ಬೇಗಾರಿನಲ್ಲೂ ಕಾಡಾನೆ ಪ್ರತ್ಯಕ್ಷ,ಆತಂಕದಲ್ಲಿ ಗ್ರಾಮಸ್ಥರು
* ತಾರೊಳ್ಳಿಕೊಡಿಗೆ ಗ್ರಾಮದಲ್ಲಿ ಕಳೆದ 20 ದಿನಗಳಿಂದ ಕಾಡಾನೆ ಕಾಟ
* ಪಟಾಕಿಗೂ ಡೋಂಟ್ ಕೇರ್,ಕತ್ತಲಾಯ್ತು ಲೈಟ್ ಅಂತ ಲೈಟ್ ಹಾಕಂಗಿಲ್ಲ
NAMMMUR EXPRESS NEWS
ಶೃಂಗೇರಿ: ತಾಲೂಕಿನ ಅಡ್ಡಗದ್ದೆ ಗ್ರಾಮದಲ್ಲಿ ಕಳೆದ 3 ದಿನಗಳಿಂದ ಒಂಟಿಸಲಗದ ಹಾವಳಿಗೆ ಜನರು ಆತಂಕಗೊಂಡಿರುವ ಬೆನ್ನಲ್ಲೇ ಈಗ ತಾಲೂಕಿನ ಇನ್ನೊಂದು ತುದಿ ಬೇಗಾರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಾರೊಳ್ಳಿಕೊಡಿಗೆ ಗ್ರಾಮದಲ್ಲಿ ಕಾಡಾನೆ ಹಾವಳಿ ಶುರುವಾಗಿದೆ.
ಹೌದು ಬೇಗಾರಿನಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ತಾರೊಳ್ಳಿಕೊಡಿಗೆ ಎಂಬ ಕುಗ್ರಾಮದಲ್ಲಿ ಕಳೆದ 20 ದಿನಗಳಿಂದ ಕಾಡಾನೆ ಹಾವಳಿ ಹೆಚ್ಚಾಗಿದ್ದು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಆದಿವಾಸಿ ಗಿರಜನರೇ ವಾಸವಾಗಿರುವ ಈ ಗ್ರಾಮದಲ್ಲಿ ಕಾಡಾನೆ ಹಾವಳಿಯಿಂದ ಜನರು ಮನೆಯಿಂದ ಹೊರಬರಲಾಗದೇ ತಮ್ಮ ಜಮೀನಿಗೂ ಹೋಗಲಾರದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರೈತರ ಜಮೀನಿಗೆ ನುಗ್ಗಿದ ಕಾಡಾನೆ ತೋಟ,ಗದ್ದೆಗೆ ನುಗ್ಗಿ ಅಪಾರ ಪ್ರಮಾಣದ ಬೆಳೆನಾಶ ಮಾಡಿದೆ.
* ಪಟಾಕಿಗೂ ಡೋಂಟ್ ಕೇರ್, ಸಂಜೆ ಲೈಟ್ ಹಾಕಂಗಿಲ್ಲ
ಕಾಡಾನೆ ಕಾರ್ಯಾಚರಣೆ ಆರಂಭಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಓಡಿಸಲು ಪಟಾಕಿ ಹೊಡಿಯುತ್ತಿದ್ದು ಹಾಗೂ ಆನೆಯಿರುವ ಪ್ರದೇಶದ ಮನೆಗಳಿಗೆ ಪಟಾಕಿ ಕೊಟ್ಟಿದ್ದಾರೆ,ಆದರೆ ಆನೆ ಪಾಟಾಕಿ ಸದ್ದಿಗೆ ಕೇರ್ ಮಾಡದೇ ಬೆಳೆನಾಶ ಮಾಡುತ್ತಿದೆ. ಸಂಜೆ ಕತ್ತಲಾಯಿತು ಎಂದು ಮನೆಗಳಲ್ಲಿ ವಿದ್ಯುತ್ ಲೈಟ್ ಹಾಕಿದರೆ ಲೈಟ್ ಬೆಳಕಿರುವ ಕಡೆ ಆನೆ ಬಂದು ನಿಲ್ಲುತ್ತದೆ.ರಾತ್ರಿ ಏನೋ ಸದ್ದಾಯಿತು ಎಂದು ಟಾರ್ಚ್ ಲೈಟ್ ಬಿಟ್ಟರೆ ಕ್ಷಣಮಾತ್ರದಲ್ಲಿ ಲೈಟ್ ಹಾಕಿದವರ ಕಡೆ ಬರುತ್ತಿದೆ ಎಂದು ಅಲ್ಲಿನ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅಲ್ಲಿಂದ ಶಾಲಾಕಾಲೇಜಿಗೆ,ಕೆಲಸಕ್ಕೆಂದು ವಿದ್ಯಾರ್ಥಿಗಳು ಕಾಡುದಾರಿಯಲ್ಲೇ ಓಡಾಡಬೇಕಾಗಿದ್ದು ಆನೆ ಯಾವಾಗ ಎಲ್ಲಿಂದ ದಾಳಿ ಮಾಡುವುದು ಎಂಬ ಭಯದಲ್ಲೇ ಓಡಾಡುವಂತಾಗಿದೆ. ತಕ್ಷಣ ಕಾಡಾನೆ ಹಾವಳಿಯಿಂದ ನಮಗೆ ಶಾಶ್ವತ ಪರಿಹಾರ ನೀಡಬೇಕು,ಸಂಬಂಧಪಟ್ಟ ಇಲಾಖೆ,ಜನಪ್ರತಿನಿಧಿಗಳು,ಶಾಸಕರು ಈ ಬಗ್ಗೆ ಗಮನಹರಿಸಬೇಕೆಂದು ಆಗ್ರಹಿಸಿದ್ದಾರೆ.
ಕಾಡಾನೆ ದಾಳಿ ಸ್ಥಳಕ್ಕೆ ಮಾಜಿ ಗ್ರಾ ಪಂ ಅಧ್ಯಕ್ಷರಾದ ಸುರೇಶ್ ಜಟಗೇಶ್ವರ,ಮಾಜಿ ತಾ ಪಂ ಅಧ್ಯಕ್ಷ ನೂತನ್ ಕುಮಾರ್,ಮಾಜಿ ತಾ ಪಂ ಸದಸ್ಯ ಪದ್ಮನಾಭ ಭಟ್ಟ್,ಗಿರೀಶ್ ಹುಕ್ಳಿ,ನಡುತೋಟ ಸತೀಶ್ ಭಟ್ ಇತರರು ಭೇಟಿ ನೀಡಿ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
