ಶೃಂಗೇರಿ ಗಾಂಧಿ ಮೈದಾನದಲ್ಲಿ ಪಾರ್ಕಿಂಗ್ ಫ್ರೀ,ಕಸವೂ ಫ್ರೀ..!!
* ಗಾಂಧಿ ಮೈದಾನ ಪಟ್ಟಣ ಪಂಚಾಯ್ತಿಗೆ ಸೇರಲ್ಲ ಎಂದ ಡಿ.ಸಿ
* ವಾಹನ ಪಾರ್ಕಿಂಗ್ ಫ್ರೀ,ಕಸವೂ ಫ್ರೀ, ಮೈದಾನದಲ್ಲಿ ಸ್ವಚ್ಛತೆ ಮರೀಚಿಕೆ
NAMMMUR EXPRESS NEWS
ಶೃಂಗೇರಿ: ಪ್ರಸಿದ್ಧ ಯಾತ್ರಾ ಸ್ಥಳ,ಸದಾ ಪ್ರವಾಸಿಗರಿಂದ ತುಂಬಿರುವ ಪುಣ್ಯ ಕ್ಷೇತ್ರ ಶೃಂಗೇರಿ. ಹಲವಾರು ವರ್ಷಗಳಿಂದ ಕ್ಷೇತ್ರಕ್ಕೆ ಬರುವ ಪ್ರವಾಸಿಗರ ವಾಹನ ನಿಲುಗಡೆಗೆ ತಂಗಾ ನದಿಯ ಪಕ್ಕದಲ್ಲಿರುವ ಗಾಂಧಿಮೈದಾನದಲ್ಲಿ ಶೃಂಗೇರಿ ಪಟ್ಟಣ ಪಂಚಾಯ್ತಿಯು ವ್ಯವಸ್ಥೆ ಮಾಡಿತ್ತು ಹಾಗೂ ಪ್ರತಿದಿನ ಅಲ್ಲಿ ತಾಜ್ಯ ವಿಲೇವಾರಿ ಮಾಡುತ್ತಿತ್ತು ಪಾರ್ಕಿಂಗ್ ಸ್ಥಳದಲ್ಲಿ ಏನೇ ಕೆಲಸವಿದ್ದರು ಅದನ್ನು ಪಟ್ಟಣ ಪಂಚಾಯ್ತಿಯೇ ನಿರ್ವಹಿಸುತ್ತಿತ್ತು.
ಇಲ್ಲಿನ ಪಾರ್ಕಿಂಗ್ ಟೆಂಡರ್ ನೀಡುವ ಮೂಲಕ ಪಟ್ಟಣ ಪಂಚಾಯ್ತಿಗೆ ಗಾಂಧಿಮೈದಾನವು ಒಂದು ಪ್ರಮುಖ ಆದಾಯದ ಮೂಲವಾಗಿತ್ತು.ಮೈದಾನಕ್ಕೆ ಬರುವ ಪ್ರವಾಸಿಗರಿಂದ ಒಂದಷ್ಟು ಜನ ಸ್ಥಳೀಯರು ತಮ್ಮ ಹೊಟ್ಟೆ ಪಾಡಿಗಾಗಿ ಅಂಗಡಿಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಹೀಗಿದ್ದಾಗ ಗಾಂಧಿ ಮೈದಾನ ಪಟ್ಟಣ ಪಂಚಾಯ್ತಿಗೆ ಸೇರಿದ್ದಲ್ಲ ಅದು ಹೊಳೆ ಕರಾಬು ಪ್ರದೇಶ ಎಂದು ಡಿ ಸಿ ಆದೇಶಿಸಿದ್ದು ಇಲ್ಲಿ ಪಟ್ಟಣ ಪಂಚಾಯ್ತಿಯಿಂದ ಯಾವುದೇ ವಾಹನ ಪಾರ್ಕಿಂಗ್ ಶುಲ್ಕ ವಸೂಲಿಯಾಗಲಿ,ಪಾರ್ಕಿಂಗ್ ಟೆಂಡರ್ ಕೊಡುವಂತಿಲ್ಲವೆಂದು ಆದೇಶವಾಗಿದೆ. ಈ ಆದೇಶದ ಬೆನ್ನಲ್ಲೇ ಪಟ್ಟಣ ಪಂಚಾಯ್ತಿ ತನಗೆ ಸಂಬಂಧವಲ್ಲದ ಪ್ರದೇಶದಲ್ಲಿ ವಾಹನ ಪಾರ್ಕಿಂಗ್ ಟೆಂಡರ್‌ನ್ನು ಕೊಡದೇ ಹಾಗೂ ತಾನು ಆ ಜಾಗದಲ್ಲಿ ನಿರ್ವಹಿಸುತ್ತಿದ್ದ ಎಲ್ಲಾ ಕೆಲಸಗಳನ್ನು ನಿಲುಗಡೆಗೊಳಿಸಿದೆ.
ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಈ ಆದೇಶ ಯಾರಿಗೆ ಲಾಭವಾಯ್ತೋ ಗೊತ್ತಿಲ್ಲ ಆದರೆ ಗಾಂಧಿಮೈದಾನ ಕಸದ ರಾಶಿಯಿಂದ ತುಂಬಿದೆ.ಕ್ಷೇತ್ರಕ್ಕೆ ಬರೋ ಪ್ರವಾಸಿಗರಿಗೆ ಕಸದ ಸ್ವಾಗತ ದೊರೆಯುತ್ತಿದೆ. ಈಗ ಮಳೆಗಾಲ ಬೇರೆ ಕಸದ ರಾಶಿ ಕೊಳೆತು ಅಲ್ಲಿ ಸೊಳ್ಳೆಗಳು ಶುರುವಾಗಿದ್ದು, ಪಟ್ಟಣದ ತುಂಬೆಲ್ಲಾ ಸೊಳ್ಳೆ ಕಾಟ ಶುರುವಾಗಿದೆ. ಇದರಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಒಟ್ಟಿನಲ್ಲಿ ಯಾರದ್ದೋ ರಾಜಕೀಯ ಹಿತಾಸಕ್ತಿಗಾಗಿ ಶೃಂಗೇರಿ ಗಾಂಧಿಮೈದಾನ ಮತ್ತು ಇಲ್ಲಿಗೆ ಬರುವ ಪ್ರವಾಸಿಗರನ್ನು ನಂಬಿ ಜೀವನ ಸಾಗಿಸುತ್ತಿದ್ದ ಜನರ ಜೀವನ ಬಲಿಯಾಗುತ್ತಿದೆ ಜೊತೆಗೆ ಶುದ್ಧ ಮನಸ್ಸಿನಿಂದ ತಾಯಿ ಶಾರದೆಯ ದರ್ಶನಕ್ಕೆ ಬರುವ ಯಾತ್ರಾರ್ಥಿಗಳಿಗೆ ಕೊಳೆತ ಕಸದ ರಾಶಿಯ ನಡುವೆ ವಾಹನ ನಿಲ್ಲಿಸಿ ಹೋಗಿ ದೇವರ ದರ್ಶನ ಮಾಡುವ ದೌರ್ಭಾಗ್ಯ ಬಂದಿರೋದಂತು ಸತ್ಯ.
ಡಿ ಸಿ ಯವರು ತಾವು ಮಾಡಿದ ಆದೇಶವನ್ನು ಇನ್ನೊಮ್ಮೆ ವಿಮರ್ಶೆ ಮಾಡುವುದು ಸೂಕ್ತ, ಪಟ್ಟಣ ಪಂಚಾಯತ್ ಸರ್ಕಾರದ ಒಂದು ಭಾಗವಾಗಿರುವಾಗ ಸರ್ಕಾರಕ್ಕೆ ಬರುವ ಆದಾಯ ಕೋತಾ ಮಾಡಿರುವುದು ಯಾರನ್ನ ಸಂತುಷ್ಟ ಪಡಿಸುವ ಸಲುವಾಗಿ ಎಂದು ಸಾರ್ವಜನಿಕರು ಚರ್ಚೆ ಮಾಡುತ್ತಿದ್ದಾರೆ.
