ಬೀದಿ ನಾಯಿಗಳಿಗೆ ಆಹಾರ ಹಾಕದಂತೆ ನಗರಸಭೆ ಆದೇಶ
* ಹೆಚ್ಚಾಯ್ತು ಬೀದಿ ನಾಯಿ ಹಾವಳಿ,ಆಹಾರ ಹಾಕಿದರೆ ಕಠಿಣ ಕ್ರಮ
* ಬೆಂಗಳೂರಲ್ಲಿ ಬಿರಿಯಾನಿ ಭಾಗ್ಯ, ಕಾಫಿನಾಡಲ್ಲಿ ಉಪವಾಸ ಭಾಗ್ಯ ಎಂದು ಆಕ್ರೋಶ
NAMMMUR EXPRESS NEWS
ಚಿಕ್ಕಮಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನೇದಿನೆ ಹೆಚ್ಚಾಗುತ್ತಿರುವುದರಿಂದ ನಗರಸಭೆ ಹೊಸ ನಿಯಮವೊಂದನ್ನು ಜಾರಿಗೊಳಿಸಿದೆ. ಬೀದಿ ನಾಯಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ಹಾಕುವವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಅಧಿಕೃತ ಪ್ರಕಟಣೆ ಇದೀಗ ಹೊರಬಿದ್ದಿದೆ.
ನಗರಸಭೆಯ ಪ್ರಕಾರ, ಮನೆಗಳಲ್ಲಿ ಉಳಿದ ಆಹಾರವನ್ನು ಬೀದಿ ನಾಯಿಗಳಿಗೆ ಹಾಕುವುದು ಕಾಯ್ದೆಗೆ ವಿರುದ್ಧವಾಗಿದ್ದು, ಇದು ನಾಯಿಗಳ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ನಾಯಿಗಳ ಸಂಖ್ಯೆ ಹೆಚ್ಚಾದಂತೆ ಜನರ ಮೇಲೆ ದಾಳಿ ಪ್ರಕರಣಗಳೂ ಹೆಚ್ಚಾಗಿವೆ. ಇದರಿಂದ ಸಾರ್ವಜನಿಕರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ.
ಈ ಹಿನ್ನಲೆಯಲ್ಲಿ, ನಗರಸಭೆ ಸುಪ್ರೀಂ ಕೋರ್ಟ್ನ ಮಾರ್ಗದರ್ಶನದಂತೆ ಕಾನೂನು ಕ್ರಮ ಜಾರಿಗೊಳಿಸಲು ನಿರ್ಧರಿಸಿದೆ. ಸಾರ್ವಜನಿಕರು ಇನ್ನ ಮುಂದೆ ನಾಯಿಗಳಿಗೆ ಆಹಾರ ಹಾಕುತ್ತಿರುವುದು ಕಂಡುಬಂದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ನಗರಸಭೆ ಪ್ರಕಾರ, ಸಾಕಿದ ನಾಯಿಗಳ ಜವಾಬ್ದಾರಿ ಮಾಲೀಕರದ್ದೇ ಆಗಿದ್ದು, ಅವರು ತಮ್ಮ ನಾಯಿಗಳನ್ನು ಬಿಗಿಯಾಗಿ ಕಟ್ಟಿಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಅವ್ಯವಸ್ಥೆ ಸೃಷ್ಟಿಯಾಗದಂತೆ ಗಮನಹರಿಸಬೇಕಾಗಿದೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕುವ ನಿಷೇಧ ವಿಧಿಸಿರುವುದು ಪ್ರಸ್ತುತ ಚರ್ಚೆಗೆ ಕಾರಣವಾಗಿದೆ. ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳಿಗೆ “ಬಿರಿಯಾನಿ ಭಾಗ್ಯ” ಸಿಕ್ಕಿದ್ದರೆ, ಇಲ್ಲಿಯ ನಾಯಿಗಳಿಗೆ ಉಪವಾಸ ಭಾಗ್ಯ ಎಂಬ ವಾಗ್ದಾಳಿಯೂ ನಡೆಯುತ್ತಿದೆ.