ಕೊಪ್ಪಕ್ಕೆ ಬಂತು ಕಾಡಾನೆ,ಕ್ಷೇತ್ರದಲ್ಲಿ ನಿಲ್ಲದ ಕಾಡಾನೆ ಹಾವಳಿ
* ಕಳೆದೊಂದು ವಾರದಿಂದ ಶೃಂಗೇರಿ ತಾಲೂಕಿನಲ್ಲಿದ್ದ ಆನೆ ಮತ್ತೆ ಕೊಪ್ಪ ತಾಲೂಕಿಗೆ
* ಸ್ಥಳೀಯರಲ್ಲಿ ಭಾರೀ ಆತಂಕ ಸೃಷ್ಠಿ,ಕೂಡಲೇ ಆನೆ ಹಿಡಿಯುವಂತೆ ಒತ್ತಾಯ
NAMMMUR EXPRESS NEWS
ಕೊಪ್ಪ: ಕಳೆದೊಂದು ವಾರದಿಂದ ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾ ಪಂ ವ್ಯಾಪ್ತಿಯ ನೇತ್ರವಳ್ಳಿ,ಅಣ್ಣುಕೊಡಿಗೆ,ಕವಿಲುಕೊಡಿಗೆ,ಬೇಗಾನೆ,ಹಿಂಬ್ರವಳ್ಳಿ ಮುಖಾಂತರ ಹೊಳೆಕೊಪ್ಪ ಗ್ರಾ ಪಂ ವ್ಯಾಪ್ತಿಯ ಹಳಕ,ಗಾಳಿಗುಡ್ಡ ವ್ಯಾಪ್ತಿಯಲ್ಲಿ ಓಡಾಡಿ ಈಗ ಕೊಪ್ಪ ತಾಲೂಕು ಶಾನುವಳ್ಳಿ ಗ್ರಾ ಪಂ ವ್ಯಾಪ್ತಿಯ ಕರುವಾನೆ ಹಾಗೂ ತಲಗೋಡು ಗುಡ್ಡದ ಮಧ್ಯ ಭಾಗದಲ್ಲಿ ಕಾಣಿಸಿಕೊಂಡಿದ್ದು, ಗ್ರಾಮದ ಸಮೀಪವಿರುವ ಕಾಡಿನ ಮಧ್ಯದಲ್ಲಿ ಮಲಗಿರುವ ಒಂಟಿಸಲಗದಿಂದ ಗ್ರಾಮಸ್ಥರಲ್ಲಿ ಭಾರೀ ಆತಂಕ ಸೃಷ್ಠಿಯಾಗಿದೆ.
ಕಳೆದೆರಡು ವಾರಗಳಿಂದ ಕೊಪ್ಪ ಹಾಗೂ ಶೃಂಗೇರಿ ಭಾಗದಲ್ಲಿ ಬಾರೀ ಉಪದ್ರ ನೀಡುತ್ತಿರುವ ಕಾಡಾನೆ ರೈತರ ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆಹಾನಿ ಮಾಡಿದೆ. ಶಾನುವಳ್ಳಿ,ಬಿಲಗದ್ದೆ,ಹಿಂಬ್ರವಳ್ಳಿ ಭಾಗದ ಜನರು ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ. ಮತ್ತೆ ಕೊಪ್ಪ ತಾಲೂಕಿಗೆ ಪ್ರಶೇಶಿಸಿರುವ ಕಾಡಾನೆಯಿಂದ ಆತಂಕಗೊಂಡಿರುವ ಗ್ರಾಮಸ್ಥರು ಜೀವಹಾನಿಯಾಗುವ ಮೊದಲು ಕೂಡಲೇ ಒಂಟಿಸಲಗವನ್ನು ಹಿಡಿದು ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ.
ಮೊನ್ನೆ ಕಾಡಾನೆ ಉಪಟಳದಿಂದ ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿ ತಾಲುಕಿನ ಮಲೆನಾಡು ನಾಗರೀಕ ಹಿತರಕ್ಷಣಾ ಸಮಿತಿಯು ತಾಲೂಕಿನ ಅರಣ್ಯ ಇಲಾಖೆಯ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಸ್ಥಳಕ್ಕೆ ಡಿಎಫ್ಓ ಬರುವಂತೆ ಹಾಗೂ ಕಾಡಾನೆ ಹಿಡಿಯುವಂತೆ ಆಗ್ರಹಿಸಿದರು. ಅದರಂತೆ ಸ್ಥಳಕ್ಕಾಗಮಿಸಿದ ಡಿಎಫ್ಓ ಆನೆಯನ್ನು ಓಡಿಸುವುದಾಗಿ ತಿಳಿಸಿದ್ದರು. ಆದರೆ ಓಡಿಸುವುದರಿಂದ ಶಾಶ್ವತ ಪರಿಹಾರ ಸಿಗುವುದಿಲ್ಲ ಓಡಿಸಿದ ಆನೆ ಅಥವಾ ಬೇರೆ ಆನೆ ಬರುವುದಿಲ್ಲ ಎಂದು ಯಾವ ಗ್ಯಾರಂಟಿ ಇದೆ ಸಾಧ್ಯವಿಲ್ಲ ಆನೆಯನ್ನು ಕೂಡಲೇ ಸೆರೆಹಿಡಿದು ಸ್ಥಳಾಂತರಿಸಿ ಹಾಗೂ ಮುಂದೆ ಯಾವ ಕಾಡು ಪ್ರಾಣಿಗಳು ಜನ ವಸತಿ ಪ್ರದೇಶಗಳಿಗೆ ಬರದಂತೆ ಶಾಶ್ವತ ಪರಿಹಾರ ಸೂಚಿಸುವಂತೆ ಒತ್ತಾಯಿಸಿದ ಪ್ರತಿಭಟನಾಕಾರರನ್ನು ಕೊನೆಗೂ ಮನವೊಲಿಸುವಲ್ಲಿ ಡಿಎಫ್ಓ ಯಶಸ್ವಿಯಾಗಿ ಆನೆದಾಳಿಯಿಂದ ಶಾಶ್ವತ ಪರಿಹಾರ ಒದಗಿಸುವ ಹಾಗೂ ಈಗಾಗಲೇ ದಾಳಿಯಿಂದ ಹಾನಿಯಾಗಿರುವ ಬೆಳೆಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು. ಈಗ ಶೃಂಗೇರಿ ತಾಲೂಕು ದಾಟಿ ಮತ್ತೆ ಕೊಪ್ಪ ತಾಲೂಕಿಗೆ ಬಂದಿರುವ ಕಾಡಾನೆಯನ್ನು ಹೇಗೆ ಎಲ್ಲಿಗೆ ಓಡಿಸಲಾಗುತ್ತದೆ ಎಂಬುತು ಆತಂಕ ಸೃಷ್ಠಿಸಿದೆ.
