ಎಸ್ ಎಸ್ ಎಲ್ ಸಿ ಪರೀಕ್ಷೆ: ಆಲ್ ದಿ ಬೆಸ್ಟ್!
– ಮಾ. 21 ರಿಂದ ಪರೀಕ್ಷೆ : ಭಯ ಬೇಡ, ಆರಾಮಾಗಿ ಎದುರಿಸಿ
– ಪರೀಕ್ಷೆಗೆ ಓದಿ, ಗಡಿಬಿಡಿ ಬೇಡ
NAMMUR EXPRESS NEWS
ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗುತ್ತಿದ್ದು, ಕರ್ನಾಟಕದಲ್ಲಿ ಈ ವರ್ಷ ಸುಮಾರು 9 ಲಕ್ಷ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಎಸ್ ಎಸ್ ಎಲ್ ಸಿ ಯಲ್ಲಿ ಪ್ರಸಕ್ತ ಸಾಲಿನಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ 15,881 ಶಾಲೆಗಳಲ್ಲಿ ಒಟ್ಟು 8,42,817 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. ಇವರೊಟ್ಟಿಗೆ 38,091 ಪುನರಾವರ್ತಿತ ಮತ್ತು 15,539 ಖಾಸಗಿ ಸೇರಿ 8,96,447 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. 3,35,468 ಬಾಲಕರು, 3,78,389 ಬಾಲಕಿಯರು ಮತ್ತು 5 ತೃತೀಯ ಲಿಂಗಿಗಳು ಈ ಬಾರಿ ಎಸ್ ಎಸ್ ಎಲ್ ಸಿಯಲ್ಲಿ ಇದ್ದಾರೆ.
ಪುನರಾವರ್ತಿತ ಹಾಗೂ ಖಾಸಗಿ ನೋಂದಣಿಯೂ ಸೇರಿ ಸುಮಾರು 9 ಲಕ್ಷ ಮಂದಿ ಪರೀಕ್ಷೆಯನ್ನು ಬರೆಯಲಿದ್ದಾರೆ. 2,818 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಇರಲಿದೆ. ಅವರು ಮನೆಯಿಂದ ಹೊರಡುವ ಹತ್ತಿರದ ನಿಲ್ದಾಣದಿಂದ ಪರೀಕ್ಷಾ ಕೇಂದ್ರದವರೆಗೂ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವಂತೆ ಕರ್ನಾಟಕ ರಾಜ್ಯ ರಸ್ತೆ ನಿಗಮ ಆದೇಶವನ್ನು ಹೊರಡಿಸಿದೆ.