆ ಎಂಬುದಾಗಿ ವೀಡಿಯೋ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಅನಿಲ್ ಲೋಬೋರನ್ನು ಬಂಧಿಸಲಾಗಿದೆ. ಮನೋಹರ್ ಪಿರೇರಾ ತನ್ನ ತಮ್ಮ ಜೀವನ್ ಪಿರೇರಾ ಅವರೊಂದಿಗೆ ವಾಸವಿದ್ದರು. ಮನೋಹರ್ 10 ವರ್ಷಗಳ ಹಿಂದೆ ಬ್ಯಾಂಕ್‌ನಿಂದ ಸಾಲ ಪಡೆದು ಮನೆ ಖರೀದಿಸಿದ್ದರು. ಮೆಲ್ಕಮ್ ಅವರು ತಮ್ಮ ಮನೋಹರ್ ಪಿರೇರಾ ಅವರ ಮೂಲಕ ಸಾಲದ ಕಂತು ಪಾವತಿಸುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಪಾವತಿಸಿರಲಿಲ್ಲ. ಹಾಗಾಗಿ ಬ್ಯಾಂಕ್‌ನವರು ಎರಡು ವರ್ಷಗಳ ಹಿಂದೆ ಮನೆಯನ್ನು ಜಫ್ತಿ ಮಾಡಿದ್ದರು. ಇದರಿಂದಾಗಿ ಮನೋಹರ್ ಮಾನಸಿಕವಾಗಿ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಅಲ್ಲದೆ ಎರಡು ಬಾರಿ ಹೃದಯಾಘಾತಕ್ಕೂ ಒಳಗಾಗಿದ್ದರು. 2023ರ ಫೆಬ್ರವರಿಯಲ್ಲಿ ಸಿಸ್ಟರ್ ಕ್ರಿಸ್ಟಿನ್ ಅವರು ಅವರ ಚಾರಿಟಿಯಿಂದ 15 ಲ.ರೂ.ಗಳನ್ನು ಮನೋಹರ್ ಅವರ ಬ್ಯಾಂಕ್ ಖಾತೆಗೆ ಕಳುಹಿಸಿದ್ದರು. ಮನೋಹರ್ ಅವರು ಬ್ಯಾಂಕ್ ಅಧ್ಯಕ್ಷರೊಂದಿಗೆ ಮಾತನಾಡಿ ಸೆಲ್ಫ್ ಚೆಕ್ ನೀಡಿದ್ದರು. ಅನಂತರ ಜಪ್ತಿ ಮಾಡಿದ ಮನೆಯನ್ನು 6 ತಿಂಗಳ ಹಿಂದೆ ವಾಪಸ್ ನೀಡಲಾಗಿತ್ತು. ಆದರೆ 15 ಲ.ರೂ.ಗಳಲ್ಲಿ 9 ಲ.ರೂ.ಗಳನ್ನು ಅಧ್ಯಕ್ಷರು ಸೆಲ್ಫ್ ಚೆಕ್ ವಿತ್‌ಡ್ರಾ ಮಾಡಿದ್ದಾರೆ. ಹಾಗಾಗಿ ಪೂರ್ಣವಾಗಿ ಸಾಲ ಮರುಪಾವತಿಯಾಗಲಿಲ್ಲ ಎನ್ನಲಾಗಿದೆ.