ಮೂಡಿಗೆರೆಯಲ್ಲಿ ಜ್ವರಕ್ಕೆ ಮಕ್ಕಳ ಸಾವು,ಪೋಷಕರು ಕಂಗಾಲು
* ಜ್ವರಕ್ಕೆ ಒಂದೇ ಗ್ರಾಮದ 3 ಮಕ್ಕಳು ಸಾವು, 20ಕ್ಕೂ ಅಧಿಕ ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ
* ಜ್ವರದ ಬಗ್ಗೆ ತನಿಖೆ ನಡೆಸುವಂತೆ ಆರೋಗ್ಯ ಇಲಾಖೆಗೆ ತಾಲೂಕಿನ ಜನರ ಆಗ್ರಹ
NAMMMUR EXPRESS NEWS
ಮೂಡಿಗೆರೆ: ತಾಲೂಕಿನಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ವರ ಆತಂಕ ಮೂಡಿಸಿದೆ. ಒಂದೇ ಊರಿನ ಇಬ್ಬರು ಮಕ್ಕಳು ಸೇರಿದಂತೆ 8 ತಿಂಗಳ ಶಿಶು ಜ್ವರಕ್ಕೆ ಬಲಿಯಾಗಿದೆ. 20 ಕ್ಕೂ ಅಧಿಕ ಮಕ್ಕಳು ಚಿಕ್ಕಮಗಳೂರು,ಹಾಸನ,ಶಿವಮೊಗ್ಗದ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಧಾರಾಕಾರವಾಗಿಸುರಿಯುತ್ತಿದೆ. ವಾಡಿಕೆ ಪ್ರಮಾಣಕ್ಕಿಂತ ಶೇ 90ಕ್ಕಿಂತ ಹೆಚ್ಚು ಸುರಿದಿರುವ ಮಳೆ ಕೊಂಚ ಬಿಡುವು ನೀಡಿ ಸೂರ್ಯನ ದರ್ಶನ ಮಾಡಿಸಿ, ಮತ್ತೆ ಆರ್ಭಟಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗವಾದ ಮೂಡಿಗೆರೆಯಲ್ಲಿ ಮಳೆಗಾಲದಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ವರ ಪೋಷಕರನ್ನ ಕಂಗಾಲು ಮಾಡಿದೆ.
ಸಾವಿರಾರು ಮಕ್ಕಳಲ್ಲಿ ಜ್ವರದ ಲಕ್ಷಣ ಕಾಣಿಸುತ್ತಿದೆ. ಮಳೆಗಾಲದಲ್ಲಿ ಜ್ವರ, ಶೀತ, ಕೆಮ್ಮಿನ ಲಕ್ಷಣಗಳು ಕಾಣಿಸಿಕೊಳ್ಳುವುದು ಸಹಜ. ಆದರೆ, ಈ ವರ್ಷ ತೀವ್ರ ಸ್ವರೂಪದಲ್ಲಿ ಅದರಲ್ಲೂ 12 ವರ್ಷದ ಮಕ್ಕಳಲ್ಲಿ ಹೆಚ್ಚು ಜ್ವರ ಕಾಣಿಸಿಕೊಂಡು ಆತಂಕ ಸೃಷ್ಟಿ ಮಾಡಿದೆ. ಮೂಡಿಗೆರೆ ತಾಲೂಕಿನ ಹೆಸ್ಗಲ್ ಗ್ರಾಮದಲ್ಲಿ 11 ವರ್ಷದ ಬಾಲಕಿ ಪ್ರೇರಣಾ, 4 ವರ್ಷದ ಬಾಲಕಿ ಸಾರ ತೀವ್ರ ಜ್ವರಕ್ಕೆ ಬಲಿಯಾಗಿದ್ದಾರೆ. ಇನ್ನು ನಂದೀಪುರ ಗ್ರಾಮದ ಸುನೀಲ್ ಮತ್ತು ಸುಮತಿ ದಂಪತಿಯ 8 ತಿಂಗಳ ಮಗು ಕೂಡ ಜ್ವರದಿಂದ ಸಾವನ್ನಪ್ಪಿದೆ.
ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಅಶ್ವಥ್ ಬಾಬು ಸೂಚನೆ ಮೇರೆಗೆ ತಾಲೂಕು ಆರೋಗ್ಯ ಅಧಿಕಾರಿ ಜ್ವರದಿಂದ ಸಾವನ್ನಪ್ಪಿದ ಮಕ್ಕಳು ಸೇರಿದಂತೆ,ಜ್ವರದಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಮಾಹಿತಿ ಸಂಗ್ರಹಿಸಲು ತಂಡ ರಚನೆ ಮಾಡಿದ್ದಾರೆ.
ಯಾವುದೇ ಸಾಂಕ್ರಾಮಿಕ ರೋಗದ ಲಕ್ಷಣ ಮಕ್ಕಳಲ್ಲಿ ಕಾಣಿಸಕೊಳ್ಳದಿದ್ದರೂ ಮಕ್ಕಳು ಜ್ವರಕ್ಕೆ ಬಲಿಯಾಗುತ್ತಿರುವುದು ತಾಲೂಕಿನ ಜನರಲ್ಲಿ ಆತಂಕ ಸೃಷ್ಠಿಸಿದೆ.ಈ ಜ್ವರದ ಬಗ್ಗೆ ಆರೋಗ್ಯ ಇಲಾಖೆ ತನಿಖೆ ನಡೆಸುವಂತೆ ತಾಲೂಕಿನ ಜನತೆ ಆಗ್ರಹಿಸಿದ್ದಾರೆ.