ಕರಾವಳಿ ಟಾಪ್ ನ್ಯೂಸ್
* ಮಂಗಳೂರು : ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಅಮಾನತು
* ಪುತ್ತೂರು: ವಂಚನೆಗೆ ಒಳಗಾಗಿ, ಮಗುವಿಗೆ ಜನ್ಮ ನೀಡಿದ ಯುವತಿ!
* ಮಲ್ಪೆ: ಕಡಲ ತೀರದಲ್ಲಿ ಕಸದ ರಾಶಿ; ಮೀನುಗಾರರಿಂದ ಆಕ್ಷೇಪ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಮಂಗಳೂರಿನ ಆರ್ ಟಿಒ ಕಛೇರಿಯ ಮೂವರು ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿದೆ. ಬೆಲೆ ಬಾಳುವ ಕಾರಿನ ನೋಂದಣಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. 1. 96.95.000 ರೂಪಾಯಿ ಬೆಲೆ ಬಾಳುವ ಕಾರನ್ನು 32.15.000 ಬೆಲೆಗೆ ನಕಲಿ ನೋಂದಣಿ ಮಾಡಿಸಲಾಗಿದ್ದು, ಇದಕ್ಕೆ ಆರ್ ಟಿಒ ಅಧಿಕಾರ ಮತ್ತು ಸಿಬ್ಬಂದಿಗಳು ಕೂಡ ಬೆಂಬಲಿಸಿದ್ದಾರೆ. ಶಿವಮೊಗ್ಗ ವಿಭಾಗದ ಉಪ ಆಯುಕ್ತರ ಮಾಹಿತಿಯ ಮೇರೆಗೆ ನೋಂದಣಿ ಅರ್ಜಿ ಸಲ್ಲಿಸಿದ ನೀಲಪ್ಪ, ಅರ್ಜಿಯನ್ನು ಪರಿಶೀಲಿಸಿದ ರೇಖಾ ಮತ್ತು ಅರ್ಜಿಯನ್ನು ಅನುಮೋದಿಸಿದ ಸರಸ್ವತಿ ಅವರನ್ನು ಬೆಂಗಳೂರಿನ ಆಯುಕ್ತರು ಅಮಾನತುಗೊಳಿಸಿದ್ದಾರೆ. ಇಲಾಖೆಯ ವಿಚಾರಣೆಯನ್ನು ಬಾಕಿ ಇರಿಸಿಕೊಂಡು ನೀಲಪ್ಪ ಅವರನ್ನು ಶಿವಮೊಗ್ಗಕ್ಕೆ, ರೇಖಾ ಅವರನ್ನು ಚಿಕ್ಕಮಗಳೂರಿಗೆ ಮತ್ತು ಸರಸ್ವತಿ ಅವರನ್ನು ಬೆಂಗಳೂರು ಉತ್ತರದ ಆರ್ ಟಿಒ ಕಛೇರಿಗೆ ವರ್ಗಾಯಿಸಲಾಗಿದೆ.
ಪುತ್ತೂರು: ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಯುವತಿ ಆಕೆಯ ಸಹಪಾಠಿಯಾದ ಬಿಜೆಪಿ ಮುಖಂಡನ ಪುತ್ರನಿಂದ ವಂಚನೆಗೊಳಗಾಗಿ, ಗರ್ಭವತಿಯಾಗಿದ್ದು ಇದೀಗ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಶುಕ್ರವಾರ ಮಗುವಿಗೆ ಜನ್ಮ ನೀಡಿರುವ ವಿಚಾರ ತಿಳಿದುಬಂದಿದೆ. ಈಗಾಗಲೇ ಆರೋಪಿಯು ನಾಪತ್ತೆಯಾಗಿದ್ದು, ಆತನ ವಿರುದ್ಧ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಮಲ್ಪೆ: ಉಡುಪಿ ಜಿಲ್ಲೆಯ ಪ್ರಸಿದ್ಧ ಕಡಲ ತೀರ ಮಲ್ಪೆ. ಇದಕ್ಕೆ ಸಂಬಂಧಿಸಿದಂತೆ ಎರಡು ಪ್ರಮುಖ ಸಮಸ್ಯೆಗಳು ತಲೆದೋರಿದೆ. ಸರ್ಕಾರ ಮೀನುಗಾರರಿಗೆ ಹೊಸ ದೋಣಿಗಳ ನಿರ್ಮಾಣಕ್ಕೆ ಒಂದು ಸಾವಿರ ಸಾಧ್ಯತಾ ಪತ್ರ ವಿತರಣೆಗೆ ಅವಕಾಶ ಕಲ್ಪಿಸಿದ್ದು ಇದಕ್ಕೆ ಮೀನುಗಾರರಿಂದಲೇ ವಿರೋಧ ವ್ಯಕ್ತವಾಗಿದೆ.ಕುಂದಾಪುರದ ಮೊಗವೀರ ಭವನದಲ್ಲಿ ನಡೆದ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿಯ ಆಡಳಿತ ಮಂಡಳಿಯ ಸಭೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಮತ್ಸ್ಯ ಕ್ಷಾಮ ತಲೆದೋರಿದ್ದು, ಮೀನುಗಾರಿಕೆ ಶೇಕಡಾ ಐವತ್ತರಷ್ಟು ಕುಂಠಿತವಾಗಿದೆ. ಹೀಗಾಗಿ ಅರ್ಧದಷ್ಟು ದೋಣಿಗಳನ್ನು ಮಾತ್ರ ಬಳಸಲಾಗುತ್ತಿರುವುದರಿಂದ ಹೊಸ ದೋಣಿಗಳ ನಿರ್ಮಾಣಕ್ಕೆ ಸರ್ಕಾರ ನೀಡುವ ಸಾಧ್ಯತಾ ಪತ್ರಗಳನ್ನು ಮುಂದಿನ ಐದು ವರ್ಷಗಳ ಕಾಲ ನೀಡಬಾರದೆಂದು ಆಗ್ರಹ ಪಡಿಸಿದ್ದಾರೆ.
ಮಲ್ಪೆ ಕಡಲ ತೀರ ಮಳೆಯ ಪರಿಣಾಮದಿಂದ ಕಸದ ತೊಟ್ಟಿಯಂತಾಗಿದೆ. ಜನರು ಎಸೆದು ಹೋದ ಪ್ಲಾಸ್ಟಿಕ್ ಬಾಟಲಿ, ಚಪ್ಪಲಿ, ತಿನಿಸುಗಳ ಪ್ಯಾಕೆಟ್, ಬಟ್ಟೆ ಮೊದಲಾದ ತ್ಯಾಜ್ಯಗಳನ್ನು ನೀರಿಗೆ ಎಸೆದಿದ್ದು, ಪರಿಸರ ಮಾಲಿನ್ಯ ಉಂಟಾಗುವಂತೆ ಮಾಡಿದ್ದಾರೆ. ಇದರ ಪರಿಣಾಮವಾಗಿ ಈಗ ಮಳೆಯ ರಭಸಕ್ಕೆ ನೀರಲ್ಲಿ ಅಡಗಿದ್ದ ತ್ಯಾಜ್ಯಗಳೆಲ್ಲ ತೀರಕ್ಕೆ ಬಂದು ಸಮುದ್ರ ಎನ್ನುವುದು ಕಸದ ಆಗರವಾಗಿದೆ. ಹಿಂದೆ ಅಭಿವೃದ್ಧಿ ಪ್ರಾಧಿಕಾರ ಸ್ವಚ್ಛತೆಯನ್ನು ನಿರ್ವಹಿಸುತ್ತಿತ್ತು.ಈಗ ಇದು ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಅಧಿಕಾರಿಗಳಾದ ನಿದೀಶ್ ಹೋರ್ತಿ ಅವರು ಇನ್ನಷ್ಟೇ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕಿದೆ. ಮಳೆಯ ರಭಸಕ್ಕೆ ಕಸ ಕಡ್ಡಿ ಮರದ ತುಂಡು, ಪ್ಲಾಸ್ಟಿಕ್ ಎಲ್ಲಾ ತೀರಕ್ಕೆ ಬಂದು ನಿಲ್ಲುತ್ತವೆ. ಹೀಗಾಗಿ ಮಳೆಯ ತೀವ್ರತೆ ಕಡಿಮೆಯಾದ ಬಳಿಕ ತೆರವುಗೊಳಿಸುವುದಾಗಿ ತಿಳಿಸಿದ್ದಾರೆ.