ಮಾಜಿ ಸಚಿವ ಗೋವಿಂದೇಗೌಡರ ಮನೆಯಲ್ಲಿ ಕಳ್ಳತನ
* ಪುತ್ರ ಹೆಚ್ ಜಿ ವೆಂಕಟೇಶ್ ವಾಸಿಸುತ್ತಿದ್ದ ಎಸ್ಟೇಟ್ ಮನೆಯಲ್ಲಿ ಕಳ್ಳತನ
* ಮನೆಕೆಲಸಕ್ಕಾಗಿ ದಂಪತಿಗಳೆಂದು ಬಂದ ನೇಪಾಳಿಗಳಿಂದ ಕಳ್ಳತನ
NAMMMUR EXPRESS NEWS
ಕೊಪ್ಪ: ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ,ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡರ ಮನೆಯಲ್ಲಿ ಕಳ್ಳತನವಾಗಿದೆ. ಮನೆ ಕೆಲಸಕ್ಕೆ ದಂಪತಿಗಳು ಎಂದು ಹೇಳಿಕೊಂಡು ಬಂದ ಇಬ್ಬರಿಂದ ಉಂಡ ಮನೆಗೆ ಕನ್ನ ಹಾಕಿದ ಕೆಲಸ ನಡೆದಿದೆ.
ತಾಲೂಕಿನ ಹಂರಂದೂರು ಗ್ರಾಮದ ಅಚ್ಚರಡಿಯಲ್ಲಿರುವ ಮಾಜಿ ಶಿಕ್ಷಣ ಸಚಿವರಾದ ಗೋವಿಂದೇಗೌಡರ ಪುತ್ರ ಹೆಚ್ ಜಿ ವೆಂಕಟೇಶ್ ಅವರ ಮಣಿಪುರ ಎಸ್ಟೇಟ್ ಮನೆಯಲ್ಲಿ ಆ. 21 ರ ಗುರುವಾರ ಬೆಳಗಿನ ಜಾವ ಸುಮಾರು 1:30 ರಿಂದ 3:00 ಗಂಟೆಯ ಸುಮಾರಿಗೆ ಮನೆಯ ಹಿಂಬದಿಯ ಬಾಗಿಲು ಒಡೆದು ಮನೆಯಲ್ಲಿದ್ದ ಬೆಲೆಬಾಳುವ ಚಿನ್ನಾಭರಣ ಮತ್ತು ನಗದು ಕಳುವು ಮಾಡಲಾಗಿದೆ. ದಂಪತಿಗಳು ಎಂದು ಹೇಳಿಕೊಂಡು ಕಳೆದೆರಡು ವಾರಗಳ ಹಿಂದೆ ಕೆಲಸಕ್ಕೆ ಬಂದ ಇಬ್ಬರು ನೇಪಾಳಿ ವ್ಯಕ್ತಿಗಳಿಂದ ಕಳ್ಳತನ ನಡೆದಿದ್ದು, ಕದ್ದು ಪರಾರಿಯಾಗಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳರ ಮಾಹಿತಿ ಲಭ್ಯವಾದಲ್ಲಿ ತಕ್ಷಣ ಹತ್ತಿರದ ಪೋಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.