ಅಡಿಕೆ ರೋಗ ನಿವಾರಣೆಗಾಗಿ ಶೃಂಗೇರಿಯಲ್ಲಿ ಪೂಜೆ!
– ಎಲೆ ಚುಕ್ಕಿ, ಹಳದಿ ರೋಗ ನಿವಾರಣೆಗಾಗಿ ಪೂಜೆ
– ಲಲಿತಾ ಪಂಚಮಿಯ ದಿನದಂದು ಲಲಿತಾ ಹೋಮ
– ಸರ್ವರನ್ನೂ ಆಹ್ವಾನಿಸಿದ ಶೃಂಗೇರಿ ಮಠ
NAMMUR EXPRESS NEWS
ಶೃಂಗೇರಿ: ಮಲೆನಾಡ ಭಾಗದಲ್ಲಿ ಅಡಿಕೆ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗಗಳು ಅತಿಯಾಗಿ ಬಾಧಿಸುತ್ತಿದ್ದು ಈ ರೋಗಗಳ ನಿವಾರಣೆಗಾಗಿ ಸಂಕಷ್ಟದಲ್ಲಿದ್ದ ರೈತರು ಕಳೆದ ವರ್ಷ ಶೃಂಗೇರಿ ಜಗದ್ಗುರುಗಳಲ್ಲಿ ತಮ್ಮ ಅಳಲನ್ನು ನಿವೇದಿಸಿಕೊಂಡಿದ್ದರು. ಅದಕ್ಕೆ ಪರಿಹಾರೋಪಾಯವಾಗಿ ಮಹಾ ಸನ್ನಿಧಾನಂಗಳ ಸೂಚನೆಯ ಮೇರೆಗೆ ಸನ್ನಿಧಾನಂಗಳವರು ಜಗನ್ಮಾತೆಗೆ ಕೋಟಿ ಕುಂಕುಮಾರ್ಚನೆ ಮತ್ತು ಲಲಿತಾ ಹೋಮವನ್ನು ಕೈಗೊಳ್ಳುವಂತೆ ಭಕ್ತಾದಿಗಳಿಗೆ ತಿಳಿಸಿದ್ದರು. ಅದರಂತೆ ಶೃಂಗೇರಿ ಶ್ರೀ ಮಠದಲ್ಲಿಯೇ ದಿನಾಂಕ 26.01.2023 ರಿಂದ ಪ್ರಾರಂಭಿಸಿ 11 ದಿನಗಳ ಪರ್ಯಂತ ಕೋಟಿ ಕುಂಕುಮಾರ್ಚನೆ ಹಾಗೂ ಲಲಿತಾ ಹೋಮಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ಶಾಸ್ತ್ರೋಕ್ತವಾಗಿ ನಡೆದಿತ್ತು.
ಈ ಕಾರ್ಯಕ್ರಮಕ್ಕೆ ಸಂಗ್ರಹವಾದ ಕಾಣಿಕೆಯ ಹಣದಲ್ಲಿ ಕೋಟಿ ಕುಂಕುಮಾರ್ಚನೆಗೆ ಖರ್ಚಾಗಿ ಉಳಿದ ಹಣದ ಬಡ್ಡಿಯಲ್ಲಿ ಅಡಿಕೆ ಬೆಳೆಗಾರರ ಸಂಕಷ್ಟ ಪರಿಹಾರದ ಸಂಕಲ್ಪವನ್ನು ಇಟ್ಟುಕೊಂಡು ಪ್ರತಿವರ್ಷವೂ ಲಲಿತಾ ಪಂಚಮಿಯ ದಿನದಂದು ಶೃಂಗೇರಿ ಶ್ರೀ ಮಠದಲ್ಲಿ ಕೆಲವು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವ ಬಗ್ಗೆ ಜಗದ್ಗುರುಗಳು ಸೂಚಿಸಿದ ಬಗ್ಗೆ ಈ ಹಿಂದೆ ತಿಳಿಸಲಾಗಿತ್ತು. ಅದರಂತೆ ದಿನಾಂಕ 14.02.2024 ನೇ ಬುಧವಾರ ಲಲಿತಾ ಪಂಚಮಿಯ ದಿನದಂದು ಶ್ರೀ ಮಠದಲ್ಲಿ ಈ ಕೆಳಗಿನ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತದೆ.
ಧಾರ್ಮಿಕ ಕಾರ್ಯಕ್ರಮ ಏನೇನು?
* ಗುರುಭವನದಲ್ಲಿ ಗುರುದರ್ಶನವನ್ನು ಮಾಡಿ ಫಲ ಸಮರ್ಪಣೆ ಮಾಡುವುದು, ನಂತರ ಜಗದ್ಗುರುಗಳ ಅನುಗ್ರಹ ಭಾಷಣ.
* ಅಮ್ಮನವರಿಗೆ ಲಕ್ಷ ಕುಂಕುಮಾರ್ಚನೆ.
* ಲಲಿತಾ ಹೋಮ
* ಅಮ್ಮನವರಿಗೆ ದಿಂಡಿ ಉತ್ಸವ
* ಬೆಟ್ಟದ ಮಲಹಾನಿಕೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ರುದ್ರಾಭಿಷೇಕ ಮತ್ತು ರುದ್ರ ಹೋಮ.
* ಶ್ರೀ ಮಠದ ಭೋಜನ ಪ್ರಸಾದ.
ಅಡಿಕೆ ಬೆಳೆಗಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಗನ್ಮಾತೆಯ ಹಾಗೂ ಜಗದ್ಗುರುಗಳ ಪರಿಪೂರ್ಣ ಆಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಶೃಂಗೇರಿ ಶ್ರೀ ಮಠದ ಸೂಚನೆಯ ಮೇರೆಗೆ ಸರ್ವರನ್ನು ಈ ಮೂಲಕ ಆಹ್ವಾನಿಸಲಾಗಿದೆ.