ಶಮಿತಾ ಅನುಮಾನಾಸ್ಪದ ಸಾವು ಪ್ರಕರಣ: ಸೆ.11ಕ್ಕೆ ಕೊಪ್ಪ ಬಂದ್
* ಆತ್ಮಹತ್ಯೆ ಎಂದು ಪ್ರಕರಣದ ತನಿಖಾ ವರದಿ ಸಲ್ಲಿಸಿದ ತನಿಖಾ ತಂಡ
* ಸಾರ್ವಜನಿಕ ಹಿತರಕ್ಷಣಾ ವೇದಿಕೆ ಕೊಪ್ಪ ಇವರಿಂದ ಬಂದ್ಗೆ ಕರೆ
NAMMMUR EXPRESS NEWS
ಕೊಪ್ಪ: ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.11 ರ ಗುರುವಾರ ಕೊಪ್ಪ ಬಂದ್ಗೆ ಸಾರ್ವಜನಿಕ ಹಿತರಕ್ಷಣಾ ಸಮಿತಿ,ಕೊಪ್ಪ ಕರೆ ನೀಡಿದೆ.
ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಅಮೂಲ್ಯ ಹಾಗೂ ಶಮಿತಾರ ಸಾವಿಗೆ ಸೂಕ್ತ ತನಿಖೆ ನಡೆಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ತಾಲೂಕಿನಾದ್ಯಂತ ಹಲವು ಸಂಘಟನೆ,ಸಂಸ್ಥೆಗಳು ಪ್ರತಿಭಟನೆ,ಬಂದ್ ಮಾಡಿ ಒತ್ತಾಯಿಸಿದ್ದವು. ಅಂದು ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದ ಸರ್ಕಾರ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಆದೇಶಿಸಿ,ಶಾಲೆಯ ಮುಖ್ಯೋಪಾಧ್ಯಯರು ಹಾಗೂ ಹಾಸ್ಟೆಲ್ ವಾರ್ಡನ್ರನ್ನು ಅಮಾನತುಗೊಳಿಸಿತ್ತು.
ತನಿಖಾ ತಂಡವು ತನ್ನ ತನಿಖಾ ವರದಿಯನ್ನು ಸಲ್ಲಿಸಿದ್ದು ವರದಿಯಲ್ಲಿ ವಿದ್ಯಾರ್ಥಿನಿಯರ ಸಾವು ಆತ್ಮಹತ್ಯೆ ಎಂದು ಹೇಳಲಾಗಿದೆ.
ವರದಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ವಿದ್ಯಾರ್ಥಿನಿಯರ ಪೋಷಕರು ಹಾಗೂ ತಾಲೂಕಿನ ಜನತೆ ಪ್ರಕರಣದ ಸೂಕ್ತ ತನಿಖೆ ಹಾಗೂ ನ್ಯಾಯಕ್ಕಾಗಿ ಸಾರ್ವಜನಿಕ ಹಿತರಕ್ಷಣಾ ಸಮಿತಿ,ಕೊಪ್ಪ ಇದರ ನೇತೃತ್ವದಲ್ಲಿ ಬಂದ್ ಹಾಗೂ ಬೃಹತ್ ಪ್ರತಿಭಟನಾ ಸಭೆಗೆ ಕರೆಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೂ ಕೊಪ್ಪ ಸಂಪೂರ್ಣ ಬಂದ್ ಆಗಲಿದ್ದು ಬೆಳಿಗ್ಗೆ 10 ಗಂಟೆಗೆ ಕೊಪ್ಪ ಮುಖ್ಯ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ನಡೆಯಲಿದ್ದು,ಈ ಬಂದ್ ಹಾಗೂ ಪ್ರತಿಭಟನಾ ಸಭೆಯಲ್ಲಿ ಎಲ್ಲಾ ನಾಗರೀಕರು ಭಾಗವಹಿಸಿ, ವರ್ತಕರು ಬಂದ್ಗೆ ಸಹಕರಿಸಿ ಮೃತರ ಸಾವಿಗೆ ಸೂಕ್ತ ನ್ಯಾಯ ಒದಗಿಸುವಂತೆ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕಾಗಿ ಸಾರ್ವಜನಿಕ ಹಿತರಕ್ಷಣಾ ಸಮಿತಿಯು ಮನವಿ ಮಾಡಿದೆ.
