ಶೃಂಗೇರಿ ತಾಲೂಕಿಗೆ ಮಾದರಿಯಾದ ‘ಸಿಂಧೂರ ಗಣಪ’
* ಡಿಜೆ ಇಲ್ಲ,ಸೌಂಡ್ಸ್ ಇಲ್ಲ ಭಜನೆ ಕುಣಿತ,ಚಂಡೆ ವಾದ್ಯ ಘೋಷಗಳಷ್ಟೇ
* ಸಾರ್ವಜನಿಕ ಗಣೇಶೋತ್ಸವ ಸಮಿತಿ ಶೃಂಗೇರಿಯವರಿಂದ ನಡೆದ ಗಣೇಶೋತ್ಸವ
NAMMMUR EXPRESS NEWS
ಶೃಂಗೇರಿ: ಪಟ್ಟಣ ಪಂಚಾಯ್ತಿ ಶೃಂಗೇರಿ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ತನ್ನ 66 ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಸ್ಥಾಪಿಸಿದ್ದ ಸಿಂಧೂರ ಗಣಪತಿಯ ವಿಸರ್ಜನಾ ಮೆರವಣಿಗೆ ಈಗ ಇಡೀ ತಾಲೂಕಿಗೆ ಮಾದರಿಯಾಗಿದೆ.
ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹೆಚ್ ಎಸ್ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ರಚನೆಗೊಂಡ 66 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಆಪರೇಷನ್ ಸಿಂಧೂರದ ಸವಿನೆನಪಿಗಾಗಿ ಪ್ರತಿಷ್ಠಾಪಿಸಿದ ಸಿಂಧೂರ ಗಣಪತಿಯ ಗಣೇಶೋತ್ಸವ ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆದು ಕೊನೆಯ ದಿನ ನಡೆದ ವಿಸರ್ಜನಾ ಮೆರವಣಿಗೆಯು ತಾಲೂಕಿಗೆ ಮಾದರಿಯಾಗಿದೆ.
ಭಾನುವಾರ ನಡೆದ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ,ಸೌಂಡ್ಸ್ ಇಲ್ಲದೇ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಭಜನೆ,ಚಂಡೆ ವಾದ್ಯಗಳ ಮೂಲಕ ಸಮಿತಿಯ ಸದಸ್ಯರು ಸೇರಿ ಸಾರ್ವಜನಿಕರು ಸಾಂಸ್ಕೃತಿಕ ಉಡುಗೆ ತೊಟ್ಟು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಸಮಿತಿಯ ಈ ನಿರ್ಧಾರಕ್ಕೆ ಪಟ್ಟಣದ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ವಿಸರ್ಜನಾ ಮೆರವಣಿಗೆಯಲ್ಲಿ ಹಿರಿಯರು,ತರುಣರು,ಮಕ್ಕಳು ಸಂತಸದಿಂದ ಪಾಲ್ಗೊಂಡಿದ್ದರು. ಈ ಯಶಸ್ವಿ ಗಣೇಶೋತ್ಸವಕ್ಕೆ ಸಹಕರಿಸಿದ ಎಲ್ಲರಿಗೂ ಸಮಿತಿಯು ಧನ್ಯವಾದಗಳನ್ನು ತಿಳಿಸಿದೆ.
