ಒಣಗಿದ ಎಲೆಗಳಿಗೂ ಈಗ ಡಿಮ್ಯಾಂಡ್!
– ವಿದೇಶದಲ್ಲಿ ಮಾವು, ಹಲಸು ಮತ್ತು ಪೇರಲೆ ಎಲೆಗಳ ಮಾರಾಟ
– ಮೀನಿನ ಅಕ್ವೇರಿಯಂಗಳಿಗೆ ಎಲೆ ಬಳಕೆ!
NAMMUR EXPRESS NEWS
ಮಾವಿನ ಎಲೆಗಳನ್ನು ಶುಭ ಸಮಾರಂಭಗಳಲ್ಲಿ ತೋರಣ ಮಾಡಿ ಅಲಂಕರಿಸುವುದು ವಾಡಿಕೆ. ಅದು ಒಣಗಿದ ಬಳಿಕ ಮರದ ಅಥವಾ ಗಿಡದ ಬುಡಕ್ಕೆ ಎಸೆಯುತ್ತೇವೆ. ಆದರೆ ವಿದೇಶಗಳಲ್ಲಿ ಒಣಗಿದ ಎಲೆಗಳಿಗೂ ಬೇಡಿಕೆ ಇದೆ ಎನ್ನುವುದು ತಿಳಿದುಬಂದಿದೆ.
ಬ್ರಿಟನ್ ಅಂಗಡಿಯೊಂದರಲ್ಲಿ ಮಾವು, ಹಲಸು ಮತ್ತು ಪೇರಲೆ ಎಲೆಗಳನ್ನು ಸಣ್ಣ ಪ್ಲಾಸ್ಟಿಕ್ ಚೀಲಗಳಲ್ಲಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದರ ಬೆಲೆ ಭಾರತದ ಪ್ರಕಾರ 500 ರೂಪಾಯಿ ಆಗಿದೆ.
ಒಣಗಿದ ಎಲೆಗಳನ್ನು ಮೀನಿನ ಅಕ್ವೇರಿಯಂಗಳಲ್ಲಿ ಇಡಲಾಗುತ್ತದೆ. ಜಲಚರಗಳು ಮಾವು, ಪೇರಲೆ ಎಲೆಗಳನ್ನು ಇಷ್ಟಪಡುತ್ತವೆ ಎನ್ನಲಾಗಿದೆ. ಅಲ್ಲದೆ ಮಾವಿನ ಎಲೆಗಳನ್ನು ಸಿಹಿನೀರಿನ ಟ್ಯಾಂಕ್ ಗಳಲ್ಲಿ ಸೇರಿಸಿದಾಗ ಅದು ನಿಧಾನವಾಗಿ ಟ್ಯಾನಿನ್ ಎಂಬ ಅಂಶವನ್ನು ಬಿಡುಗಡೆಗೊಳಿಸುತ್ತದೆ. ಮತ್ತು ನೀರಿನಲ್ಲಿರುವ ಪಿಎಚ್ ಅನ್ನು ಕಡಿಮೆ ಮಾಡಲು ನೆರವಾಗುತ್ತದೆ. ಒಣಗಿದ ಎಲೆಗಳು ಜೈವಿಕ ಪದರದ ಬೆಳವಣಿಗೆಗೆ ಉತ್ತೇಜನಕಾರಿಯಾಗಿದೆ. ಒಣಗಿದ ಎಲೆಗಳು ಸಣ್ಣ ಪ್ರಮಾಣದ ಸೀಗಡಿಗಳು ಮತ್ತು ಕೆಲವು ಬಗೆಯ ಮೀನುಗಳಿಗೆ ಆಹಾರವಾಗಿದೆ. ಒಣಗಿದ ಎಲೆಗಳನ್ನು ಡಿಸೈನರ್ ಗಾಜಿನ ಟ್ಯಾಂಕ್ ಗಳಲ್ಲಿ ಶೇಖರಿಸಿ ಇಡಲಾಗುತ್ತದೆ.
ಒಣಗಿದ ಮಾವಿನ ಎಲೆಗಳನ್ನು ಬುಡಕಟ್ಟು ಮತ್ತು ಕೆಲವೊಂದು ಕರಾವಳಿ ಪ್ರದೇಶಗಳಲ್ಲಿ ಪಾಕಪದ್ಧತಿಯಲ್ಲಿ ಕೂಡ ಬಳಸುತ್ತಾರೆ. ಬಿಸಿಲಿನಲ್ಲಿ ಒಣಗಿಸಿದ ಎಲೆಗಳನ್ನು ಆಹಾರದ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಅಲ್ಲದೆ ಇವು ಹೊಗೆ, ಶೀತ, ಕೆಮ್ಮಿಗೆ ಮನೆಮದ್ದಾಗಿದೆ.
ಔಷಧಿಯ ತಯಾರಿಕೆಯಲ್ಲಿ ಇವುಗಳನ್ನು ಬಳಸುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಹಾಗೂ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಕೆಲವರು ಒಣಗಿದ ಎಲೆಗಳನ್ನು ಪುಡಿ ಮಾಡಿಟ್ಟುಕೊಂಡು ಬೆಳಗಿನ ಜಾವ ಬೆಚ್ಚಗಿನ ನೀರಿನೊಂದಿಗೆ ಸೇವಿಸುತ್ತಾರೆ. ಇನ್ನು ಕೆಲವರು ಚಹಾದೊಂದಿಗೆ ಬೆರೆಸಿ ಇಲ್ಲವೆ ಗಿಡಮೂಲಿಕೆಗಳಿಂದ ತಯಾರಿಸಿದ ಮಾತ್ರೆಗಳೊಂದಿಗೆ ಇದನ್ನು ಸೇವಿಸುತ್ತಾರೆ.
ಮಾಗಿದ ಮಾವಿನ ಎಲೆಗಳನ್ನು ಬಿಸಿಲಿನಲ್ಲಿ ಗರಿಗರಿಯಾಗಿ ಒಣಗಿಸಿ, ಒಣಗಿದ ಎಲೆಗಳನ್ನು ಮಿಕ್ಸರ್ ನಲ್ಲಿ ನುಣ್ಣಗೆ ಪುಡಿಮಾಡಿಟ್ಟುಕೊಂಡು ಗಾಳಿಯಾಡದಂತೆ ಡಬ್ಬಿಗಳಲ್ಲಿ ಸಂಗ್ರಹಿಸಿಡುವುದರಿಂದ ಪ್ರಯೋಜನಕಾರಿಯಾಗುತ್ತದೆ. ಹೀಗೆ ಒಣಗಿದ ಎಲೆಗಳು ಆರೋಗ್ಯದ ದೃಷ್ಟಿಯಿಂದ ಮತ್ತು ಆರ್ಥಿಕತೆಯ ದೃಷ್ಟಿಯಿಂದ ಹೆಚ್ಚು ಲಾಭದಾಯಕವಾಗಿದೆ.
