ಜೇನುಕಲ್ಲಮ್ಮ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನೆ
– ಐತಿಹಾಸಿಕವಾಗಿ ಪ್ರಸಿದ್ಧಿಯನ್ನು ಪಡೆದ ದೇವಸ್ಥಾನ
– ರಾಘವೇಂದ್ರ ಅವರಿಂದ 108 ಶಾಶ್ವತ ಮೆಟ್ಟಿಲು ನಿರ್ಮಾಣಕ್ಕೆ ಶಿಲಾನ್ಯಾಸ
– ಹೊಸನಗರ ತಾಲೂಕಿನ ಪ್ರಸಿದ್ದ ಯಾತ್ರಾ ಕ್ಷೇತ್ರ
NAMMUR EXPRESS NEWS
ಹೊಸನಗರ: ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಅಮ್ಮನ ಘಟ್ಟ ಕೂಡ ಒಂದು. ಹೊಸನಗರ ತಾಲ್ಲೂಕು ಕೋಡೂರು ಗ್ರಾಮದಲ್ಲಿರುವ ನಾಡಿನ ಇತಿಹಾಸ ಪ್ರಸಿದ್ದ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ಒಂದು ಸುಂದರ ತಾಣ. ಇದೀಗ ಈ ದೇವಾಲಯ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.
ಅರಣ್ಯದ ನಡುವೆ ಇರುವ ಬಂಡೆಗಳ ಗುಹೆಯೊಂದರಲ್ಲಿ ರೇಣುಕಾಂಬೆಯು ಜೇನುಕಲ್ಲಮ್ಮ ಎಂಬ ಹೆಸರಿನಲ್ಲಿ ನೆಲೆ ನಿಂತಿದ್ದಾಳೆ. ಜೇನುಗಳು ಗೂಡುಕಟ್ಟಿಕೊಂಡಿರುವ ಕಲ್ಲು ಬಂಡೆಗಳ ನಡುವೆ ದೇವಿ ನೆಲೆಸಿರುವುದರಿಂದ ರೇಣುಕಾಂಬೆಯ ಮತ್ತೊಂದು ರೂಪವಾದ ಈ ಅಮ್ಮನಿಗೆ ‘ಜೇನುಕಲ್ಲಮ್ಮ’ ಎಂಬ ಹೆಸರು.
ಹೊಸನಗರ ತಾಲ್ಲೂಕು ಕೋಡೂರು ಗ್ರಾಮದಲ್ಲಿರುವ ನಾಡಿನ ಇತಿಹಾಸ ಪ್ರಸಿದ್ದ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನೆ, ದೇವಿಯ ಗರ್ಭಗುಡಿಗೆ ನಿರ್ಮಿಸಲು ಉದ್ದೇಶಿಸಿರುವ 108 ಶಾಶ್ವತ ಮೆಟ್ಟಿಲು ನಿರ್ಮಾಣಕ್ಕೆ ಶಿಲಾನ್ಯಾಸ ಇತ್ತೀಚಿಗೆ ನೆರವೇರಿಸಲಾಯಿತು.
ನಾಲ್ಕು ಮಠಗಳ ಸ್ವಾಮೀಜಿಗಳ ಸಾನಿಧ್ಯ ಹಾಗೂ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿದೆ. ಅಲ್ಲದೆ ವೃದ್ಧರು, ವಿಶೇಷಚೇತನರಿಗೆ ದೇವಿಯ ದರ್ಶನಕ್ಕೆ ಅನುಕೂಲವಾಗಲೆಂದು ಲಿಫ್ಟ್ ವ್ಯವಸ್ಥೆ ಮಾಡಲಾಗಿದ್ದು ಇದರ ವೆಚ್ಚವನ್ನು ಬಿ. ಸ್ವಾಮಿರಾವ್ ಅವರ ಪತ್ನಿ ಜೇನುಕಲ್ಲಮ್ಮನ ಭಕ್ತರಾದ ಶ್ರೀಮತಿ ಪುಣ್ಯವತಿ ಅವರು ಭರಿಸಲಿದ್ದಾರೆ. ವೀರೇಶ್ ಆಲವಳ್ಳಿ, ಬಿ ವೈ ರಾಘವೇಂದ್ರ ,ಸುರೇಶ್ ಸ್ವಾಮಿ ರಾವ್ ಅವರು ಸೇರಿದಂತೆ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
