ಕರಾವಳಿ ಟಾಪ್ 3 ನ್ಯೂಸ್
• ಕಾಪು: ಅವಳಿ ಕರುಗಳಿಗೆ ಜನ್ಮ ನೀಡಿದ ಗೋಮಾತೆ..!
• ಬಂಟ್ವಾಳ: ಸೆನ್ ಪೊಲೀಸ್ ಠಾಣೆ ಬಂಟ್ವಾಳಕ್ಕೆ ಸ್ಥಳಾಂತರ
• ಉಡುಪಿ: ವಾಷಿಂಗ್ ಮೆಷಿನ್ ನಲ್ಲಿ ಬೆಂಕಿ: ಏನಿದು..?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಾಪು: ಕೃಷಿ ಮತ್ತು ಅಡುಗೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ, ಕುಂಜಾರುಗಿರಿ ಪಾಜೈ ಗ್ರಾಮದ ಬಾಲಕೃಷ್ಣ ಭಟ್ ಎನ್ನುವವರ ಮನೆಯಲ್ಲಿ, ಗೋಮಾತೆಯು ಅವಳಿಗೆ ಕರುಗಳಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಅದರಲ್ಲಿ ಒಂದು ಗಂಡು ಮತ್ತು ಇನ್ನೊಂದು ಹೆಣ್ಣು ಕರುವಾಗಿದ್ದು, ಎರಡೂ ಆರೋಗ್ಯಯುತವಾಗಿದೆ ಎನ್ನುವುದು ತಿಳಿದುಬಂದಿದೆ. ಅವಳಿ ಕರುಗಳ ಜನನವನ್ನು ಕಂಡು, ಬಾಲಕೃಷ್ಣ ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಮಂಗಳವಾರದಂದು ಎರಡು ಕರುಗಳು ಮನೆಗೆ ಆಗಮಿಸಿರುವುದು ಲಕ್ಷ್ಮೀಯ ಕೃಪೆಯೇ ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
• ಸೆನ್ ಪೊಲೀಸ್ ಠಾಣೆ ಬಂಟ್ವಾಳಕ್ಕೆ ಸ್ಥಳಾಂತರ
ಬಂಟ್ವಾಳ: ಇತ್ತೀಚಿನ ದಿನಗಳಲ್ಲಿ ಸೆನ್ ಪೊಲೀಸ್ ಠಾಣೆಗೆ ಸಂಬಂಧಿಸಿದ ಪ್ರಕರಣಗಳೇ ಅಧಿಕ ಪ್ರಮಾಣದಲ್ಲಿ ಘಟಿಸುತ್ತಿರುವುದರಿಂದ, ಅದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಮಂಗಳೂರಿಗೇ ಹೋಗಬೇಕಾಗುತ್ತಿತ್ತು. ಇದರಿಂದ ಹಲವರಿಗೆ ಸಮಸ್ಯೆ ಉಂಟಾಗುತ್ತಿತ್ತು. ಇದನ್ನು ಮನಗಂಡ ಸರ್ಕಾರವು, ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆನ್ ಪೊಲೀಸ್ ಠಾಣೆಯನ್ನು ಬಂಟ್ವಾಳಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯ ಹಿಂಬದಿಯಲ್ಲಿರುವ, ಠಾಣೆಗೆ ಸಂಬಂಧಿಸಿದ ಹಳೆಯ ಕಟ್ಟಡವೊಂದನ್ನು ಮಂಗಳೂರು ನಿರ್ಮಿತಿ ಕೇಂದ್ರದ ಮೂಲಕ ನವೀಕರಿಸುವ ಕಾಮಗಾರಿಯು ತ್ವರಿತಗತಿಯಲ್ಲಿ ನಡೆಯುತ್ತಿದೆ. ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ಮತ್ತು ಉಳ್ಳಾಲ ತಾಲ್ಲೂಕಿನ ಕೆಲವು ಗ್ರಾಮಗಳು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ. ಸಾಮಾನ್ಯ ಪ್ರಕರಣಗಳಿಗೇನೋ ಆಯಾಯ ಪ್ರದೇಶಗಳಲ್ಲಿ ಠಾಣೆಗಳಿವೆ. ಆದರೆ, ಸೈಬರ್ ಸಂಬಂಧಿತ ಪ್ರಕರಣಗಳಿಗೆ ಸೆನ್ ಠಾಣೆಗೇ ದೂರು ನೀಡಬೇಕಾಗುತ್ತದೆ. ಮಂಗಳೂರು ತನಕ ಹೋಗಬೇಕೆನ್ನುವ ಕಾರಣಕ್ಕಾಗಿ, ಕೆಲವರು ದೂರು ನೀಡದೆ ಸುಮ್ಮನಿದ್ದು ಬಿಡುತ್ತಿದ್ದರು. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ಬಂಟ್ವಾಳಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಯಿತು ಎನ್ನಲಾಗಿದೆ. ಇದು ಬಿ.ಸಿ. ರಸ್ತೆಯಲ್ಲಿರುವ ಬಂಟ್ವಾಳ ನಗರ ಠಾಣೆಯ ಆವರಣಕ್ಕೆ ಬರುವುದರಿಂದ, ಜಿಲ್ಲಾ ಪೊಲೀಸ್ ಠಾಣೆಯ ವ್ಯಾಪ್ತಿಯ ಜನತೆಗೆ ಬಹಳ ಅನುಕೂಲವಾಗಲಿದೆ. ಇದಕ್ಕೆ ಸುಮಾರು 35 ಲಕ್ಷ ರೂಪಾಯಿ ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ.
• ಉಡುಪಿ: ವಾಷಿಂಗ್ ಮೆಷಿನಲ್ಲಿ ಬೆಂಕಿ..!
ಉಡುಪಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ವಾಷಿಂಗ್ ಮೆಷಿನ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ, ಜಿಲ್ಲಾಧಿಕಾರಿಗಳ ಕಚೇರಿ ರಸ್ತೆಯಲ್ಲಿರುವ ವಸತಿ ಸಮುಚ್ಚಯದ ಮನೆಯೊಂದರಲ್ಲಿ ನಡೆದಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಯವರು ಸಾರ್ವಜನಿಕರ ನೆರವಿನೊಂದಿಗೆ ಬೆಂಕಿಯನ್ನು ಆರಿಸಿ, ಮನೆಯೊಳಗಿದ್ದ ಮಹಿಳೆಯನ್ನು ರಕ್ಷಿಸಿ, ಅಪಾಯದಿಂದ ಪಾರು ಮಾಡಿದ್ದಾರೆ. ಬೆಂಕಿಯ ಪರಿಣಾಮದಿಂದಾಗಿ ವಸತಿ ಸಮುಚ್ಚಯದ ತುಂಬೆಲ್ಲ ಹೊಗೆ ತುಂಬಿಕೊಂಡಿತ್ತು ಎನ್ನಲಾಗಿದೆ.