Categories
ಚಿಕ್ಕಮಗಳೂರು

ಬಾಳೆಹೊನ್ನೂರು ಕಾಡಾನೆ ದಾಳಿಗೆ ಮಹಿಳೆ ಸಾವು ಪ್ರಕರಣ

ಬಾಳೆಹೊನ್ನೂರು ಕಾಡಾನೆ ದಾಳಿಗೆ ಮಹಿಳೆ ಸಾವು ಪ್ರಕರಣ

* ಅರಣ್ಯ ಇಲಾಖೆ,ಸಚಿವರು,ಶಾಸಕರ ವಿರುದ್ಧ ಜನರ ಪ್ರತಿಭಟನೆ
* ಅರಣ್ಯ ಇಲಾಖೆ ಕಛೇರಿ ಎದುರು ಪ್ರತಿಭಟನೆ, ಅರ್ಧಗಂಟೆಗೂ ಹೆಚ್ಚುಕಾಲ ರಸ್ತೆತಡೆ
* ಪ್ರತಿಭಟನಾ ಸ್ಥಳಕ್ಕೆ ಬಂದ ಜೆಡಿಎಸ್ ರಾಜ್ಯ ಯುವ ನಾಯಕ ನಿಖಿಲ್ ಕುಮಾರಸ್ವಾಮಿ

NAMMMUR EXPRESS NEWS
ಬಾಳೆಹೊನ್ನೂರು: ತೋಟದ ಕೆಲಸ ಮುಗಿಸಿ ಹಿಂತಿರುತ್ತಿದ್ದ ಕೂಲಿ ಕಾರ್ಮಿಕ ಮಹಿಳೆ ಮೇಲೆ ಕಾಡಾನೆ ಏಕಾಏಕಿ ದಾಳಿ ಮಾಡಿ ಮಹಿಳೆ ಅನಿತಾ ಎಂಬುವರು ಮೃತಪಟ್ಟಿದ್ದ ಘಟನೆಗೆ ಸಂಬಂಧಿಸಿದಂತೆ. ಇಂದು ಬೆಳಿಗ್ಗೆ ಮಲೆನಾಡು ನಾಗರೀಕ ರೈತ ಹಿತರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರದ ವತಿಯಿಂದ ಕರೆನೀಡಲಾಗಿದ್ದ ಪ್ರತಿಭಟನೆಯಲ್ಲಿ ನೂರಾರು ಜನ ಸೇರಿ ಅರಣ್ಯ ಇಲಾಖೆ,ಅರಣ್ಯ ಸಚಿವರು,ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದರು. ಇದೇ ಸಂದರ್ಭದಲ್ಲಿ ಅರ್ಧಗಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಸಿದ್ದು,ಸಂಚಾರ ಬಂದ್ ಆಗಿತ್ತು.
ಪ್ರತಿಭಟನೆಯಲ್ಲಿ ದಿನೇ ದಿನೇ ಕ್ಷೇತ್ರದಲ್ಲಿ ಮನುಷ್ಯರ ಮೇಲಾಗುತ್ತಿರುವ ಕಾಡು ಪ್ರಾಣಿಗಳ ದಾಳಿ ಹಾಗೂ ಅರಣ್ಯ ಸಚಿವರ ಜನವಿರೋಧಿ ಆದೇಶದ ವಿರುದ್ಧ ಮತ್ತು ಕ್ಷೇತ್ರದ ಶಾಸಕರು,ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಜನ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಕೆಲಕಾಲ ಪ್ರತಿಭಟನಾಕಾರರು ಹಾಗೂ ಆರಣ್ಯ ಇಲಾಖೆ ಅಧಿಕಾರಿಗಳ ನಡುವೆ ವಾಕ್ಸಮರ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರ ಡಿ.ಎನ್ ಜೀವರಾಜ್ ಮಾತನಾಡಿ ಕ್ಷೇತ್ರದಲ್ಲಿ ಕಾಡಾನೆ ದಾಳಿಯಿಂದ ಇಷ್ಟೆಲ್ಲ ಸಾವಾಗಿದ್ದರೂ,ಅನಾಹುತಗಳಾಗಿದ್ದರೂ ಕ್ಷೇತ್ರದ ಶಾಸಕರಾಗಲಿ,ಅರಣ್ಯ ಸಚಿವರಾಗಲೀ,ಸರ್ಕಾರವಾಗಲೀ ಏನೂ ಕ್ರಮಕೈಗೊಂಡಿಲ್ಲ. ಒಂದು ಚೆಕ್ ಬರೆದಿಟ್ಟುಕೊಂಡು ಮಾಧ್ಯಮದವರ ಮುಂದೆ ಸಂತ್ರಸ್ತ ಕುಟುಂಬದವರಿಗೆ ಕೊಟ್ಟು ನಗುತ್ತಾರೆ. ಶಾಸಕರಿಗೆ ಹಾಗೂ ಸರ್ಕಾರಕ್ಕೆ ಭಾವನೆಯೇ ಇಲ್ಲವಾಯಿತಾ ಎಂಬ ಪ್ರಶ್ನೆ ತಲೆದೂರಿದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಏನು ಮಾತನಾಡುತ್ತಿದ್ದಾರೆ ಯಾಕೆ ಎಂಬುದೇ ಅರ್ಥವಾಗುತ್ತಿಲ್ಲ, ಒಮ್ಮೆ ಒತ್ತುವರಿ ತೆರವು ಅಂತಾರೆ,ಹುಲಿ ಉಗುರು ಅಂತಾರೆ, ಅರಣ್ಯಕ್ಕೆ ಜಾನುವಾರುಗಳಿಗೆ ಪ್ರವೇಶ ನಿರ್ಬಂಧ ಅಂತ ಆದೇಶ ಮಾಡ್ತಾರೆ ಇದ್ಯಾವುದಕ್ಕೂ ಅರ್ಥವಿಲ್ಲ, ಇಂತಹ ಬಾಲಿಷ ಹೇಳಿಕೆ ನೀಡಿ ಮಲೆನಾಡಿನ ಜನರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ.ಮಲೆನಾಡ ಜನ ಕಾಡನ್ನು ದೇವರೆಂದು ಪೂಜಿಸುತ್ತಾರೆ. ಇಲ್ಲಿ ಬೆಳೆ ಬೆಳೆದರೆ ಮಾತ್ರ ಅಲ್ಲಿ ನಿಮಗೆ ಊಟ.ಅರಣ್ಯ ಸಚಿವರಾಗಲಿ,ಐಎಫ್‌ಎಸ್ ಅಧಿಕಾರಿಗಳು ದುಡ್ಡು ತಿನ್ನಲ್ಲ ಅವರು ರೈತ ಬೆಳೆದ ಅನ್ನವನ್ನೇ ತಿನ್ನೋದು ಹಾಗಾಗಿ ಅನ್ನ ಬೆಳೆಯೋ ರೈತರಿಗೆ ತೊಂದರೆ ಕೊಡಬೇಡಿ. ರೈತರನ್ನು ನೀವುಗಳು ಸಾಕುವುದಾದರೇ ನೀವು ಹೇಳಿದಂತೆ ಕೇಳ್ತೇವೆ ಅದನ್ನ ಬಿಟ್ಟು ಮನುಷ್ಯನ ಜೀವದ ಜೊತೆ ಚೆಲ್ಲಾಟವಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

* ಪ್ರತಿಭಟನಾ ಸ್ಥಳಕ್ಕೆ ಬಂದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ
ಬಾಳೆಹೊನ್ನೂರಿನ ಪ್ರತಿಭಟನಾ ಸ್ಥಳಕ್ಕೆ ಕ್ಷೇತ್ರದ ಪ್ರವಾಸದಲ್ಲಿದ್ದ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಭೇಟಿ ನೀಡಿದರು. ಕಾಡು ಪ್ರಾಣಿಗಳಿಂದ ಮಲೆನಾಡಿನಲ್ಲಿ ತುಂಬಾ ನಷ್ಟ,ಸಾವು ನೋವುಗಳು ಸಂಭವಿಸಿದೆ ಇನ್ನಾದರೂ ಜನಪ್ರತಿನಿಧಿಗಳು,ಸರ್ಕಾರ ಎಚ್ಚೆತ್ತುಕೊಳ್ಳಬೇಕು,ಮಲೆನಾಡ ಜನರ ಜೀವನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ,ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಸೇರಿದಂತೆ ಹಲವರು ಜೊತೆಗಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.