ಪಿಯು ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ!
– ಸರ್ಕಾರದ ಘೋಷಣೆ: ಯಾರಿಗೆ ಸಿಗುತ್ತೆ ಬುಕ್ಸ್
– ಸರ್ಕಾರಿ, ಅನುದಾನಿತ ಕಾಲೇಜುಗಳಿಗೆ ವಿತರಣೆ
– ಈ ವರ್ಷದಿಂದ ಜಾರಿ: ಏನಿದು ಹೊಸ ಯೋಜನೆ..?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಇನ್ನು ಮುಂದೆ ಪಿಯು ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕವನ್ನು ಸರ್ಕಾರವೇ ನೀಡಲಿದೆ. ಇಂತಹ ಮಹತ್ವದ ಘೋಷಣೆಯನ್ನು ರಾಜ್ಯ ಸರ್ಕಾರದ ಮಾಡಿದೆ. ರಾಜ್ಯದಲ್ಲಿ ಇದುವರೆಗೆ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ನೀಡುವ ಪದ್ಧತಿಯು ಪ್ರೌಢಶಾಲೆಯವರೆಗೆ ಮಾತ್ರ ಸೀಮಿತವಾಗಿತ್ತು. ಆದರೆ, ಇದನ್ನು ದ್ವಿತೀಯ ಪಿಯುಸಿಯ ವರೆಗೂ ವಿಸ್ತರಿಸುವ ಮಹತ್ವದ ನಿರ್ಣಯವನ್ನು ರಾಜ್ಯ ಸರ್ಕಾರವು ಘೋಷಿಸಿದೆ. ಸರ್ಕಾರದ ಈ ಸೌಲಭ್ಯದಿಂದಾಗಿ ಪದವಿ ಪೂರ್ವ ಶಿಕ್ಷಣವನ್ನು ಪಡೆಯುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮತ್ತಷ್ಟು ಅನುಕೂಲವಾಗಲಿದೆ. ಅಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪೋಷಕರಿಗೆ ಆರ್ಥಿಕ ಹೊಣೆಯನ್ನು ಸಹ ಕಡಿಮೆಗೊಳಿಸಿದಂತಾಗಿದೆ.
ಯಾರಿಗೆ ಸಿಗುತ್ತೆ ಬುಕ್ಸ್?… ಯಾವಾಗ ವಿತರಣೆ..?
ಈಗಾಗಲೇ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಪೂರ್ಣಗೊಂಡು, ಫಲಿತಾಂಶಗಳು ಕೂಡ ಹೊರಬಿದ್ದಿದ್ದು, ಪದವಿ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗಿ ಸರ್ಕಾರವು ಒಂದು ನಿರ್ಧಾರವನ್ನು ಕೈಗೊಂಡಿದೆ. ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ಪ್ರಸ್ತುತ 1319 ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಮತ್ತು 815 ಅನುದಾನಿತ ಪದವಿ ಪೂರ್ವ ಕಾಲೇಜುಗಳಿದ್ದು, ಇದರಲ್ಲಿ ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರ ಆಧಾರದ ಮೇಲೆ ಒಟ್ಟು 34 ವಿಷಯಗಳ ಕುರಿತ ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ.
2026-27ನೇ ಸಾಲಿನ ಶೈಕ್ಷಣಿಕ ವರ್ಷದಿಂದಲೇ ಜಾರಿ
ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿಯ ವರೆಗೆ ಪಠ್ಯಪುಸ್ತಕಗಳು ಮತ್ತು ಕಾರ್ಯಪುಸ್ತಕಗಳ ವಿತರಣೆಗೆ ರಾಜ್ಯದ ಶಿಕ್ಷಣ ಇಲಾಖೆಯು ಒಟ್ಟು 30.83 ಕೋಟಿ ರೂಪಾಯಿಗಳಷ್ಟು ಹಣವನ್ನು ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿತ್ತು. ಇದೀಗ ಸರ್ಕಾರವು ಈ ಮೊತ್ತವನ್ನು ಬಿಡುಗಡೆಗೊಳಿಸಲು ಸಮ್ಮತಿ ಸೂಚಿಸಿದ್ದು, 2026-27ನೇ ಸಾಲಿನ ಶೈಕ್ಷಣಿಕ ವರ್ಷದಿಂದಲೇ ಈ ಯೋಜನೆ ಜಾರಿಗೆ ಬರುತ್ತಿದೆ ಎಂದು ರಾಜ್ಯ ಶಿಕ್ಷಣ ಇಲಾಖೆಯು ಅಧಿಕೃತವಾಗಿ ಪ್ರಕಟಣೆಯ ಮೂಲಕ ತಿಳಿಸಿದೆ.








