ಕೊಪ್ಪದ ಕುಂಚೂರಲ್ಲಿ ಮದ್ಯವರ್ಜನ ಶಿಬಿರ: ಹಲವರಿಗೆ ನವ ಜೀವನ!
– ಮದ್ಯಪಾನ ಮಾಡಿ ಜೀವನ ಹಾಳು ಮಾಡಿಕೊಳ್ಳಬೇಡಿ: ಹರಿಹರಪುರ ಮಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಮಹಾಸ್ವಾಮಿ
– ನನ್ನ ಹುಟ್ಟೂರಿನಲ್ಲಿಯೇ ಒಳ್ಳೆ ಕೆಲಸ ಖುಷಿ ತಂದಿದೆ: ಅನಿಲ್ ಕುಮಾರ್
NAMMUR EXPRESS NEWS
ತೀರ್ಥಹಳ್ಳಿ: ಪ್ರಾಣಿ ಪಕ್ಷಿಗಳಿಗೆ ಮಳೆ ಗಾಳಿ ಬಿಸಿಲು ಕುಟುಂಬ ಸಂಬಂಧ ಇದು ಯಾವುದರ ಅರಿವೇ ಇರುವುದಿಲ್ಲ. ಆದರೆ ಎಲ್ಲ ಜನ್ಮಗಳಿಗೆ ಶ್ರೇಷ್ಠವಾದ ಮಾನವ ಜನ್ಮಕ್ಕೆ ಅದರದೇ ಆದ ಬೆಲೆ ಇದೆ. ಅದನ್ನು ಮದ್ಯಪಾನ ಇನ್ನಿತರ ದುಶ್ಚಟಗಳಿಂದ ಹಾಳು ಮಾಡಿಕೊಂಡು ತಮ್ಮ ಕುಟುಂಬದವರನ್ನು ಬೀದಿಗೆ ತರಬೇಡಿ ಎಂದು ಹರಿಹರಪುರ ಶ್ರೀ ಲಕ್ಷ್ಮೀ ನರಸಿಂಹ ಪೀಠಾಧೀಶ್ವರ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಸ್ವಾಮಿಗಳವರು ತಿಳಿಸಿದರು.
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕುಂಚೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಕೊಪ್ಪ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಚಿಕ್ಕಮಗಳೂರು, ಶ್ರೀ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲ್ಯಾಲ ಉಜಿರೆ, ಸಂಯಮ ಮಂಡಳಿ ಬೆಂಗಳೂರು ಇವರುಗಳ ಮಾರ್ಗದರ್ಶನದಲ್ಲಿ ಶ್ರೀ ವೀರಭದ್ರೇಶ್ವರ ಅನ್ನದಾನ ಸಮಿತಿ ಕೊಪ್ಪ ಇವರ ಸಂಪೂರ್ಣ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ 1799 ನೇ ಮಧ್ಯವರ್ಜನಾ ಶಿಬಿರದ 7ನೇ ದಿನದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಶಿಬಿರಾರ್ಥಿಗಳಿಗೆ ಆಶೀರ್ವಚನ ನೀಡಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಹಳ್ಳಿಗಳಲ್ಲಿ ಬಡತನ ಇರಬಾರದು ಎನ್ನುವ ದೂರ ದೃಷ್ಟಿಯಲ್ಲಿ ಗ್ರಾಮ ಅಭಿವೃದ್ಧಿ ಯೋಜನೆ ಪ್ರಾರಂಭಿಸಿದ್ದು, ಮನೆಯ ಪುರುಷರಿಗೆ ಮದ್ಯಪಾನವೆಂಬ ಕ್ಯಾನ್ಸರ್ ಕಾರಕ ಅಂಟಿಸಿಕೊಂಡು ತಮ್ಮ ದುಡಿಮೆಯ ಹಣವನ್ನು ಖರ್ಚು ಮಾಡಿ ನಂತರ ದೇಹ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದನ್ನು ನೋಡಿ ಮಧ್ಯವರ್ಜನ ಶಿಬಿರವೆಂಬ ಎಂಟು ದಿವಸಗಳ ಈ ಕಾರ್ಯಕ್ರಮ ಮದ್ಯಪಾನ ವ್ಯಸನಿಗಳಿಗೆ ವರವಾಗಿ ಪರಿಣಮಿಸಿದೆ. ಇಲ್ಲಿ ಸೇರಿರುವ 68 ಜನ ಶಿಬಿರಾರ್ಥಿಗಳು ಸಂಪೂರ್ಣ ಮಧ್ಯ ಪಾನ ತ್ಯಜಿಸಿ ಹೊಸ ಮುನ್ನುಡಿ ಬರೆಯಿರಿ ಎಂದರು.
ಧರ್ಮಸ್ಥಳ ಯೋಜನೆಯ ಸಿಇಓ ನಮ್ಮ ಆಸ್ತಿ: ಹರಿಹರಪುರ ಶ್ರೀ
ಗ್ರಾಮ ಅಭಿವೃದ್ಧಿ ಯೋಜನೆಯು ಈಗಿನ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ನಮ್ಮೂರಿನ ಆಸ್ತಿ. ಆತ ಇಲ್ಲಿಂದ ಧರ್ಮಸ್ಥಳಕ್ಕೆ ಹೋಗಿ ವಿಜಯ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಾ, ಧರ್ಮಾಧಿಕಾರಿಯವರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಈಗ ಗ್ರಾಮ ಅಭಿವೃದ್ಧಿ ಯೋಜನೆಯ ಅತಿ ದೊಡ್ಡ ಅಧಿಕಾರಿಯಾಗಿ ರಾಜ್ಯವನ್ನು ಪ್ರತಿನಿಧಿಸುತ್ತಿರುವುದರ ಜೊತೆಗೆ ಪರ ರಾಜ್ಯದಲ್ಲೂ ತಮ್ಮ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದ್ದಾರೆ. ಇದು ನಮ್ಮೂರಿಗೆ ಹೆಮ್ಮೆಯ ವಿಷಯ ಎಂದು ನುಡಿದರು.
ನನ್ನ ಹುಟ್ಟೂರಿನಲ್ಲಿಯೇ ಒಳ್ಳೆ ಕೆಲಸ ಖುಷಿ ತಂದಿದೆ…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಧರ್ಮಸ್ಥಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಮಾತನಾಡಿ, ನಾನು ಧರ್ಮಸ್ಥಳದ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಕಾರ್ಯ ಚಟುವಟಿಕೆ ಗಮನಿಸಿ ಕೇಳಿ ತಿಳಿದಿದ್ದ ಧರ್ಮ ಅಧಿಕಾರಿಗಳವರನ್ನು ನನ್ನನ್ನು ತಮ್ಮ ಯೋಜನೆಯಲ್ಲಿ ಕರ್ತವ್ಯ ನಿರ್ವಹಿಸಲು ಕೇಳಿಕೊಂಡಾಗ ನಾನು ಪ್ರಥಮವಾಗಿ ಹರಿಹರ ಪುರದ ಶ್ರೀಗಳನ್ನು ಭೇಟಿ ಮಾಡಿ ಈ ವಿಚಾರ ತಿಳಿಸಿದೆ. ಆಗ ಶ್ರೀಗಳು ಸಂತೋಷದಿಂದ ನಿನ್ನ ಭವಿಷ್ಯದ ಬಾಗಿಲು ತೆರೆದಿದೆ. ಕೂಡಲೇ ಅಲ್ಲಿಗೆ ಹೋಗಿ ಕರ್ತವ್ಯ ನಿರ್ವಹಿಸು ಎಂದು ಆಶೀರ್ವದಿಸಿದರು. ಅದರಂತೆಯೇ ನಾನು ಈಗ ಗ್ರಾಮ ಅಭಿವೃದ್ಧಿ ಯೋಜನೆಯ ಅಧಿಕಾರಿಯಾಗಿ ನನ್ನ ಪ್ರಥಮ ಕಾರ್ಯಕ್ರಮ ನನ್ನ ಹುಟ್ಟೂರಿನಲ್ಲಿಯೇ ಆಗಿದ್ದು ಸಂತೋಷದ ವಿಷಯ. ಶ್ರೀ ಕ್ಷೇತ್ರ ಧರ್ಮಸ್ಥಳ ಅನ್ನದಾನ, ಅಭಯದಾನ, ವಿದ್ಯಾದಾನ, ಔಷದ ದಾನಗಳಲ್ಲಿ ಮುಂಚೂಣಿಯಲ್ಲಿದ್ದು ಗ್ರಾಮ ಅಭಿವೃದ್ಧಿ ಯೋಜನೆ ಸಹಭಾಗಿತ್ವದ ಮಧ್ಯವರ್ಜನ ಶಿಬಿರ ಯಾರು ಮಾಡದಂತಹ ಸಾಧನೆಯಾಗಿದೆ. ಊರಿನ ಜನರೆಲ್ಲ ಸೇರಿ ಒಬ್ಬ ಕುಡುಕನನ್ನು ಆತನ ಕುಡುಕತನ ಹೋಗಲಾಡಿಸಿ ಅವರನ್ನು ನವಜೀವನದ ಹಾದಿಗೆ ಕೊಂಡೊಯ್ಯುವ ಮಹತ್ಕಾರ್ಯ ದೊಡ್ಡ ಸಾಧನೆಯಾಗಿದೆ. ಇಲ್ಲಿ ಸೇರಿರುವ 68 ಜನರು ಹೊಸ ಜೀವನಕ್ಕೆ ಕಾಲಿಟ್ಟು ಇಲ್ಲಿ ತಾಯಿ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಾದ ಶಿಬಿರ ಮಾದರಿ ಶಿಬಿರವಾಗಲಿ ಎಲ್ಲರೂ ಸಂಕಲ್ಪ ಮಾಡಿ ಎಂದು ನುಡಿದರು.
ರಾಜ್ಯದಲ್ಲಿ ಸೇವೆ ಮಾಡುವ ಅವಕಾಶ: ರಾಜಣ್ಣ ಮೂ. ಕೊರವಿ
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಹುಬ್ಬಳ್ಳಿ ಉಣಕಲ್ಲಿನ ರಾಜಣ್ಣ ಮೂ. ಕೊರವಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯರ ಜನಪರ ಸೇವೆಯನ್ನು ಕಣ್ಣಾರೆ ಕಂಡ ನಾನು ಅವರ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷನಾಗಿದ್ದೇನೆ. ಮಧ್ಯವರ್ಜನ ಶಿಬಿರ ಎಂಬುದು ಮಹತ್ತರ ಕಾರ್ಯವಾಗಿದೆ. ಇದರಿಂದ ರಾಜ್ಯಾದ್ಯಂತ ಪ್ರವಾಸ ಮಾಡುವ ಯೋಗ ನನಗೆ ಲಭಿಸಿದೆ. ಇಲ್ಲಿನ ದೇವರ ಸನ್ನಿಧಿಯಲ್ಲಿ ನಡೆದ ಮಧ್ಯವರ್ಜನ ಶಿಬಿರದ ವ್ಯವಸ್ಥಾಪನೆಯ ಬಗ್ಗೆ ಹೆಮ್ಮೆ ಅನಿಸುತ್ತದೆ ಎಂದರು.
ಮಾಜಿ ಸಚಿವ ಡಿ ಎನ್ ಜೀವರಾಜ್, ನಿರ್ದೇಶಕ ಸದಾನಂದ ಬಂಗೇರ, ಶ್ರೀ ವೀರಭದ್ರೇಶ್ವರ ಅನ್ನದಾನ ಸಮಿತಿಯ ಬಾಲಕೃಷ್ಣ, ಚಿಕ್ಕಮಗಳೂರು ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಅರವಿಂದ ಸೋಮಯಾಜಿ, ಕೊಪ್ಪ ಯೋಜನಾಧಿಕಾರಿ ನಿರಂಜನ, ಚಿತ್ರದುರ್ಗ ಜನಜಾಗೃತಿ ಯೋಜನಾಧಿಕಾರಿ ನಾಗರಾಜ್ ಕುಲಾಲ್, ಹಿಂದೂ ಇಂಗ್ಲಿಷ್ ಪತ್ರಿಕೆಯ ನಾಗೇಶ್ ಪ್ರಭು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಕೆ ಆರ್ ಶ್ರೀನಿವಾಸ್ ಗೌಡ ಉಪಸ್ಥಿತರಿದ್ದರು.
