ನಟ ನಟಿಯರು ದೇವರಲ್ಲ, ದೆವ್ವಗಳಂತಾಗಿದ್ದಾರೆ…!
– ಇಂದಿನ ತಾರೆಯರ ಬಗ್ಗೆ ಸಾಣೇಹಳ್ಳಿ ಪಂಡಿತರಾಧ್ಯ ಸ್ವಾಮೀಜಿ ಬೇಸರ
– ಅಭಿಮಾನಿಗಳ ಹುಚ್ಚು ಅಭಿಮಾನ: ಸ್ವಾಮೀಜಿ ಹೇಳಿದ್ದೇನು..?
NAMMUR EXPRESS NEWS
ಹೊಸದುರ್ಗ: ಇತ್ತೀಚಿನ ದಿನಗಳಲ್ಲಿ ಚಿತ್ರನಟ ನಟಿಯರನ್ನು ಅಭಿಮಾನಿಗಳು ದೇವರೆಂದು ಭಾವಿಸಲಾಗುತ್ತಿದ್ದಾರೆ. ಹಿಂದಿನ ಬಹಳಷ್ಟು ನಟ ನಟಿಯರು ದೇವರಂತೆ ನಡೆದುಕೊಂಡಿದ್ದಾರೆ. ಆದರೆ ಇಂದಿನ ನಟ ನಟಿಯರು ದೆವ್ವಗಳಂತೆ ವರ್ತಿಸುತ್ತಿದ್ದಾರೆ ಎಂದು ಸಾಣೇಹಳ್ಳಿ ಪಂಡಿತರಾಧ್ಯ ಸ್ವಾಮೀಜಿ ಬೇಸರ ವ್ಯಕ್ತ ಪಡಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಸಂಬಂದ ಸಾಣೇಹಳ್ಳಿ ಶ್ರೀ ಮಠದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು ಚಲನ ಚಿತ್ರನಟ ನಟಿಯರಲ್ಲಿ ಆರ್ಥಿಕ ಸಂಪನ್ಮೂಲ ಹೆಚ್ಚಾದಂತೆಲ್ಲಾ ಗುಂಪುಗಾರಿಕೆ ಹೆಚ್ಚುತ್ತಿದೆ. ತಮ್ಮ ಸುತ್ತ ಅಭಿಮಾನಿಗಳ ತಂಡವನ್ನು ರಚಿಸಿಕೊಳ್ಳಲಾಗುತ್ತಿದೆ. ಇಂತಹ ಅಭಿಮಾನಿ ತಂಡದಲ್ಲಿದ್ದವರು ಜವಾಬ್ದಾರಿಯಿಲ್ಲದವರಾಗಿದ್ದು ಕೇವಲ ಹುಚ್ಚೆದ್ದು ಕುಣಿಯುವವರಾಗಿದ್ದಾರೆ ಎಂದರು.
ದರ್ಶನ್ ಬಗ್ಗೆ ಸ್ವಾಮೀಜಿ ಬೇಸರ!
ಹಿಂದೆ ಸಾಣೇಹಳ್ಳಿಗೆ ದರ್ಶನ್ ಬಂದಿದ್ದರು ಆಗ ಸರಳವಾಗಿದ್ದರು . ರಂಗ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿದ್ದರು. ನಟನೆಯ ಮೂಲಕ ಜನರಿಗೆ ಸಾಮಾಜಿಕ ಕಳಕಳಿ ಮೂಡಿಸಬೇಕಾದವರು ಮೃಗೀಯ ವರ್ತನೆ ಮಾಡಿರುವುದು ಸರಿಯಲ್ಲ. ಅಪರಾಧಿಗಳಿಗೆ ಶಿಕ್ಷೆಯಾಗಲಿ ಆದರೆ ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು ಎಂದರು.
ಎಲ್ಲಾ ಜನರಲ್ಲೂ ದೌರ್ಬಲ್ಯಗಳಿರುತ್ತವೆ. ಆದರೆ ಯಾವ ಕ್ರೂರಿಯೂ ಇಂತಹ ಕೆಲಸ ಮಾಡಲಾರ. ಇದೊಂದು ಅಮಾನುಷ ಕೆಲಸ, ಇಲ್ಲಿ ಪೋಲೀಸರು ತುಂಬಾ ಜವಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಕ್ರೂರಿಗಳಿಗೆ ನೀಡುವ ಶಿಕ್ಷೆ ಇನ್ನೊಬ್ಬರಿಗೆ ಎಚ್ಚರಿಕೆ ನೀಡುವಂತಿರಬೇಕು ಎಂದು ತಿಳಿಸಿದ್ದಾರೆ.
