ಶಕ್ತಿಯೋಜನೆ ಯಶಸ್ವಿ,ಸಿಹಿ ಹಂಚಿ ಸಂಭ್ರಮಾಚರಣೆ
* ಶಕ್ತಿ ಯೋಜನೆ ಲಾಭದಿಂದ ಹೊಸ ಬಸ್ ಖರೀದಿ
* ರಾಜ್ಯಾದ್ಯಂತ 500 ಕೋಟಿ ಟ್ರಿಪ್,12,669 ವರಮಾನ
NAMMMUR EXPRESS NEWS
ಚಿಕ್ಕಮಗಳೂರು: ಸರ್ಕಾರ ‘ನೀಡಿದ್ದ ಭರವಸೆಯಂತೆ ಶಕ್ತಿ ಯೋಜನೆಯ ಹಣವನ್ನು ಕೆಎಸ್‌ಆರ್‌ಟಿಸಿಗೆ ಸರ್ಕಾರ ಪಾವತಿಸಿದೆ. ಈ ಹಣದಲ್ಲಿ ನಿಗಮ ಹೊಸ ಬಸ್‌ಗಳನ್ನು ಖರೀದಿಸಿದೆ. ಚಾಲಕ, ನಿರ್ವಾಹಕರ ನೇಮಕಕ್ಕೆ ಸಾಧ್ಯವಾಗಿದೆ’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಹೇಳಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ಆಯೋಜಿಸಿದ್ದ ಶಕ್ತಿ ಯೋಜನೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜ್ಯದಾದ್ಯಂತ ಮಹಿಳೆಯರು 500 ಕೋಟಿ ಟ್ರಿಪ್‌ಗಳಲ್ಲಿ ಉಚಿತವಾಗಿ ಸಂಚರಿಸಿದ್ದು, ಇದರ ಮೊತ್ತ ₹12,669 ಕೋಟಿ ಹಣ ನಿಗಮಕ್ಕೆ ಬಂದಿದೆ,ರಾಜ್ಯ ಸರ್ಕಾರ ಐದೂ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಶಕ್ತಿ ಯೋಜನೆ ಯಶಸ್ವಿಯಾಗಿ ಎರಡು ವರ್ಷ ಪೂರೈಸಿದೆ. ಆದ್ದರಿಂದ ರಾಜ್ಯದಾದ್ಯಂತ ಎಲ್ಲ ಬಸ್ ನಿಲ್ದಾಣಗಳಲ್ಲಿ ಸಂಭ್ರಮಾಚರಣೆ ಮಾಡಲಾಗುತ್ತಿದೆ ಎಂದರು.
ಚಿಕ್ಕಮಗಳೂರು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಮಲ್ಲೇಶ್‌ಸ್ವಾಮಿ ಮಾತನಾಡಿ, ‘ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಲು ಅವಕಾಶವಾಗಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ‘ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉತ್ತಮ ಅವಕಾಶ ಒದಗಿಸಿದಂತಾಗಿದೆ. ಮುಂದೆಯೂ ಮೂರು ವರ್ಷ ಐದು ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಮುಂದುವರಿಸಲಿದೆ’ ಎಂದು ಹೇಳಿದರು.
ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಮಾತನಾಡಿ, ‘ಜಿಲ್ಲೆಯ ಎಲ್ಲಾ ಆರು ಘಟಕಗಳ ವಾಹನಗಳಲ್ಲಿ ಈವರೆಗೆ ಒಟ್ಟು 8.43 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಸಂಚರಿಸಿದ್ದು, ₹ 322.28 ಕೋಟಿ ವಿನಿಯೋಗಿಸಲಾಗಿದೆ. ಚಿಕ್ಕಮಗಳೂರು ಘಟಕ ಒಂದರಲ್ಲೇ ಒಟ್ಟು 2.28 ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಸಂಚರಿಸಿದ್ದು, ನಿಗಮಕ್ಕೆ ₹79.45 ಕೋಟಿ ವರಮಾನ ಬಂದಿದೆ’ ಎಂದರು.
ಇದೇ ವೇಳೆ ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಿಸಿ, ಬಸ್ ಚಾಲಕ ಹಾಗೂ ನಿರ್ವಾಹಕರನ್ನು ಸನ್ಮಾನಿಸಲಾಯಿತು.
