ಕರಾವಳಿ ಪ್ರದೇಶದಲ್ಲಿ ಭಾರೀ ಅಲರ್ಟ್!
– ಸಮುದ್ರ ತೀರವನ್ನು ರಕ್ಷಿಸಲು ಭಾರೀ ಬಂದೋಬಸ್ತ್
– 24 ಗಂಟೆ ಕರಾವಳಿ ಭಾಗದಲ್ಲಿ ಭದ್ರತೆ
NAMMUR EXPRESS NEWS
ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಬಿಸಿ ಕರಾವಳಿಯನ್ನು ಸೋಕಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಆರಕ್ಷಕ ಇಲಾಖೆ ಅನೇಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಡಲ ತಡಿಯನ್ನು ತಣ್ಣಗಾಗಿಸುವ ಪ್ರಯತ್ನದಲ್ಲಿದೆ.
ಕಳೆದ ಕೆಲವು ದಿನಗಳ ಹಿಂದೆ ಪೊಲೀಸ್ ಇಲಾಖೆಯು ಸಮಾಜದಲ್ಲಿ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ, ಹಳೆಯ ಕಡತಗಳನ್ನು ಪುನಃ ತೆರೆದು, ಸಾಮಾಜಿಕ ಜಾಲತಾಣಗಳ ಮೂಲಕ ವಿಷ ಬೀಜ ಬಿತ್ತುತ್ತಿರುವವರನ್ನು ಕಂಡುಹಿಡಿದು ಗಡಿಪಾರು ಶಿಕ್ಷೆಯನ್ನು ವಿಧಿಸುವ ಕೆಲಸಕ್ಕೆ ಕೈ ಹಾಕಿತ್ತು. ಇಂದು ಅದರ ಮುಂದುವರಿದ ಭಾಗದಂತೆ ಇದರ ಪರಿಣಾಮ ಸಮುದ್ರಕ್ಕೆ ಹರಡಿದೆ.
ಕರಾವಳಿ ಪ್ರದೇಶಗಳಲ್ಲಿ ಎಂದಿಗಿಂತ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗಿದೆ. ಒಂಭತ್ತು ಆರಕ್ಷಕ ಠಾಣೆಗಳಲ್ಲಿ 340ಕ್ಕೂ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.ಅದರಲ್ಲಿ 180 ಜನರನ್ನು ಕರಾವಳಿ ನಿಯಂತ್ರಣ ಪಡೆಗೆ ಸೇರಿಸಲಾಗಿದೆ. 13 ದೋಣಿಗಳು ಮತ್ತು ಜೆಟ್ ಸ್ಕೀ ಗಳನ್ನು ಬಳಸಿಕೊಂಡು ದಿನದ ಇಪ್ಪತ್ತನಾಲ್ಕು ಗಂಟೆಗಳ ವರೆಗೂ ಸರದಿ ಪ್ರಕಾರ ಕಣ್ಗಾವಲನ್ನು ಇರಿಸುವ ಮೂಲಕ ಸೂಕ್ಷ್ಮ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದಿದ್ದಾರೆ ಕರಾವಳಿ ಭದ್ರತೆಯ ನೇತೃತ್ವ ವಹಿಸಿರುವ, ಎಸ್.ಪಿ ಆಗಿರುವ ಮಿಥುನ್ ಕುಮಾರ್.ಕಾರವಾರದಲ್ಲಿ ಅಣಕು ನಾಗರಿಕ ರಕ್ಷಣಾ ಕವಾಯತು ನಡೆಸಲಾಗಿದ್ದು, ಸಮುದ್ರದಲ್ಲಿ ಕಾರ್ಯನಿರ್ವಹಿಸುವ ದೋಣಿ ಮತ್ತು ಹಡಗುಗಳನ್ನು ಎಂದಿನ ದಿನಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.