ಈಗ ದೇವರ ಹರಕೆ ಸಂಭ್ರಮ..!
– ಮಲೆನಾಡು, ಕರಾವಳಿ ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಪದ್ಧತಿ
– ಜನ, ದೇವರು, ಪ್ರಕೃತಿ ನಡುವಿನ ಸಂಬಂಧ ಬೆಸೆಯುವ ಆಚರಣೆ!
NAMMUR EXPRESS NEWS
ದೈಯ್ಯದ ಹರಕೆ ಎನ್ನುವುದು ಹಿಂದೂ ಧರ್ಮದಲ್ಲಿನ ದೈವಿಕ ಆಚರಣೆಗಳಲ್ಲಿ ಒಂದಾಗಿದೆ. ಆದರೆ ಈ ವಿಧಾನವು ಕೇವಲ ಧರ್ಮಕ್ಕೆ ಮಾತ್ರ ಸೀಮಿತವಾಗದೆ ಪ್ರಕೃತಿಯೊಂದಿಗೂ ನಂಟನ್ನು ಬೆಸೆದುಕೊಂಡಿದೆ. ಹಿಂದೆ ದಟ್ಟಾರಣ್ಯವಿತ್ತು. ನಡುವೆ ಗದ್ದೆ ತೋಟಗಳು. ಒಂದು ಮನೆಯಿಂದ ಮತ್ತೊಂದು ಮನೆಗೆ ಸಾಕಷ್ಟು ಅಂತರವಿತ್ತು. ಇದರೊಂದಿಗೆ ಕಾಡು ಪ್ರಾಣಿಗಳ ಭಯ. ಇದೆಲ್ಲದರಿಂದ ತಮ್ಮನ್ನು ಮತ್ತು ತಾವು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಮನುಷ್ಯ ಹೊಸ ಹೊಸ ರೂಪದ ದೈವಗಳನ್ನು ರೂಪಿಸಿಕೊಂಡ.ಕಾಡು, ಗದ್ದೆ, ತೋಟಗಳ ನಡುವೆ ದೊರೆತ ಕಲ್ಲು, ತ್ರಿಶೂಲ ಮೊದಲಾದವುಗಳನ್ನು ದೈವಗಳೆಂದು ಪರಿಗಣಿಸಿ, ಸಣ್ಣದೊಂದು ಗುಡಿಯನ್ನು ನಿರ್ಮಿಸಿ, ಪೂಜೆ ಸಲ್ಲಿಸಿದ. ಜೊತೆಗೆ ವರ್ಷಕ್ಕೆ ಒಂದು ಬಾರಿ ಎನ್ನುವಂತೆ ತನ್ನ ಕುಟುಂಬದ, ತನ್ನ ಕೃಷಿಯ ಒಳಿತಿಗಾಗಿ ಹರಕೆ ತೀರಿಸುವ ಪದ್ಧತಿಯನ್ನು ಅಳವಡಿಸಿಕೊಂಡ. ಇದು ಮುಂದೆ ದೆಯ್ಯದ ಹರಕೆ ಎಂಬ ಹೆಸರಿನಲ್ಲಿ ವ್ಯಾಪಕತೆ ಪಡೆದುಕೊಂಡಿತು.ದೈವಕ್ಕೆ ಎಡೆ ಇಡದೆ ರಕ್ಷಣೆ ಸಿಗಲ್ಲ ಎಂಬ ನಂಬಿಕೆ ನಿಜಕ್ಕೂ ಸಾವಿರಾರು ಕಡೆ ನಿಜವಾಗಿದೆ.
ದೈವಗಳ ಕುರಿತು ಕೇಳಿಸಿ ಅವು ಸಾತ್ವಿಕವೇ ಅಥವಾ ಮಾಂಸಾಹಾರಿಯೇ ಎಂದು ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ಎಡೆ ಇಡುವ ಮೂಲಕ ಹರಕೆ ತೀರಿಸಲು ಮನುಷ್ಯ ಪ್ರಾರಂಭಿಸಿದ. ಕೂಡ ಕುಟುಂಬವಿದ್ದ ಆ ಕಾಲದಲ್ಲಿ ಎಲ್ಲರೂ ಇದರಲ್ಲಿ ಭಾಗಿಗಳಾಗುತ್ತಿದ್ದರು. ಹಾಗಾಗಿ ಇದು ಮೊದಲಿಗೆ ಕುಟುಂಬದ ಆಚರಣೆಯಂತಿತ್ತು. ಅಲ್ಲದೆ ವಿವಾಹವಾದ ಹೆಣ್ಣು ಮಕ್ಕಳು ತವರಿಗೆ ಬರಲು ಇದ್ದ ಹಲವು ಕಾರಣಗಳಲ್ಲಿ ಇದು ಕೂಡ ಒಂದಾಗಿತ್ತು. ಕೇವಲ ಗದ್ದೆ,ತೋಟ, ಕುಟುಂಬಕ್ಕೆ ಮಾತ್ರ ಸೀಮಿತವಾಗಿದ್ದ ಈ ಪದ್ಧತಿ ಮುಂದೆ ಗ್ರಾಮದ ವ್ಯಾಪ್ತಿಯನ್ನು ಪಡೆದುಕೊಂಡಿತ್ತು. ರೋಗ ರುಜಿನ, ಬೆಳೆಗಳ ರಕ್ಷಣೆ ಮುಂತಾದ ವಿಚಾರಗಳಲ್ಲಿ ಗ್ರಾಮವನ್ನು ಕಾಪಾಡಲು, ಗ್ರಾಮಸ್ಥರು ಒಟ್ಟಾಗಿ ಸೇರಿ ಒಂದು ದಿನವನ್ನು ನಿಗದಿಪಡಿಸಿ ದೆಯ್ಯದ ಹರಕೆ ತೀರಿಸಲು ತೊಡಗಿದರು.
ನಾಗ, ಚೌಡಿ,ಮಾರಿ ಪಂಜುರ್ಲಿ,ಭೂತರಾಯ ಮುಂತಾದವು ಕಾಡಿನ, ತೋಟದ, ಗ್ರಾಮದ ರಕ್ಷಕ ದೈವಗಳಾದವು. ಇದರಲ್ಲೂ ಸಸ್ಯಹಾರಿ ದೈವಗಳು ಮತ್ತು ಬಲಿಯನ್ನು ಬಯಸುವ ದೈವಗಳು ಎಂದು ಕೂಡ ವಿಂಗಡಿಸಲಾಗಿದೆ. ಅದಕ್ಕೆ ಅನುಸಾರವಾಗಿ ಹರಕೆಯ ಸಮಯದಲ್ಲಿ ಎಡೆ ಇಟ್ಟು ಹರಕೆ ತೀರಿಸಲಾಗುತ್ತದೆ.
ಮಲೆನಾಡು ಭಾಗದಲ್ಲಿ ನೋನಿ ಎಂಬ ಪದ್ಧತಿ ಜಾರಿಯಲ್ಲಿದೆ. ಪ್ರತಿ ವರ್ಷ ದೀಪಾವಳಿ ಸಮಯದಲ್ಲಿ ಊರಿನ ಅಥವಾ ಗ್ರಾಮದ ಭೂತರಾಯ ಮತ್ತು ಚೌಡಿಗೆ ಬಲಿ ನೀಡುವ ಮೂಲಕ ತಮ್ಮ ಪ್ರದೇಶಕ್ಕೆ ಒಳಿತಾಗಲೆಂದು ಪ್ರಾರ್ಥಿಸಿ, ಹರಕೆ ತೀರಿಸುವ ಕ್ರಮ ಇದಾಗಿದೆ. ಮಾಂಸಾಹಾರ ರೂಢಿಯಲ್ಲಿರುವ ಜನರು ಕುರಿ, ಕೋಳಿಗಳನ್ನು ಬಲಿ ನೀಡಿ ಪೂಜೆ ಸಲ್ಲಿಸಿದರೆ, ಸಸ್ಯಹಾರಿಗಳು ಹಣ್ಣು ಕಾಯಿ ಮಾಡಿಸುತ್ತಾರೆ.ಜೊತೆಗೆ ತಮ್ಮ ಆರ್ಥಿಕ ಅನುಕೂಲತೆಗೆ ತಕ್ಕಂತೆ ಕುರಿ ಅಥವಾ ಕೋಳಿಗೆ ಇರಬಹುದಾದ ಬೆಲೆಯನ್ನು ತೆತ್ತು ತಮ್ಮ ಲೆಕ್ಕದಲ್ಲಿ ಅರ್ಪಿಸಿ ಪೂಜೆಯ ಬಳಿಕ ನೀವೇ ಸ್ವೀಕರಿಸಿ ಎಂದು ಜನರಿಗೆ ನೀಡುವುದನ್ನು ಸಹ ಕಾಣಬಹುದು.
ದೈಯದ ಹರಕೆ ಕುರಿತು ನಾವು ಕಥೆ, ಕಾದಂಬರಿ, ಚಲನಚಿತ್ರಗಳಲ್ಲಿ ನೋಡಬಹುದಾಗಿದೆ. ಬಹುಶಃ ದೆಯ್ಯದ ಹರಕೆ ಕುರಿತು ಮಲೆನಾಡು ಮತ್ತು ಕರಾವಳಿ ಭಾಗದ ಕಥೆ ಕಾದಂಬರಿಗಳು ಇಲ್ಲವೆಂದೇ ಹೇಳಬಹುದು. ಅಷ್ಟರಮಟ್ಟಿಗೆ ಈ ಹರಕೆ ಪದ್ಧತಿಯು ಮನುಷ್ಯನ ಜೀವನದಲ್ಲಷ್ಟೇ ಅಲ್ಲದೆ ಕನ್ನಡ ಸಾಹಿತ್ಯದ ಒಂದು ಭಾಗವಾಗಿ ಕೂಡ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.
ಆಧುನಿಕತೆ, ವೈಜ್ಞಾನಿಕ ಅರಿವು, ಮನುಷ್ಯರ ವೃತ್ತಿಜೀವನದ ಒತ್ತಡ, ನಗರವಾಸಗಳ ಪರಿಣಾಮವಾಗಿ ಈ ವಿಚಾರದಲ್ಲಿ ಕೆಲವು ಬದಲಾವಣೆಗಳಾಗಿವೆ. ಇಂದು ಕುಟುಂಬಗಳು ಸಂಕುಚಿತಗೊಂಡಿರುವ ಕಾರಣ ಎಲ್ಲರೂ ಒಂದಾಗಿ ಸೇರಿ ಆಚರಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮಗಳಲ್ಲಿ ವಾಸವಾಗಿರುವವರು ಮಾತ್ರ ಈ ಆಚರಣೆಯಲ್ಲಿ ತೊಡಗಿಕೊಳ್ಳುತ್ತಾರೆ. ಮನುಷ್ಯರು ಹಿಂದಿನಷ್ಟಲ್ಲದಿದ್ದರೂ ಕೊಂಚಮಟ್ಟಿಗೆ ನಂಬಿಕೆಯನ್ನು ಉಳಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ಏಕೆಂದರೆ ಈ ಪದ್ಧತಿಯಲ್ಲಿ ಭಕ್ತಿಗಿಂತ ಅಧಿಕವಾಗಿ ಇರುವುದು ಭಯ.
