ಹೊಸನಗರ : ದನದ ಕರುಗಳು ರಬ್ಬರ್ ಹಾಲು ಕುಡಿದು ರುಮಿನಲ್ ಇಂಪ್ಯಾಕ್ಷನ್ ಆಗಿ ಅಸ್ವಸ್ಥ
– ಮೂರು ಕರುಗಳ ಹೊಟ್ಟೆ ತೀವ್ರವಾಗಿ ಉಬ್ಬರದಿಂದ ಶಸ್ತೃ ಚಿಕಿತ್ಸೆಯಿಂದ ಯಶಸ್ವಿ
– ದನದ ಮಾಲೀಕರು ಹಾಗೂ ಸಾರ್ವಜನಿಕರು ಮುಂಜಾಗ್ರತೆ ವಹಿಸಿದರೆ ಉತ್ತಮ
NAMMUR EXPRESS NEWS
ಹೊಸನಗರ : ತಾಲ್ಲೂಕು ನೆವಟೂರು ಪಶುಚಿಕಿತ್ಸಾಲಯ ವ್ಯಾಪ್ತಿಯ ನೆವಟೂರು ಗ್ರಾಮದ ಶ್ರೀಯುತ ದೇವೇಂದ್ರಪ್ಪ ಇವರ 5 ಮಲೆನಾಡು ಗಿಡ್ದ ದನದ ಕರುಗಳು( ಸರಿಸುಮಾರು 1 ವರ್ಷ ವಯಸ್ಸಿನ) ಬಕೆಟ್ ನಲ್ಲಿಟ್ಟಿದ್ದ ಸರಿಸುಮಾರು 10 ಲೀಟರ್ ನಷ್ಟು ರಬ್ಬರ್ ಹಾಲು ಕುಡಿದು ಜೀರ್ಣವಾಗದೇ ಹೊಟ್ಟೆ ಉಬ್ಬರಿಸಿ ರುಮಿನಲ್ ಇಂಪ್ಯಾಕ್ಷನ್ ಆಗಿ ಅಸ್ವಸ್ಥಗೊಂಡಿದ್ದು, ಮೆಡಿಸಿನ್ ನೀಡಿದ ನಂತರ 2 ಕರುಗಳು ಸ್ವಲ್ಪ ಪ್ರಮಾಣದಲ್ಲಿ ಚೇತರಿಕೆ ಕಂಡಿದ್ದು, ಇನ್ನುಳಿದ ಮೂರು ಕರುಗಳು ತೀವ್ರವಾಗಿ ಹೊಟ್ಟೆ ಉಬ್ಬರಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದವು ಕೋಣಂದೂರು ಹಿರಿಯ ಪಶುವೈದ್ಯಾಧಿಕಾರಿ ಡಾ. ಆನಂದ ಜಿ ಹಾಗೂ ನೆವಟೂರು ಹಿರಿಯ ಪಶುವೈದ್ಯಧಿಕಾರಿ ಡಾ. ಧನಂಜಯ ಕೆ ರವರು ರುಮಿನಾಟಮಿ ಶಸ್ತೃ ಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿದ್ದ ಗಟ್ಟಿಯಾದ ರಬ್ಬರ್ ಮಿಶ್ರಿತ ಮೇವಿನ ಉಂಡೆಗಳನ್ನು (phytobezoar) ತೆಗೆಯುವಲ್ಲಿ ಯಶಸ್ವಿಯಾಗಿದ್ದು, ಆಪರೇಷನ್ ನಂತರ ಕರುಗಳು ಚೇತರಿಕಾ ಹಂತದಲ್ಲಿವೆ. ಜಾನುವಾರುಗಳಿಗೆ ರಬ್ಬರ್ ಹಾಲು, ರಬ್ಬರ್ ಸೊಪ್ಪು, ಕರಿಬಸರಿ ಸೊಪ್ಪು, ಕಳಲೆ, ವಾಯುವಿಳಂಗ, ಮುಳ್ಳಿಲ್ಲದ ನಾಚಿಕೆ ಸೊಪ್ಪು, ಪ್ಲಾಸ್ಟಿಕ್ ನಂತಹ ವಸ್ತುಗಳು ಹಾನಿಕಾರಕವಾಗಿದ್ದು, ಸಾರ್ವಜನಿಕರು ಇದರ ಬಗ್ಗೆ ಮುಂಜಾಗ್ರತೆ ವಹಿಸಿದರೆ ಮುಂದಾಗುವ ಅನಾಹುತ ತಡೆಯಬಹುದೆಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
