ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಗದೀಪ್ ಧನಕರ್..!!
– ಆರೋಗ್ಯ ಸಮಸ್ಯೆಯಿಂದ ರಾಜೀನಾಮೆ
– ಸಂವಿಧಾನದ 67(a) ವಿಧಿಯ ಪ್ರಕಾರ ರಾಜೀನಾಮೆ
NAMMUR EXPRESS NEWS
ಹೊಸದಿಲ್ಲಿ: ಅನಾರೋಗ್ಯ ಕಾರಣದಿಂದಾಗಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಸೋಮವಾರ(ಜು.21) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ʻಮುಂಗಾರು ಅಧಿವೇಶನದ ಸಮಯದಲ್ಲಿ 74 ವರ್ಷದ ಉಪರಾಷ್ಟ್ರಪತಿ ಜಗದೀಪ್ ಧನ್ಖರ್ ಅವರು ಅನಾರೋಗ್ಯದ ಕಾರಣದಿಂದ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವೈದ್ಯರ ಸಲಹೆ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
– ಆರೋಗ್ಯ ಸಮಸ್ಯೆಯಿಂದ ರಾಜೀನಾಮೆ
ರಾಷ್ಟ್ರಪತಿಯವರಿಗೆ ಬರೆದ ಪತ್ರದಲ್ಲಿ, ಸಂವಿಧಾನದ 67(a) ವಿಧಿಯ ಪ್ರಕಾರ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ. ʻಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಕಾರಣ ವೈದ್ಯರ ಸಲಹೆ ಮೇರೆಗೆ ನಾನು ಭಾರತದ ಉಪಾಧ್ಯಕ್ಷ ಸ್ಥಾನಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆʼ ಎಂದು ಜಗದೀಪ್ ಧನಕರ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಸಂಸತ್ತಿನ ಸದಸ್ಯರಿಂದ ದೊರೆತ ಸಹಕಾರ ಮತ್ತು ಪ್ರೀತಿಯನ್ನು ಸ್ಮರಿಸಿದ್ದಾರೆ. ʻದೇಶದ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ರಾಷ್ಟ್ರಪತಿ ಮುರ್ಮು, ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಸಂಸತ್ತಿನ ಎಲ್ಲಾ ಗೌರವಾನ್ವಿತ ಸದಸ್ಯರಿಂದ ನನಗೆ ದೊರೆತ ಪ್ರೀತಿ, ವಿಶ್ವಾಸ ಮತ್ತು ವಾತ್ಸಲ್ಯವನ್ನು ನಾನು ಸದಾ ನೆನಪಿಟ್ಟುಕೊಳ್ಳುತ್ತೇನೆ. ಭಾರತದ ಗಮನಾರ್ಹ ಆರ್ಥಿಕ ಪ್ರಗತಿ ಮತ್ತು ಅಭೂತಪೂರ್ವ ಅಭಿವೃದ್ಧಿಯನ್ನು ನೋಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯʼ ಎಂದು ಪತ್ರದಲ್ಲಿ ಹೇಳಿದ್ದಾರೆ.
ದೈವೇಚ್ಛೆಗೆ ಅನುಗುಣವಾಗಿ ನಿವೃತ್ತಿ : ಇತ್ತೀಚೆಗೆ ದೆಹಲಿಯ ಜೆಎನ್ಯು ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ನಾನು ಸೂಕ್ತ ಸಮಯದಲ್ಲಿ, ಆಗಸ್ಟ್ 2027 ರಲ್ಲಿ ದೈವೇಚ್ಛೆಗೆ ಅನುಗುಣವಾಗಿ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದ್ದರು. ಆದರೆ, ಹೇಳಿಕೆ ಕೊಟ್ಟ ಕೆಲವೇ ದಿನಕ್ಕೆ ರಾಜೀನಾಮೆ ಕೊಟ್ಟಿರುವುದು ರಾಜಕೀಯ ವಲಯದಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ.
ವೃತ್ತಿಯಲ್ಲಿ ವಕೀಲರಾಗಿದ್ದ ಧನಕರ್, ಉಪರಾಷ್ಟ್ರಪತಿಯಾಗುವ ಮೊದಲು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದರು. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಅವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ನಾಮನಿರ್ದೇಶನ ಮಾಡಿತ್ತು. ಧನಕರ್ ಅವರು ಭಾರತದ 14ನೇ ಉಪರಾಷ್ಟ್ರಪತಿ. ಅವರ ಅಧಿಕಾರಾವಧಿ 2027ರ ಆಗಸ್ಟ್ 10ರವರೆಗೆ ಇತ್ತು. ಆದರೆ, ಆರೋಗ್ಯ ಸಮಸ್ಯೆಯಿಂದ ಅಧಿಕಾರವಧಿ ಮುಕ್ತಾಯಕ್ಕೂ ಮುನ್ನವೇ ರಾಜೀನಾಮೆ ಸಲ್ಲಿಸಿದ್ದಾರೆ.