ಪರಶುರಾಮ ಥೀಂ ಪಾರ್ಕ್ ಮತ್ತು ಪ್ರತಿಮೆ ಕುರಿತು ಅಪಪ್ರಚಾರ ಸೋಲಿನ ಹಂತದಲ್ಲಿ: ವಿ. ಸುನಿಲ್ ಕುಮಾರ್ ಪ್ರತಿಕ್ರಿಯೆ
ಕಾರ್ಕಳ :
ಪರಶುರಾಮ ಥೀಂ ಪಾರ್ಕ್ ಮತ್ತು ಅಲ್ಲಿನ ಹಿತ್ತಾಳೆ ಪ್ರತಿಮೆ ಕುರಿತು ನಡೆಯುತ್ತಿದ್ದ ಸುಳ್ಳು ಮಾಹಿತಿಯ ಪಿತೂರಿ ಕೊನೆಗೂ ತನಿಖೆಯಿಂದ ಹೀನಾಯ ಸೋಲು ಕಂಡಿದೆ. ಈ ಬಗ್ಗೆ ಕಾರ್ಕಳದ ಶಾಸಕ ಹಾಗೂ ಕರ್ನಾಟಕದ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸಿಗರು ನಡೆಸುತ್ತಿದ್ದ ಪ್ರತಿಮೆ ಫೈಬರ್‌ನದ್ದೆಂದು ನಡೆಯುತ್ತಿದ್ದ ಟೂಲ್ ಕಿಟ್ ಅಪಪ್ರಚಾರಕ್ಕೆ ಸ್ಪಷ್ಟ ಉತ್ತರ ಲಭಿಸಿದೆ. ಪೊಲೀಸ್ ತನಿಖೆಯಲ್ಲಿ ಪ್ರತಿಮೆಯು ಸಂಪೂರ್ಣವಾಗಿ ಹಿತ್ತಾಳೆಯಿಂದ ನಿರ್ಮಿತವಾಗಿದೆ ಎಂಬುದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯ ಮೂಲಕ ದೃಢಪಡಿಸಲಾಗಿದೆ. ಅಲ್ಲದೆ, ಪರಶುರಾಮ ಪ್ರತಿಮೆಯ ಸೊಂಟದ ಮೇಲ್ಭಾಗವನ್ನು ಮರು ವಿನ್ಯಾಸ ಉದ್ದೇಶದಿಂದ ತೆಗೆದು ಇಡಲಾಗಿದ್ದು, ಇದನ್ನೂ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಲಾಗಿದೆ ಎಂದು ತಿಳಿಸಿದರು.
“ಈ ದೃಢತೆಗಳಿಂದ ಪ್ರತಿಮೆ ಫೈಬರ್‌ನದ್ದು ಎಂದು ನಡೆಸಲಾಗುತ್ತಿದ್ದ ವ್ಯವಸ್ಥಿತ ಪಿತೂರಿಗೆ ಕಡಿವಾಣ ಬಿದ್ದಿದೆ,” ಎಂದು ಅವರು ಹೇಳಿದರು.
ಇದೇ ವೇಳೆ ಅವರು ರಾಜ್ಯ ಸರ್ಕಾರವನ್ನು ಉದ್ದೇಶಿಸಿ, ಪರಶುರಾಮ ಥೀಂ ಪಾರ್ಕ್‌ಗೆ ಹಿಂದೆ ನಿಗದಿಯಾದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ಈ ಪಾರ್ಕ್ ನವೀಕರಣಗೊಂಡು ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
“ಅಭಿವೃದ್ಧಿ ವಿಚಾರದಲ್ಲಿ ನಡೆಯುತ್ತಿರುವ ದ್ವೇಷದ ರಾಜಕಾರಣಕ್ಕೆ ಇದೀಗ ತೆರೆ ಬೀಳಬೇಕು. ತುಳುನಾಡಿನ ಸಾಂಸ್ಕೃತಿಕ ಕಾಳಜಿಗೆ ಗಂಭೀರವಾದ ನುಗ್ಗಳಿದ ಈ ವಿಷಯದಲ್ಲಿ ಸರ್ಕಾರ ನಿಷ್ಠುರ ನಿರ್ಧಾರ ತೆಗೆದುಕೊಳ್ಳಬೇಕು,” ಎಂದು ವಿ. ಸುನಿಲ್ ಕುಮಾರ್ ಅವರು ಒತ್ತಾಯಿಸಿದರು.