ವರ್ಷಕ್ಕೊಮ್ಮೆ ದರ್ಶನ ನೀಡುತ್ತೆ ಈ ವಿಶೇಷ ಕಪ್ಪೆ!
– ಮಹಾಬಲಿ ಎಂಬ ಈ ಕಪ್ಪೆ ನೋಡಿದರೆ ನಿಮಗೆ ಅದೃಷ್ಠ
– ಕೇರಳದಲ್ಲೊಂದು ವಿಶೇಷ ಕಪ್ಪೆ: ಎನಿದು?
NAMMUR EXPRESS NEWS
ಮಳೆಗಾಲ ಪ್ರಾರಂಭಗೊಂಡಿದೆ. ಮಳೆಯ ನಿನಾದದೊಂದಿಗೆ ನಾನಾ ಬಗೆಯ ಹುಳಗಳ ಸದ್ದು ನಿರ್ಜನ ಪ್ರದೇಶದಿಂದ ಕೇಳಿಬರುವುದು ಎಲ್ಲರಿಗೂ ರೂಢಿಗತವಾದ ಸಂಗತಿ. ಇವುಗಳೊಂದಿಗೆ ಕಪ್ಪೆಗಳೂ ಜೊತೆಯಾಗಿರುತ್ತವೆ. ಆದರೆ ಕೇರಳಿಗರು ಈ ಸಮಯದಲ್ಲಿ ಕಪ್ಪೆಯೊಂದನ್ನು ಕಾಣಲು ತವಕಿಸುತ್ತಿರುತ್ತಾರೆ.
ಮಹಾಬಲಿ ಎಂಬ ಕಪ್ಪೆಯು ವರ್ಷಕ್ಕೊಮ್ಮೆ ಭೂಗತ ಲೋಕದಿಂದ ಹೊರಬರುವ ಕಪ್ಪೆಯಾಗಿದ್ದು, ಈ ಕಪ್ಪೆ ಕಂಡುಬಂದರೆ ಅದರ ದರ್ಶನ ಭಾಗ್ಯ ಕರುಣಿಸಿದರೆ ಶುಭಸೂಚನೆ ಎನ್ನುವುದು ಕೇರಳಿಗರ ನಂಬಿಕೆ. ಸಾಮಾನ್ಯವಾಗಿ ಇದು ಓಣಂ ಹಬ್ಬದ ಮೊದಲು ಕಂಡುಬರಲಿದ್ದು, ನಿನ್ನೆ ಮಣ್ಣು ಅಗೆಯುತ್ತಿದ್ದ ಪ್ರದೇಶವೊಂದರಲ್ಲಿ ಕಾಣಿಸಿಕೊಂಡಿದ್ದು, ಈ ಬಾರಿ ಬೇಗನೇ ಕಾಣಿಸಿಕೊಂಡಿದ್ದರಿಂದ ಕೇರಳಿಗರಲ್ಲಿ ಸಂತಸ ಮನೆಮಾಡಿದೆ.
ಮಹಾಬಲಿ ಕಪ್ಪೆಯು 364 ದಿನಗಳ ಕಾಲ ನೆಲದಡಿಯಲ್ಲಿ ವಾಸವಾಗಿದ್ದು, ಮಾನ್ಸೂನ್ ಪೂರ್ವ ಮಳೆಯ ಸಮಯದಲ್ಲಿ ಮೊಟ್ಟೆ ಇಡುವ ಸಲುವಾಗಿ ಹೊರಬರುತ್ತದೆ. ಅಳಿವಿನಂಚಿನಲ್ಲಿರುವ ಈ ಕಪ್ಪೆಗಳು ಪಶ್ಚಿಮ ಘಟ್ಟಗಳ ಬೆಚ್ಚಗಿನ ಪ್ರದೇಶದಲ್ಲಿ ವಾಸಿಸುತ್ತವೆ. ಇದರ ವೈಜ್ಞಾನಿಕ ಹೆಸರು ನಾಸಿಕಬಾತ್ರಾಚಸ್ ಸಹ್ಯಡ್ರೆನ್ಸಿಸ್ ಎಂಬುದಾಗಿದೆ.
ನದಿಗಳು, ತೊರೆಗಳ ಬಳಿ ವಾಸವಾಗಿರುವ ಮಹಾಬಲಿ ಕಪ್ಪೆಯ ಆಹಾರ ಎರೆಹುಳ, ಗೆದ್ದಲು, ಇರುವೆ ಮತ್ತು ಸಣ್ಣ ಕೀಟಗಳು. ಅರಣ್ಯ ಇಲಾಖೆಯ ಶಿಫಾರಸಿನಂತೆ ಕೇರಳ ರಾಜ್ಯವು ಈ ಕಪ್ಪೆಯನ್ನು ರಾಜ್ಯ ಕಪ್ಪೆಯನ್ನಾಗಿ ಘೋಷಿಸಲು ಕ್ರಮ ಕೈಗೊಳ್ಳುತ್ತಿದೆ. ಕಡು ಬಣ್ಣದಲ್ಲಿರುವ ಈ ಕಪ್ಪೆಗೆ ಮೊನಚಾದ ಮೂಗಿರುವ ಕಾರಣ ಹಂದಿ ಮೂತಿ ಎಂದೂ ಸಹ ಇದನ್ನು ಕರೆಯುತ್ತಾರೆ. ಹೆಣ್ಣು ಕಪ್ಪೆಗಳು ಗಂಡು ಕಪ್ಪೆಗಳನ್ನು ಬೆನ್ನ ಮೇಲೆ ಹೊತ್ತುಕೊಂಡು ವರ್ಷಕ್ಕೊಮ್ಮೆ ಹೊರಪ್ರಪಂಚಕ್ಕೆ ಬರುತ್ತವೆ ಎನ್ನಲಾಗಿದೆ.
