ಧರ್ಮಸ್ಥಳ ಕೇಸ್: ವಿಚಾರಣೆ ಮತ್ತಷ್ಟು ಟ್ವಿಸ್ಟ್!
– ಹಿಂದೆ ವಿಚಾರಣೆ ನಡೆಸಿದವರ ಮರು ವಿಚಾರಣೆ
– ಕಿಡ್ನಾಪ್ ನೋಡಿದ್ದೆ ಎಂದ ಮಂಡ್ಯದ ಮಹಿಳೆ ಕೂಡ ವಿಚಾರಣೆ!
– ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಕರ್ನಾಟಕದ ಮಠಾಧೀಶರು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರತ್ಯಕ್ಷದರ್ಶಿಗಳು ಹೇಳಿಕೆಗಳನ್ನು ನೀಡಲು ಬರುತ್ತಿರುವುದರಿಂದ, ಕೂಲಂಕಷವಾಗಿ ಪರಿಶೀಲನೆ ನಡೆಸುವ ನಿಟ್ಟಿನಲ್ಲಿ, ಎಸ್ಐಟಿ ತಂಡದಿಂದ ವಿಚಾರಣೆ ಇನ್ನೂ ಮುಂದುವರಿದಿದೆ. ಇದರೊಂದಿಗೆ 2012ರಲ್ಲಿ ಸೌಜನ್ಯಳ ಅತ್ಯಾಚಾರಕ್ಕೆ ಸಂಬಂಧಿಸಿದ ಸಂಗತಿಯ ಕುರಿತು ಕೂಡ ಎಸ್ಐಟಿ ವಿಚಾರಣೆಯನ್ನು ನಡೆಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ, ಅತ್ಯಾಚಾರ ವಿಚಾರದಲ್ಲಿ ಆರೋಪಮುಕ್ತರಾಗಿದ್ದ ಉದಯ್ ಜೈನ್, ಧೀರಜ್ ಕೆಲ್ಲ ಮತ್ತು ಮಲ್ಲಿಕ್ ಜೈನ್ ಗೆ ಎಸ್ಐಟಿ ಕರೆ ನೀಡಿದ್ದು, ಉದಯ್ ಜೈನ್ ಬುಧವಾರದಂದು ಎಸ್ಐಟಿ ಮುಂದೆ ಹಾಜರಾಗಿ, ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ. ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ಮಂಡ್ಯದ ಚಿಕ್ಕಕೆಂಪಮ್ಮ ಎಂಬ ಮಹಿಳೆಯು “ಸೌಜನ್ಯ ಅತ್ಯಾಚಾರ ನಡೆದ ದಿನ ನಾನು ಧರ್ಮಸ್ಥಳಕ್ಕೆ ತೆರಳಿದ್ದೆ. ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆದು, ಪೂಜೆಯನ್ನು ಸಲ್ಲಿಸಿ, ಪ್ರಕೃತಿ ಚಿಕಿತ್ಸಾಲಯದತ್ತ ಹೋಗುತ್ತಿದ್ದ ಸಂದರ್ಭದಲ್ಲಿ, ಹುಡುಗಿಯೊಬ್ಬಳನ್ನು ಎಳೆದುಕೊಂಡು ಹೋಗುತ್ತಿರುವುದನ್ನು ನಾನು ಕಂಡೆ” ಎಂದು ಎಸ್ಐಟಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ, ಆಕೆಯನ್ನು ಕೂಡ ಪ್ರತ್ಯಕ್ಷದರ್ಶಿ ಎಂದು ಪರಿಗಣಿಸಿ, ವಿಚಾರಣೆಗೆ ಕರೆಯಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಕರ್ನಾಟಕದ ಮಠಾಧೀಶರು
ಧರ್ಮಸ್ಥಳ ಪ್ರಕರಣ ಸ೦ಬ೦ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕರ್ನಾಟಕ ಸ್ವಾಮೀಜಿಗಳು ಭೇಟಿಯಾಗಿದ್ದಾರೆ. ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕು ಎಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದಾರೆ. ಪಂಚಮಸಾಲಿ ಲಿಂಗಾಯತ ಮಠದ ವಚನಾನಂದ ಸ್ವಾಮೀಜಿ ನೇತೃತ್ವದ ಸನಾತನ ಸಂತ ನಿಯೋಗವು ದೆಹಲಿಗೆ ತೆರಳಿ ಖುದ್ದು ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸೇರಿ ವಿವಿಧ ಪೀಠಗಳ 8 ಸ್ವಾಮೀಜಿಗಳ ನಿಯೋಗದಲ್ಲಿದ್ದರು. ಧರ್ಮಸ್ಥಳ ಪ್ರಕರಣದ ಎಲ್ಲಾ ಬೆಳವಣಿಗೆಗಳನ್ನ ನಾನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಧರ್ಮಸ್ಥಳ ಪ್ರಕರಣ ಬಗ್ಗೆ ಕ್ಯಾಬಿನೆಟ್ ನೇತೃತ್ವದಲ್ಲಿ ಸಭೆ ನಡೆಸುತ್ತೇವೆ. ಸಭೆಯ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅಮಿತ್ ಶಾ ತಿಳಿಸಿದ್ದಾರೆ.