ಕಾಡಾನೆ ದಾಳಿ: ವ್ಯಕ್ತಿ ಆಸ್ಪತ್ರೆಗೆ ದಾಖಲು
ಹಾಸನ. : ತೋಟದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ನಂದಗೋಡನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಮಂಜುನಾಥ್ (52) ಗಾಯಗೊಂಡವರು. ರೈತ ಮಂಜುನಾಥ್ ತಮ್ಮ ಮನೆಯ ಎದುರಿಗಿರುವ ಕಾಫಿ ತೋಟದಲ್ಲಿ ಬೆಳಗ್ಗೆ 8-30 ರ ಸಮಯದಲ್ಲಿ ಎಂದಿನಂತೆ ಕೆಲಸ ಮಾಡಲು ತೊಡಗಿದ್ದ ವೇಳೆ ಅದೇ ಸ್ಥಳದಲ್ಲಿ ಕಂಡು ಬಂದ ಮೂರು ಕಾಡಾನೆಗಳ ಪೈಕಿ ಒಂದು ಕಾಡಾನೆ ಮಂಜುನಾಥ್ ಮೇಲೆ ದಾಳಿ ನಡೆಸಿದೆ. ಗಂಭೀರ ಗಾಯಗೊಂಡ ಇವರನ್ನು ತುರ್ತು ವಾಹನದಲ್ಲಿ ಸಕಲೇಶಪುರದ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದ್ದು ಬೆನ್ನು ಮೂಳೆಗೆ ಪಟ್ಟು ಬಿದ್ದಿರುವುದರಿಂದ ಬೇರೆಡೆ ದಾಖಲಿಸುವಂತೆ ವೈದ್ಯರು ತಿಳಿಸಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.