ಚಿಕ್ಕಮಗಳೂರು ಟಾಪ್ ನ್ಯೂಸ್
* ಕಾಫಿನಾಡು ಮಳೆಯ ಅಬ್ಬರಕ್ಕೆ ದತ್ತಪೀಠ ರಸ್ತೆಯಲ್ಲಿ ಭೂ ಕುಸಿತ
* ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಸಾಗುವಳಿ: ಆರೋಪಿಯ ಬಂಧನ
NAMMMUR EXPRESS NEWS
* ಕಾಫಿನಾಡು ಮಳೆಯ ಅಬ್ಬರಕ್ಕೆ ದತ್ತಪೀಠ ರಸ್ತೆಯಲ್ಲಿ ಭೂ ಕುಸಿತ
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಭಾರೀ ಮಳೆಯಾಗುತ್ತಿದ್ದು ದತ್ತಪೀಠ ಮಾರ್ಗದ ಕವಿಕಲ್ ಗಂಡಿ ಬಳಿ ಭೂ ಕುಸಿತ ಸಂಭವಿಸಿದೆ. ಮಣ್ಣಿನ ಜೊತೆಗೆ ಸಣ್ಣ ಬಂಡೆಗಳು ರಸ್ತೆ ಮೇಲೆ ಜರುಗಿ ಬಿದ್ದಿವೆ. ಇದರಿಂದ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲವಾದರೂ ಈ ಭಾಗದಲ್ಲಿ ಗಾಳಿ ಮಳೆ ಹೆಚ್ಚಾದರೆ ಮತ್ತಷ್ಟು ಭೂಮಿ ಕುಸಿಯುವ ಸಂಭವ ಹೆಚ್ಚಾಗಿದೆ. ಅಲ್ಲದೇ ವೀಕೆಂಡ್ ಹಿನ್ನೆಲೆಯಲ್ಲಿ ಸಹಜವಾಗಿ ಸಾವಿರಾರು ಪ್ರವಾಸಿಗರು ಗಿರಿ ಪ್ರದೇಶದತ್ತ ಬರುತ್ತಿದ್ದಾರೆ. ಹೀಗಾಗಿ ಗಿರಿ ರಸ್ತೆಯಲ್ಲಿ ಒತ್ತಡವು ಹೆಚ್ಚಾಗುದರಿಂದ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕಿದೆ. ಜಿಲ್ಲೆಗೆ ನಿನ್ನೆ ಹಾಗೂ ಇಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು ಇಂದು ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ.
* ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಸಾಗುವಳಿ: ಆರೋಪಿಯ ಬಂಧನ
ಕಡೂರು: ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಸಾಗುವಳಿ ನಡೆಸಿದ ಆರೋಪದ ಮೇಲೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗಾಳಿ ಗುತ್ತಿ ಗ್ರಾಮದ ರಮೇಶ್ ನಾಯ್ಕ ಎಂಬುವವನನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತನಿಂದ ಸಾಗುವಳಿ ಮಾಡಲು ಬಳಸಿದ್ದ ಟ್ರಾಕ್ಟರ್ ಹಾಗೂ ನೇಗಿಲು, ಬೊಲೆರೋ ಪಿಕಪ್ ವಾಹನವನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ತಾಲ್ಲೂಕಿನ ಬೀರೂರು ಹೋಬಳಿ ಎಮ್ಮೆದೊಡ್ಡಿಯ ಸರ್ವೆ ನಂ.70ರಲ್ಲಿ ಸೆಕ್ಷನ್-4ರ (ಎಮ್ಮೆದೊಡ್ಡಿ ಹುಲಿ ಸಂರಕ್ಷಿತ ಪ್ರದೇಶ) ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಕಡೂರು ಘಟಕದಿಂದ ಬೆಳೆಸಲಾದ ನೆಡುತೋಪು ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಮುಳ್ಳುಕಂಟಿಗಳನ್ನು ತೆಗೆದಿರುವ ಆರೋಪಿ, ಅಕ್ರಮ ಸಾಗುವಳಿ ನಡೆಸಿದ್ದ. 1985ರಿಂದ ನೀಲಗಿರಿ ನೆಡುತೋಪು ಬೆಳೆಸುತ್ತಿದ್ದ ಇಲ್ಲಿ, 2010ರಲ್ಲಿ ಅಂತಿಮ ಕಟಾವು ಮಾಡಲಾಗಿತ್ತು. 2013ರಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವು ನೆಡುತೋಪನ್ನು ಪುನಃ ನಿರ್ಮಾಣ ಮಾಡಲು ಮುಂದಾದಾಗ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯು ಅರಣ್ಯ ಸಂಪತ್ತಿಗೆ ಹಾನಿ ಮಾಡಿದ್ದು, ಅಕ್ರಮವಾಗಿ ಸಾಗುವಳಿ ಮಾಡಿದ ಪ್ರದೇಶವನ್ನು ಪುನಃ ವಶಕ್ಕೆ ಪಡೆಯಲಾಗಿದೆ. ಬಂಧಿತ ರಮೇಶ ನಾಯ್ಕನನ್ನು ಕಡೂರು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಕಡೂರು ವಲಯ ಅರಣ್ಯಾಧಿಕಾರಿ ಹರೀಶ್ ಎಂ.ಆರ್ ತಿಳಿಸಿದ್ದಾರೆ.
