Categories
ಡೆಲ್ಲಿ

ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್..!!

ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್..!!
– ಉಜ್ವಲ ಯೋಜನೆಗೆ 12 ಸಾವಿರ ಕೋಟಿ ರೂ ಮೀಸಲು
– ಗೃಹಬಳಕೆ LPG ಸಿಲಿಂಡರ್‌ಗೆ 300 ರೂ. ಸಬ್ಸಿಡಿಗೆ ನಿರ್ಧಾರ

NAMMUR EXPRESS NEWS
ಹೊಸದಿಲ್ಲಿ: ಮಹಿಳೆಯರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. ಉಜ್ವಲ ಯೋಜನೆಗೆ 12 ಸಾವಿರ ಕೋಟಿ ರೂ. ನಿಗದಿ ಮಾಡಿದ್ದು, ಗೃಹಬಳಕೆ LPG ಸಿಲಿಂಡರ್‌ಗೆ 300 ರೂ. ಸಬ್ಸಿಡಿ ನೀಡುವ ಗುರಿ ಹೊಂದಿದೆ. ಇನ್ನೊಂದೆಡೆ ದೇಶೀಯ ಮಾರುಕಟ್ಟೆಯಲ್ಲಿ ನಿಯಂತ್ರಿತ ದರದಲ್ಲಿ ಅಡುಗೆ ಅನಿಲ ಪೂರೈಸುತ್ತಿರುವ ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ನಷ್ಟ ಸರಿದೂಗಿಸಲು 30 ಸಾವಿರ ಕೋಟಿ ರೂ. ಸಬ್ಸಿಡಿ ಪ್ಯಾಕೇಜ್‌ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಈ ನಿರ್ಧಾರ ಕೈಗೊಂಡಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 12,060 ಕೋಟಿ ರೂ. ಮೌಲ್ಯದ ಸಿಲಿಂಡರ್‌ ಸಬ್ಸಿಡಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಸಂಪುಟ ಸಭೆಯಲ್ಲಿ 2026 ರ ಆರ್ಥಿಕ ವರ್ಷದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನಾ ಫಲಾನುಭವಿಗಳಿಗೆ 12,060 ಕೋಟಿ ರೂ.ಗಳ ಅನುದಾನವನ್ನು ಅನುಮೋದಿಸಿದೆ.

ವರ್ಷಕ್ಕೆ 9 ರೀಫಿಲ್ಸ್‌ ಎಲ್‌ಪಿಜಿಗೆ ಸಬ್ಸಿಡಿ
ಶುಕ್ರವಾರ ಬಿಡುಗಡೆಯಾದ ಅಧಿಕೃತ ಪ್ರಕಟಣೆಯ ಪ್ರಕಾರ, ವರ್ಷಕ್ಕೆ ಒಂಬತ್ತು ರೀಫಿಲ್ಸ್‌ (ಮತ್ತು 5 ಕೆಜಿ ಸಿಲಿಂಡರ್‌ಗೆ ಅನುಪಾತದಲ್ಲಿ) ಗೃಹ ಬಳಕೆ ಸಿಲಿಂಡರ್‌ಗೆ 300 ರೂ. ನಷ್ಟು ಸಬ್ಸಿಡಿ ನೀಡುವ ಗುರಿಯನ್ನು ಹೊಂದಿದೆ. ದೇಶಾದ್ಯಂತ ಬಡ ಕುಟುಂಬಗಳ ಮಹಿಳೆಯರಿಗೆ ಠೇವಣಿ ರಹಿತ ಎಲ್‌ಪಿಜಿ ಸಂಪರ್ಕವನ್ನು ಒದಗಿಸಲು ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು 2016ರ ಮೇ ತಿಂಗಳಲ್ಲಿ ಪ್ರಾರಂಭಿಸಲಾಯಿತು.

ಐಒಸಿಎಲ್‌, ಬಿಪಿಸಿಎಲ್‌ ಮತ್ತು ಎಚ್‌ಪಿಸಿಎಲ್‌ ಕಂಪನಿಗಳಿಗೆ ಈ ಸಬ್ಸಿಡಿ ಪ್ಯಾಕೇಜ್‌ ದೊರೆಯಲಿದ್ದು, 12 ಕಂತುಗಳಲ್ಲಿ ಪರಿಹಾರದ ಹಣ ಜಮೆ ಆಗಲಿದೆ. 2022ರ ಅಕ್ಟೋಬರ್‌ನಲ್ಲಿ 22,000 ಕೋಟಿ ರೂ. ಅನುದಾನ ನೀಡಿದ ನಂತರ ಕೇಂದ್ರ ಸರ್ಕಾರ ಒದಗಿಸಿದ ಎರಡನೇ ಪ್ರಮುಖ ಪರಿಹಾರ ಇದಾಗಿದೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ದರ ಏರಿಳಿತದಿಂದ ಗ್ರಾಹಕರನ್ನು ರಕ್ಷಿಸುವ ಹಾಗೂ ಸಾರ್ವಜನಿಕ ವಲಯದ ತೈಲ ಕಂಪನಿಗಳ ಆರ್ಥಿಕ ಸ್ಥಿತಿ ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಸಬ್ಸಿಡಿ ಪ್ಯಾಕೇಜ್‌ ಘೋಷಿಸಲಾಗಿದೆ.
ತಾಂತ್ರಿಕ ಶಿಕ್ಷಣದಲ್ಲಿ ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನಾ ಸುಧಾರಣೆಗೆ 4,200 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.