ಚಿಕ್ಕಮಗಳೂರು ಟಾಪ್ ನ್ಯೂಸ್
* ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಕ್ಕೆ ಬಂದ ಖಾಸಗಿ ಬಸ್ ಪಲ್ಟಿ
* ಪ್ರೇಮ ವೈಫಲ್ಯ ಅರೆಹುಚ್ಚನಾದ ಯುವಕ
* ನಕಲಿ ವೈದ್ಯನ ಕ್ಲಿನಿಕ್‌ಗೆ ಬೀಗ ಜಡಿದ ಅಧಿಕಾರಿಗಳು
NAMMUR EXPRESS NEWS
* ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಕ್ಕೆ ಬಂದ ಖಾಸಗಿ ಬಸ್ ಪಲ್ಟಿ
ಮೂಡಿಗೆರೆ: ಬೆಂಗಳೂರಿನಿಂದ ಕುದುರೆಮುಖಕ್ಕೆ ಪ್ರವಾಸಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಒಂದು ಪಲ್ಟಿಯಾಗಿ 25 ಕ್ಕೂ ಹೆಚ್ಚು ಮಂದಿಗೆ ಗಾಯಗಳಾದ ಘಟನೆ ತಾಲೂಕಿನ ದೇವನಗೂಲ್ ಗ್ರಾಮದ ಬಳಿ ಸಂಭವಿಸಿದೆ. ವೀಕೆಂಡ್ ಹಿನ್ನೆಲೆ ಎಂ.ಎನ್.ಸಿ ಕಂಪನಿಯಲ್ಲಿ ಕೆಲಸ ಮಾಡುವ 40ಕ್ಕೂ ಹೆಚ್ಚು ಯುವಕ – ಯುವತಿಯರು ನೇತ್ರಾವತಿ ಪೀಕ್ ಟ್ರಕ್ಕಿಂಗ್‍ಗೆ ಬಂದಿದ್ದರು. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಅಪಘಾತದಲ್ಲಿ 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು,ಇಬ್ಬರ ಸ್ಥಿತಿ ಗಂಭೀರವಾಗಿದೆ.ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಗಾಯಾಳುಗಳನ್ನು ಮೂಡಿಗೆರೆ ಹಾಗೂ ಚಿಕ್ಕಮಗಳೂರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
* ಪ್ರೇಮ ವೈಫಲ್ಯ ಅರೆಹುಚ್ಚನಾದ ಯುವಕ
ಚಿಕ್ಕಮಗಳೂರು: ಪ್ರೀತಿ ವಿಫಲವಾದ ದುಃಖದಲ್ಲಿಯೇ ಅರೆಹುಚ್ಚನಾದ ಯುವಕ, ತನ್ನ ತಲೆಗೆ ಬಾಟಲಿಯಿಂದ ಹೊಡೆದುಕೊಂಡಿದ್ದಾನೆ. ತನ್ನ ತಲೆಯಲ್ಲಿ ರಕ್ತ ಹರಿಯುತ್ತಿದ್ದರೂ, ಸುಮ್ಮನೆ ಕುಳಿತಿರುವ ಘಟನೆ ತಾಲೂಕಿನ ಕೈಮರ ಚೆಕ್‌ಪೋಸ್ಟ್ ಬಳಿ ಗುರುವಾರ ಬೆಳಕಿಗೆ ಬಂದಿದೆ.
ತಮಿಳುನಾಡು ಮೂಲದ ಈ ಯುವಕ, ಕೆಲ ತಿಂಗಳ ಹಿಂದೆ ಕಾಫಿತೋಟದ ಕೆಲಸಕ್ಕಾಗಿ ಚಿಕ್ಕಮಗಳೂರು ಬಂದಿದ್ದರು. ಕೆಲಸದಲ್ಲಿಯೇ ಇಲ್ಲಿಯ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದರು. ಆದರೆ, ಕಾಲಕ್ರಮೇಣ ಹುಡುಗಿ ಕೈಕೊಟ್ಟು ಬೇರೆ ಯಾರೊಂದಿಗೋ ಮದುವೆಯಾಗಿದ್ದಾಳೆ. ಈ ಘಟನೆಯು ಯುವಕನ ಮನಸ್ಸಿಗೆ ಆಘಾತ ಉಂಟುಮಾಡಿ, ತಮಿಳುನಾಡಿಗೆ ಹಿಂದಿರುಗಿದಿದ್ದಾನೆ. ಆದರೆ, ಈ ದುಃಖ ಮರೆಯದ ಯುವಕ ಮತ್ತೆ ಜು.18ಕ್ಕೆ ಕೈಮರ ಚೆಕ್‌ಪೋಸ್ಟ್ ಬಳಿ ಬಂದು ಬಾಟಲಿಯೊಂದನ್ನು ತನ್ನ ತಲೆಗೆ ಹೊಡೆದು ರಕ್ತ ಹರಿಯುವ ಸ್ಥಿತಿಯಲ್ಲಿ ನಡು ರಸ್ತೆಯಲ್ಲಿಯೇ ಸುಮ್ಮನೆ ಕುಳಿತಿದ್ದನು.
ಅಲ್ಲಿನ ಸಿಬ್ಬಂದಿ ಹಾಗೂ ಪೊಲೀಸರು ಆತನನ್ನು ತಕ್ಷಣ ಗಮನಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕನ ಶಾರೀರಿಕ ಸ್ಥಿತಿ ಸ್ಥಿರವಿದ್ದರೂ, ಮಾನಸಿಕ ಸ್ಥಿತಿ ಅತ್ಯಂತ ಅಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ನಕಲಿ ವೈದ್ಯನ ಕ್ಲಿನಿಕ್‌ಗೆ ಬೀಗ ಜಡಿದ ಅಧಿಕಾರಿಗಳು
ಕಳಸ: ನಕಲಿ ವೈದ್ಯನೊಬ್ಬ ಎಂ.ಬಿ.ಬಿ.ಎಸ್. ಡಾಕ್ಟರ್ ಎಂದು ನಂಬಿಸಿ ಚಿಕಿತ್ಸೆ ನೀಡುತ್ತಿದ್ದ ಆರೋಪದ ಮೇಲೆ ಆತನ ಖಾಸಗಿ ಕ್ಲಿನಿಕ್‌ಗೆ ಅಧಿಕಾರಿಗಳು ಬೀಗ ಜಡಿದ ಘಟನೆ ಕಳಸ ತಾಲೂಕಿನ ಹಿರೇಬೈಲು ಗ್ರಾಮದಲ್ಲಿ ಜು.18ರ ಶುಕ್ರವಾರ ನಡೆದಿದೆ.
ಡಾಕ್ಟರ್ ಎಂದು ಪೋಸ್ ಕೊಟ್ಟು ಫೀಲ್ಡಿಗಿಳಿದಿದ್ದ ನಕಲಿ ವೈದ್ಯನ ಬಗ್ಗೆ ಅನುಮಾನ ಬಂದು ದಾಖಲೆ ಪರಿಶೀಲಿಸಿದಾಗ ನಕಲಿ ವೈದ್ಯನ ಮುಖವಾಡ ಬಯಲಾಗಿದೆ.
ನಕಲಿ ವೈದ್ಯ, ಸ್ಪಂದನ ಕ್ಲಿನಿಕ್ ಹೆಸರಿನಲ್ಲಿ ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿದ್ದ. ಸ್ಥಳೀಯರಿಗೆ ಈತನ ಕುರಿತು ಅನುಮಾನ ಬಂದ ಹಿನ್ನೆಲೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಖಚಿತ ಮಾಹಿತಿ ಮೆರೆಗೆ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು ಸ್ಪಂದನ ಕ್ಲಿನಿಕ್‌ಗೆ ಬೀಗ ಜಡಿದಿದ್ದಾರೆ.
ಮೂಡಿಗೆರೆ ವೈದ್ಯಾಧಿಕಾರಿ ಹರೀಶ್ ಬಾಬು ನೇತೃತ್ವದಲ್ಲಿ ಸ್ಥಳೀಯರ ಮಾಹಿತಿ ಮೇರೆಗೆ ದಿಢೀರ್ ದಾಳಿ ನಡೆದಿದ್ದು, ಈ ವೇಳೆ ಅಧಿಕಾರಿಗಳು ದಾಖಲೆ ಕೇಳಿದ್ದು, ಯಾವುದೇ ಸರಿಯಾದ ದಾಖಲೆ ಇಲ್ಲದೇ ಇದ್ದಿದ್ದರಿಂದ ಅಧಿಕಾರಿಗಳು ಕ್ಲಿನಿಕ್ ಗೆ ಬೀಗ ಹಾಕಿದ್ದಾರೆ.
ತಾಲೂಕು ವೈದ್ಯಾಧಿಕಾರಿ, ಪೊಲೀಸ್, ಪಿಡಿಓ ನೇತೃತ್ವದಲ್ಲಿ ದಾಳಿ ನಡೆದಿದೆ.