ಹೆಚ್ಚುತ್ತಿದೆ ವಿಮಾನ ಆಕ್ಸಿಡೆಂಟ್..!
– ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚಳ
– ವಿಮಾನ ಅಪಘಾತಕ್ಕೆ ಕಾರಣಗಳು ಏನು..?
– ಅಹಮದಾಬಾದ್ ದುರಂತ: ಹುಟ್ಟು ಹಾಕಿದ ನೂರಾರು ಪ್ರಶ್ನೆಗಳು!
NAMMUR EXPRESS NEWS
ಗುಜರಾತಿನ ಅಹಮದಾಬಾದಿನಲ್ಲಿ ನಡೆದ ವಿಮಾನ ದುರಂತ ಈಗ ಇಡೀ ದೇಶದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಘಟನೆಯಲ್ಲಿ ಈವರೆಗೆ 270ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಈಗ ವಿಮಾನ ಯಾನ ಎಷ್ಟು ಸೇಫ್ ತಂತ್ರಜ್ಞಾನ ಎಷ್ಟು ಮುಂದುವರಿದರೂ ಇಂತಹ ದುರಂತ ತಡೆಯೋಕೇ ಸಾಧ್ಯ ಇಲ್ವಾ ಎಂಬ ಪ್ರಶ್ನೆ ಮುಂದಕ್ಕೆ ಬಂದಿದೆ.
ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚಳ
ಇತ್ತೀಚಿನ ದಿನಗಳಲ್ಲಿ ಭಾರತ ಸೇರಿದಂತೆ ಜಗತ್ತಿನಾದ್ಯಂತ ವಿಮಾನಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ವಿಮಾನಗಳ ಸಂಖ್ಯೆಯೂ ಹೆಚ್ಚಳಗೊಂಡಿದೆ ಎನ್ನಲಾಗಿದೆ. 2023ಕ್ಕೆ ಹೋಲಿಸಿದರೆ 2024ರಲ್ಲಿ ವಿಮಾನ ಅಪಘಾತದ ಸಂಖ್ಯೆ ಕೂಡ ಅಧಿಕಗೊಂಡಿದೆ ಎಂಬ ವರದಿಯನ್ನು ಐಎಟಿಎ ನೀಡಿದೆ.
ವಿಮಾನ ಅಪಘಾತಕ್ಕೆ ಕಾರಣಗಳು ಏನು..?
ವಿಮಾನ ದುರಂತ ಸಂಭವಿಸಲು ಅನೇಕ ಕಾರಣಗಳಿವೆ. ಅವುಗಳೆಂದರೆ ಪೈಲಟ್ ಅಥವಾ ವಿಮಾನದ ಸಿಬ್ಬಂದಿ, ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಬೇಜವಾಬ್ದಾರಿತನ, ತಾಂತ್ರಿಕ ವ್ಯವಸ್ಥೆಯಲ್ಲಿ ಉಂಟಾಗುವ ಲೋಪ( ಲ್ಯಾಂಡಿಂಗ್ ಗೇರ್ ಸಮಸ್ಯೆ, ಹೈಡ್ರಾಲಿಕ್ಸ್ ವ್ಯವಸ್ಥೆಯಲ್ಲಿನ ದೋಷ ಇತ್ಯಾದಿ), ಪ್ರತಿಕೂಲ ಹವಾಮಾನ( ಮಳೆ, ಬಿರುಗಾಳಿ, ಹಿಮಾ ಅಥವಾ ಮಂಜು ಇತ್ಯಾದಿ), ವಿಧ್ವಂಸಕ ಕೃತ್ಯ( ಭಯೋತ್ಪಾದಕರಿಂದ ವಿಮಾನ ಅಪಹರಣ, ಬಾಂಬ್ ಅಳವಡಿಕೆ ಇತ್ಯಾದಿ), ಹಕ್ಕಿಗಳು ವಿಮಾನಗಳಿಗೆ ಎದುರಾಗುವುದು, ರನ್ ವೇ ಸಂಬಂಧಿತ ಕಾರಣಗಳು ( ಜಾನುವಾರು, ಬೇರೆ ವಿಮಾನ, ದೊಡ್ಡ ವಸ್ತು ರನ್ ವೇ ಸಮಯದಲ್ಲಿ ವಿಮಾನದ ಸಮೀಪ ಬಂದು ಅದು ಪೈಲಟ್ ಗಮನಕ್ಕೆ ಬಾರದಿರುವುದು, ವಿಮಾನದ ಬಾಲ ರನ್ ವೇ ಉಜ್ಜುವುದು, ಇಳಿಯುವ ಸಮಯದಲ್ಲಿ ವಿಮಾನ ನಿಯಂತ್ರಣಕ್ಕೆ ಸಿಗದೆ ರನ್ ವೇಯಿಂದ ಜಾರುವುದು, ಹಾರ್ಡ್ ಲ್ಯಾಂಡಿಂಗ್ ಇತ್ಯಾದಿ).ವಿಮಾನದಲ್ಲಿ ಅಪಘಾತವನ್ನು ತಡೆಗಟ್ಟಲು ಮುಖ್ಯವಾಗಿ ಕಪ್ಪು ಪೆಟ್ಟಿಗೆ ಅಥವಾ ಬ್ಲ್ಯಾಕ್ ಬಾಕ್ಸ್ ಅನ್ನು ಅಳವಡಿಸಬೇಕು ಎನ್ನಲಾಗಿದೆ. ಈ ಪೆಟ್ಟಿಗೆಯಲ್ಲಿ ಕಿತ್ತಳೆ ಬಣ್ಣದ ಸಾಧನವೊಂದಿದ್ದು, ಇದು ವಿಮಾನಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಅಂದರೆ ವಿಮಾನದ ವೇಗ, ಎತ್ತರ, ಮಾರ್ಗ, ನಕ್ಷೆ ಮುಂತಾದವುಗಳನ್ನು ದಾಖಲಿಸುವುದರಿಂದ ಅಪಘಾತವನ್ನು ತಡೆಯಲು ಪ್ರಯತ್ನಿಸಬಹುದು ಎನ್ನುತ್ತಾರೆ.
ತಂತ್ರಜ್ಞಾನ ಮುಂದುವರಿದರೂ ಸಮಸ್ಯೆ ಬಗೆ ಹರಿದಿಲ್ಲ!
ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಇನ್ನು ಇಂತಹ ದುರಂತ ತಡೆಯಲು ಸಾಧ್ಯವಾಗುತ್ತಿಲ್ಲ ಏಕೆ? ವಿಮಾನ ತಾಂತ್ರಿಕ ದೋಷ ಇದ್ದದ್ದು ವಿಮಾನ ಟೇಕ್ ಆಫ್ ಆಗುವ ಮುನ್ನ ಏಕೆ ಗೊತ್ತಾಗಲಿಲ್ಲ ಎಂಬ ಪ್ರಶ್ನೆ ಈಗ ಕೇಳಿ ಬರುತ್ತಿದೆ.
ಸೆನ್ಸಾರ್ ಗಳು, ಕೃತಕ ಬುದ್ದಿಮತ್ತೆಗಳು ಅಸಾಧ್ಯ ಪವಾಡಗಳನ್ನು ಸೃಷ್ಟಿಸುತ್ತಿರುವ ಇಂಥ ಸನ್ನಿವೇಶದಲ್ಲಿ ವಿಮಾನದಲ್ಲೇನೋ ದೋಷವಿದೆ ಎಂಬುದನ್ನು ಮುಂಚಿತವಾಗಿ ತಿಳಿಯಲು ಸಾಧ್ಯವಾಗುತ್ತಿಲ್ಲವೇಕೆ?.
ಅಹಮದಾಬಾದ್‌ನಲ್ಲಿ ವಿಮಾನ ಪತನ ಕಂಡ ಸ್ಥಳದಲ್ಲಿ ಈಗ ಬ್ಲಾಕ್ ಬಾಕ್ಸ್ ಪತ್ತೆಯಾಗಿದೆ. ಅಪಘಾತದ ನಂತರವೂ ಯಾವುದೇ ಹಾನಿಯಾಗದಂತೆ ಬ್ಲ್ಯಾಕ್ ಬಾಕ್ಸ್ ಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಬ್ಲ್ಯಾಕ್‌ಬಾಕ್ಸ್ ಇಲ್ಲದೆಯೇ, ಅಪಘಾತ ಏಕೆ ಸಂಭವಿಸಿತು. ಎಂಬುದನ್ನು ತನಿಖಾಧಿಕಾರಿಗಳು ಅರ್ಥಮಾಡಿಕೊಳ್ಳುವುದು ಕಷ್ಟ ಬ್ಲಾಕ್ ಬಾಕ್ಸ್‌ನಲ್ಲಿರುವ ಕಾಕ್ ಪಿಟ್ ವಾಯ್ಸ್ ರೆಕಾರ್ಡರ್, ವಿಮಾನದ ಕಾಕ್ ಪಿಟ್‌ನಲ್ಲಿ ನಡೆಯುವ ಎಲ್ಲಾ ಶಬ್ದಗಳನ್ನೂ ದಾಖಲಿಸುತ್ತದೆ. ಇದು ಪೈಲಟ್ ದೋಷ, ತಾಂತ್ರಿಕ ದೋಷ, ಹವಾಮಾನ ಅಥವಾ ಬಾಹ್ಯ ದಾಳಿಗಳನ್ನು ಗುರುತಿಸಲು ನೆರವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ, ಇದೆಲ್ಲ ವಾಸ್ತವ ತಿಳಿಯಲು ಕೆಲವು ವಾರಗಳೇ ಬೇಕಾಗುತ್ತವೆ.
ಕಾರಿನಲ್ಲಿ ಕುಳಿತಾಗ ಸೀಟ್ ಬೆಲ್ಟ್ ಹಾಕದಿದ್ದರೆ, ಸೆನ್ಸಾರ್ ಸಿಗ್ನಲ್‌ಗಳು ಸದ್ದು ಮಾಡುತ್ತವೆ. ಒಂದು ಡೋರ್ ಸರಿಯಾಗಿ ಕೂರದಿದ್ದರೆ, ಅದರ ಸೂಚನೆಗಳು ಚಾಲಕನಿಗೆ ತಲುಪುತ್ತವೆ. ಹೀಗಿರುವಾಗ ವಿಮಾನದಲ್ಲಿ ಕಾಕ್ ಪಿಟ್ ನಲ್ಲಿ ಕುಳಿತ ಪೈಲಟ್‌ಗೆ ಎಂಜಿನ್‌ನಲ್ಲಿ ಏನೋ ದೋಷವಿದೆ, ವಿದ್ಯುತ್ ಸಂಪರ್ಕ ವ್ಯವಸ್ಥೆಯಲ್ಲಿ ಏನೋ ತೊಂದರೆಯಿದೆ ಎಂಬ ಸಂಗತಿ ಅನುಭವಕ್ಕೆ ದಕ್ಕದಿರುವುದು ವೈಮಾನಿಕ ತಂತ್ರಜ್ಞಾನದ ಹಿನ್ನಡೆಯೇ? ಅವಘಡ ಸೂಚನೆಗಳನ್ನು ಮುಂಚಿತವಾಗಿ ಗ್ರಹಿಸುವ ನಿಟ್ಟಿನಲ್ಲಿ ತಂತ್ರಜ್ಞರು ಇನ್ನಷ್ಟು ಪಕ್ವಗೊಳ್ಳಬೇಕಿದೆ.
