ಚಿಕ್ಕಮಗಳೂರು ಟಾಪ್ ನ್ಯೂಸ್
* ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಬದಿಯ ಗ್ರಿಲ್‌ಗೆ ಗುದ್ದಿ ಸವಾರ ಸಾವು
* ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶಕ್ಕೆ
* ಅಕ್ರಮ ಸಂಬಂಧ ಹಿನ್ನೆಲೆ ಮಹಿಳೆಯ ಪತಿಯನ್ನೇ ಕೊಂದ ಯುವಕ
NAMMMUR EXPRESS NEWS
* ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಬದಿಯ ಗ್ರಿಲ್‌ಗೆ ಗುದ್ದಿ ಸವಾರ ಸಾವು
ಕಡೂರು: ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗ್ರಿಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಶನಿವಾರ ರಾತ್ರಿ ಕಡೂರು ತಾಲ್ಲೂಕು ಮಚ್ಚೇರಿ ಬಳಿಯ ನಾಯಿಸಾಡ್ಲಿ ಎಂಬಲ್ಲಿ ನಡೆದಿದೆ.
ಕಡೂರು ಕೋಟೆ ಬಡಾವಣೆಯ ನಿವಾಸಿ ಉಮೇಶ್ (40) ಮೃತಪಟ್ಟವರು.
ಕುಂತಿಹೊಳೆಯಿಂದ ಕಡೂರಿಗೆ ಬರುತ್ತಿದ್ದಾಗ ಈ ಘಟನೆ ನಡೆದಿದ್ದು, ತಲೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವ ಉಂಟಾದ ಪರಿಣಾಮ ಉಮೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇವರು ಬೀರೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶಕ್ಕೆ
ಬಿರೂರು: ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 10 ಸಾವಿರ ಮೌಲ್ಯದ 6 ಲೀಟರ್ ಮದ್ಯವನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಬೀರೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಗೋವಾದಿಂದ ಯಶವಂತಪುರಕ್ಕೆ ಕಡೂರು ಮಾರ್ಗವಾಗಿ ತೆರಳುತ್ತಿದ್ದ ವಾಸ್ಕೋಡಿಗಾಮ ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 10 ಸಾವಿರ ಮೌಲ್ಯದ 6 ಲೀಟರ್ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ನಿರೀಕ್ಷಕ ಎಲ್ ಸಿ ಸಂದೀಪ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, ಮದ್ಯವನ್ನು ವಶಪಡಿಸಿಕೊಂಡಿದ್ದು, ಸಿಬ್ಬಂದಿಗಳಾದ ನಾಗೇಂದ್ರ, ಮಂಜುಳಾ, ಉಮೇಶ್, ಈರಪ್ಪ, ಅಶೋಕ್ ಹಾಗೂ ಇನ್ನಿತರರು ಕಾರ್ಯಚರಣೆಯಲ್ಲಿದ್ದರು.
* ಅಕ್ರಮ ಸಂಬಂಧ ಹಿನ್ನೆಲೆ ಮಹಿಳೆಯ ಪತಿಯನ್ನೇ ಕೊಂದ ಯುವಕ
ಕಡೂರು: ತಾಲೂಕಿನಲ್ಲಿ ವಿಚಿತ್ರ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. 55 ವರ್ಷದ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ 33 ವರ್ಷ ವಯಸ್ಸಿನ ಯುವಕನೊಬ್ಬ, ಮಹಿಳೆಯ 60 ವರ್ಷದ ಪತಿಯನ್ನು ಸ್ನೇಹಿತರ ಜೊತೆಗೂಡಿ ಕೊಲೆ ಮಾಡಿ ಕಂಸಾಗರ ಗೇಟ್ ಬಳಿ ಸುಟ್ಟುಹಾಕಿದ್ದಾನೆ. ನಾಪತ್ತೆ ಪ್ರಕರಣ ತನಿಖೆ ನಡೆಸಿದ ಕಡೂರು ಪೊಲೀಸರಿಗೆ ವಾಸ್ತವ ಗೊತ್ತಾಗಿದ್ದು, ಯುವಕ ಪ್ರದೀಪ್ ಹಾಗೂ ಇತರ ಆರೋಪಿಗಳನ್ನು ಬಂಧಿಸಿದ್ದಾರೆ.
ಕಡೂರು ಪಟ್ಟಣದ ಕಂಸಾಗರ ಗೇಟ್ ಬಳಿ ಜೂನ್ 2 ರಂದು ಸಂಪೂರ್ಣ ಸುಟ್ಟು ಹೋಗಿ ಅಸ್ಥಿಪಂಜರದಂತಾಗಿದ್ದ ಶವ ಒಂದು ಪತ್ತೆಯಾಗಿತ್ತು. ಇದಕ್ಕೂ ಮುನ್ನ ನಾಪತ್ತೆ ಪ್ರಕರಣವೊಂದು ಕಡೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಇದರ ಜಾಡು ಹಿಡಿದ ಪೊಲೀಸರಿಗೆ ಕೊಲೆ ರಹಸ್ಯ ಗೊತ್ತಾಗಿದೆ.