ಗುಂಡಿ ತಪ್ಪಿಸಲು ಹೋಗಿ ದೊಡ್ಡ ಗುಂಡಿಗೆ ಬಿದ್ದ ಬಸ್, ಸ್ಟೇರಿಂಗ್ ಕಟ್
* ಕೊಪ್ಪ ತಾಲೂಕಿನ ಸೀಗೋಡಿನಲ್ಲಿ ಘಟನೆ, ಹಲವರಿಗೆ ಗಾಯ
* ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಆಂಬುಲೈನ್ಸ್ ಇಲ್ಲದೇ ಪರದಾಟ
NAMMMUR EXPRESS NEWS
ಜಯಪುರ/ಬಾಳೆಹೊನ್ನೂರು: ಬೆಂಗಳೂರಿಂದ ಶೃಂಗೇರಿಗೆ ಬರುತ್ತಿದ್ದ ಪ್ರವಾಸಿಗರ ಬಸ್‌ವೊಂದು ರಸ್ತೆ ಗುಂಡಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕೊಪ್ಪ ತಾಲ್ಲೂಕಿನ ಸೀಗೋಡು ಬಳಿ ನಡೆದಿದೆ.
ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 17 ಸ್ನೇಹಿತರು ಶೃಂಗೇರಿ, ಆಗುಂಬೆ ಕಡೆಗೆ ಪ್ರವಾಸಕ್ಕೆ ಬರುತ್ತಿದ್ದರು ಎನ್ನಲಾಗಿದೆ. ಬಾಳೆಹೊನ್ನೂರು ಸಮೀಪ ಸೀಗೋಡಿನಲ್ಲಿ ಬಸ್ ರಸ್ತೆಯಲ್ಲಿನ ದೊಡ್ಡ ಗುಂಡಿ ಇಳಿದಿದ್ದರಿಂದ ಸ್ಟೇರಿಂಗ್ ಕಟ್ ಆಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು ಬಸ್ ರಸ್ತೆ ಪಕ್ಕದ ದೊಡ್ಡ ಗುಂಡಿಗೆ ಪಲ್ಟಿಯಾಗಿದೆ.
ಬಸ್‌ನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲು ಆಂಬುಲೈನ್ಸ್ ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಯಿತು,ನಂತರ ಖಾಸಗಿ ವಾಹನದಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.ಗುಂಡಿಗೆ ಬಿದ್ದ ಪರಿಣಾಮ ಬಸ್ ಸಂಪೂರ್ಣ ಜಖ್ಖಂಗೊಂಡಿದ್ದು, ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳಿದ್ದು ದಿನೇ ದಿನೇ ಅಪಘಾತಗಳು ಸಂಭವಿಸಿ ಜೀವಹಾನಿಯಾಗುತ್ತಿದೆ. ಮೊನ್ನೆಯಷ್ಟೇ ಎನ್.ಆರ್ ಪುರ ತಾಲೂಕಿನ ಮಡಬೂರಿನಲ್ಲಿ ರಸ್ತೆಗುಂಡಿ ತಪ್ಪಿಸಲು ಹೋಗಿ ಸವಾರ ಮೃತಪಟ್ಟಿದ್ದರು.ಕ್ಷೇತ್ರದ ಎಲ್ಲಾ ರಸ್ತೆಗಳ ಪರಿಸ್ಥಿತಿ ಇದೇ ಆಗಿದ್ದು ದೊಡ್ಡ ದೊಡ್ಡ ಗುಂಡಿಗಳಿಂದ ಕೂಡಿದೆ. ಇದರಿಂದ ರಸ್ತೆಯಲ್ಲಿ ಸಾಗುವುದು ತುಂಬಾ ಕಷ್ಟಕರವಾಗಿದೆ,ಈ ಸಮಸ್ಯೆಗೆ ಅಧಿಕಾರಿಗಳಾಗಲಿ, ಶಾಸಕರಾಗಲಿ ಸ್ಪಂದಿಸುತ್ತಿಲ್ಲ ಇನ್ನಾದರೂ ಈ ಬಗ್ಗೆ ಗಮನಹರಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಸರಿಪಡಿಸುವಂತೆ ಜನರು ಶಾಸಕರು ಹಾಗೂ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
