ಕರಾವಳಿ ಟಾಪ್ ನ್ಯೂಸ್
ಬ್ರಹ್ಮಾವರ: ನೇಣು ಬಿಗಿದುಕೊಂಡು ತಾಯಿ ಮಗು ಆತ್ಮಹತ್ಯೆ!
• ಮಂಗಳೂರು: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ; ವ್ಯಕ್ತಿ ಸಾವು
• ಕುಂದಾಪುರ: ವರದಕ್ಷಿಣೆ ಕಿರುಕುಳ; ಠಾಣೆಯ ಮೆಟ್ಟಿಲೇರಿದ ಮಹಿಳೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬ್ರಹ್ಮಾವರ: ಪತಿಯು ನ್ಯಾಯಾಲಯದ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿದ್ದ ಸಂದರ್ಭದಲ್ಲಿ, ತಾಯಿ ಮತ್ತು ಮಗು ಮನೆಯ ಸೀಲಿಂಗ್ ಗೆ ನೇಣು ಬಿಗಿದುಕೊಂಡು, ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆರಂಜೆ ತಿರುವಿನ ಬಳಿ ನಡೆದಿದೆ. ಮೃತರನ್ನು ಸುಶ್ಮಿತಾ ಮತ್ತು ಒಂದು ವರ್ಷದ ಮಗು ಶ್ರೇಷ್ಠ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಯಾವುದೇ ಕಾರಣ ತಿಳಿದುಬಂದಿಲ್ಲ. ಬ್ರಹ್ಮಾವರ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ
ಮಂಗಳೂರು: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ; ವ್ಯಕ್ತಿ ಸಾವು
ಮಂಗಳೂರು: ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ, ದ್ವಿಚಕ್ರ ವಾಹನದಲ್ಲಿ ಪಯಣಿಸುತ್ತಿದ್ದ ಇಬ್ಬರಲ್ಲಿ, ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಸೂರತ್ಕಲ್ ಮುಕ್ಕ ಜಂಕ್ಷನ್ ನಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಕರುಣಾಕರ ಶೆಟ್ಟಿ ಎಂದು ಗುರುತಿಸಲಾಗಿದೆ. ಉತ್ತರ ಕರ್ನಾಟಕ ಮೂಲದ, ಚೇಳಾಯರಿನಲ್ಲಿ ತಮ್ಮ ನೆರೆಮನೆಯಲ್ಲಿ ವಾಸವಾಗಿರುವ ವಿಶ್ವನಾಥ್ ಅವರು ಹಾಲನ್ನು ತೆಗೆದುಕೊಂಡು ಹೋಗಲು ಪೇಟೆಗೆ ಬಂದ ಸಂದರ್ಭದಲ್ಲಿ, ಕರುಣಾಕರ ಶೆಟ್ಟಿಯವರು ತಮ್ಮ ಅಂಗಡಿಗೆ ಬಾಗಿಲು ಹಾಕಿ, ಮನೆಯ ಕಡೆ ಹೊರಟಿದ್ದರಿಂದ ವಿಶ್ವನಾಥ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೊರಟಿದ್ದರು ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ 66 ಅನ್ನು ದಾಟಿ, ಹಳೆಯಂಗಡಿ ಕಡೆಯಿಂದ ಸೂರತ್ಕಲ್ ಕಡೆಗೆ ತೆರಳುತ್ತಿದ್ದ ಕಾರು ಬಂದು, ಕರುಣಾಕರ ಶೆಟ್ಟಿ ಅವರ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಆಗ ಕರುಣಾಕರ್ ಶೆಟ್ಟಿ ಅವರು 50 ಮೀಟರ್ ನಷ್ಟು ದೂರಕ್ಕೆ ಬಿದ್ದು, ತಲೆಗೆ ಬಲವಾದ ಪೆಟ್ಟಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಶ್ವನಾಥ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಮುಕ್ಕದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕಾರು ಚಾಲಕ ಮೊಹಮ್ಮದ್ ತೌಫಿಕ್ ನನ್ನು ಸಂಚಾರ ಪೊಲೀಸರು ಸೆರೆಹಿಡಿದಿದ್ದಾರೆ. ಬಳಿಕ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ, ಮಂಗಳೂರು ಉತ್ತರ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದರು.
• ಕುಂದಾಪುರ: ವರದಕ್ಷಿಣೆ ಕಿರುಕುಳ; ಠಾಣೆ ಮೆಟ್ಟಿಲೇರಿದ ಮಹಿಳೆ.
ಕುಂದಾಪುರ: ಗಂಗೊಳ್ಳಿಯ ನಿವಾಸಿ ದೀಪಿಕಾ ಅವರು 2016ರಲ್ಲಿ ಬ್ರಹ್ಮಾವರ ತಾಲ್ಲೂಕಿನ ಸಾಲಿಗ್ರಾಮ ನಿವಾಸಿ ಸಂತೋಷ್ ಎನ್ನುವವರನ್ನು ವಿವಾಹವಾಗಿದ್ದು, ಪತಿ ಮತ್ತು ಆತನ ಮನೆಯವರಿಂದ ವರದಕ್ಷಿಣೆಯ ಕಿರುಕುಳ ಪ್ರಾರಂಭವಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಸಂತೋಷ್ ಅವರ ಮನೆಯವರಾದ ಶೋಭಾ ಮತ್ತು ಸಂಗೀತ ಎನ್ನುವವರು ದೀಪಿಕಾ ಅವರಿಗೆ ತವರಿನಿಂದ ಚಿನ್ನ ಮತ್ತು ಹಣವನ್ನು ವರದಕ್ಷಿಣೆಯಾಗಿ ತಂದಿಲ್ಲವೆಂದು ಮೂದಲಿಸಿ, ಮಾನಸಿಕ ಹಿಂಸೆ ನೀಡಿ, ಹೊಡೆದು, ಕೊಲೆ ಬೆದರಿಕೆಯನ್ನು ಸಹ ಹಾಕಿದ್ದಾರೆ. ಇದರಿಂದ ಬೇಸತ್ತ ದೀಪಿಕಾ ಅವರು ದೂರು ನೀಡಲು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ದೀಪಿಕಾ ಅವರ ದೂರಿನ ಆಧಾರದ ಮೇಲೆ, ಸಂತೋಷ್ ಮತ್ತು ಆತನ ಮನೆಯವರ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಾಲಂ 85, 115 (2), 352, 351 ಮತ್ತು 3(5) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.