ಜೆಡಿಎಸ್ ಯುವರಾಜ ನಿಖಿಲ್ ಕುಮಾರಸ್ವಾಮಿ ಶೃಂಗೇರಿ ಕ್ಷೇತ್ರ ಪ್ರವಾಸ
* ಇವರ ಕುರ್ಚಿ ಕಿತ್ತಾಟ ನೋಡಿ ಜನ ಬೇಸತ್ತು ಹೋಗಿದ್ದಾರೆ
* ಸರ್ಕಾರಕ್ಕೆ ಆತ್ಮವಿಶ್ವಾಸವಿಲ್ಲ,ಮೂರ ವರ್ಷದಲ್ಲಿ ಎಷ್ಟು ಸಾಧ್ಯವೋ ಅಷ್ಟು ಲೂಟಿಯಾಗಿದೆ
NAMMMUR EXPRESS NEWS
ಕೊಪ್ಪ: ಜಿಲ್ಲಾ ಪಂಚಾಯತ್, ತಾಲೂಕು
ಪಂಚಾಯತ್ ಚುನಾವಣೆ ಮಾಡಿ ಎಂದು ಕೋರ್ಟ್ ಸೂಚನೆ ನೀಡಿದೆ. ಆದರೆ ಚುನಾವಣೆ ಮಾಡಲು ಸರ್ಕಾರಕ್ಕೆ ಆತ್ಮವಿಶ್ವಾಸವೇ ಇಲ್ಲ. ಮೂರು ವರ್ಷ ಎಷ್ಟು ಆಗುತ್ತದೋ ಅಷ್ಟು ದುಡ್ಡು ಮಾಡಿಕೊಳ್ಳಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಮುಂದೆ ಅದೇ ದುಡ್ಡಲ್ಲಿ ಮತ್ತೆ ಚುನಾವಣೆ ಮಾಡಲು ಸಿದ್ಧರಾಗಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.
ಬಾಳೆಹೊನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಲ್ಲಿ ಅದೆಂತದೋ ಸಾಧನಾ ಸಮಾವೇಶ ಮಾಡಿದ್ದರು. ರಾಜ್ಯದಲ್ಲಿ ಏನು ಸಾಧನೆ ಆಗಿದೆ ಎಂದು ಕಾಂಗ್ರೆಸ್ಸಿಗರೇ ಉತ್ತರ ಕೊಡಬೇಕಿದೆ. ಸಿಎಂ ಕುರ್ಚಿ ಬಗ್ಗೆ ಯಾವುದೇ ಒಳ ಒಪ್ಪಂದ ಇಲ್ಲ, ನಾನೇ ಐದು ವರ್ಷ ಸಿಎಂ ಎನ್ನುತ್ತಾರೆ. ರಾಜ್ಯದ ಅಭಿವೃದ್ಧಿ, ಜನರ ಕಷ್ಟಕ್ಕಿಂತ ಇವರಿಗೆ ಸಿಎಂ ಕುರ್ಚಿ ಕಿತ್ತಾಟವೇ ಮುಖ್ಯವಾಗಿದೆ ಎಂದರು.
ಸಿಎಂ ಕುರ್ಚಿ ಉಳಿಸಿಕೊಳ್ಳಬೇಕು, ಡಿಸಿಎಂಗೆ ಸಿಎಂ ಕುರ್ಚಿ ಬೇಕು, ಮತ್ತೊಬ್ಬರಿಗೆ ಅಧ್ಯಕ್ಷರ ಕುರ್ಚಿ ಮೇಲೆ ಕಣ್ಣು. ಈ ಕುರ್ಚಿ ಕಿತ್ತಾಟದಲ್ಲಿ ರಾಜ್ಯದ ಜನ ಬೇಸತ್ತು ಹೋಗಿದ್ದಾರೆ. ಎರಡು ವರ್ಷಗಳ ಇವರ ಆಡಳಿತದ ವೈಖರಿ ನೋಡಿ ಜನ ಚರ್ಚೆ ಮಾಡಲು ಶುರು ಮಾಡಿದ್ದಾರೆ ಎಂದು ನಿಖಿಲ್ ಕುಮಾರ ಸ್ವಾಮಿ ಆರೋಪಿಸಿದ್ದಾರೆ.
ಬೆಳಿಗ್ಗೆ ಎನ್.ಆರ್ ಪುರದ ಹೆಚ್.ಟಿ ರಾಜೇಂದ್ರ ರವರ ಮನೆಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು ನಂತರ ಬಾಳೆಹೊನ್ನೂರಿನ ಕಾರ್ಯಕರ್ತರೊಂದಿಗೆ ಸಭೆಗೆ ಬಂದು ಕಾಡಾನೆಯಿಂದ ಮಹಿಳೆ ಮೃತಪಟ್ಟ ಕುರಿತು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ನಂತರ ಕೊಪ್ಪ ಎಂ.ಎಸ್ ದ್ಯಾವೇಗೌಡ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ, ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಸೇರಿದಂತೆ ಕ್ಷೇತ್ರದ ಎಲ್ಲಾ ಜೆಡಿಎಸ್ ಪದಾಧಿಕಾರಿಗಳು,ಕಾರ್ಯಕರ್ತರು ಹಾಜರಿದ್ದರು.
