ಮಂಗಳೂರಿನೆಲ್ಲೆಡೆ ಡೆಂಗ್ಯೂ, ಡೆಂಗ್ಯೂ, ಡೆಂಗ್ಯೂ!
* 43 ಶಂಕಿತ ಪ್ರಕರಣ ಪತ್ತೆ
* ಒಂದು ಡೆಂಗ್ಯೂ ಪ್ರಕರಣ ವರದಿಯಾದರೆ 50 ಮನೆಗಳಲ್ಲಿ ಸಮೀಕ್ಷೆ!
NAMMUR EXPRESS NEWS
ಮಂಗಳೂರು: ಒಂದು ವಾರದಿಂದ ಮಳೆ ಪ್ರಮಾಣ ಹೆಚ್ಚಾಗಿ ಅಲ್ಲಲ್ಲಿ ನೀರಿನ ಶೇಖರಣೆ ಹೆಚ್ಚಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಶಂಕಿತ ಡೆಂಗ್ಯೂ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿದೆ. ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯದಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಚ್.ಆರ್. ತಿಮ್ಮಯ್ಯ ತಿಳಿಸಿದ್ದಾರೆ.
* 43 ಶಂಕಿತ ಪ್ರಕರಣ
ಜಿಲ್ಲೆಯಲ್ಲಿ 2025ರ ಜನವರಿಯಿಂದ ಮೇ 31ರವರೆಗೆ 43 ಶಂಕಿತ ಡೆಂಗ್ಯೂ ಮತ್ತು 3 ಚಿಕುನ್‌ಗುನ್ಯ ಪ್ರಕರಣಗಳು ಪತ್ತೆಯಾಗಿದೆ. ಮನಪಾ ವ್ಯಾಪ್ತಿಯಲ್ಲಿ 8, ಮಂಗಳೂರು ತಾಲೂಕು 13, ಬಂಟ್ವಾಳ 5, ಪುತ್ತೂರು 5, ಸುಳ್ಯ 2, ಬೆಳ್ತಂಗಡಿಯಲ್ಲಿ 10 ಶಂಕಿತ ಪ್ರಕರಣಗಳು ವರದಿಯಾಗಿದೆ ಎಂದು ತಿಳಿಸಿದರು.
* ಒಂದು ಜ್ವರ- 50 ಮನೆ ಸಮೀಕ್ಷೆ
ಒಂದು ಶಂಕಿತ ಡೆಂಗ್ಯೂ ಜ್ವರ ಪ್ರಕರಣ ವರದಿಯಾದರೆ ಸುತ್ತಲಿನ 50 ಮನೆಗಳಲ್ಲಿ ಸಮೀಕ್ಷೆ ನಡೆಸಲಾಗುವುದು. ಜತೆಗೆ ಲಾರ್ವಾ ನಾಶ ಪಡಿಸಲು ಕ್ರಮ ವಹಿಸಲಾಗುವುದು. ಇತರ ಜ್ವರಗಳಿಗೆ ಸಂಬಂಧಿಸಿದಂತೆಯೂ ಇದೇ ಮಾದರಿ ಅನುಸರಿಸಲಾಗುವುದು. ಆಗಸ್ಟ್ ವರೆಗೂ ಡೆಂಗ್ಯೂ ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದರು.
