ಕರಾವಳಿ ಟಾಪ್ ನ್ಯೂಸ್
ಗಂಡ ಹೆಂಡತಿ ಸೇರಿ 40 ಕೋಟಿ ಗೋಲ್ಮಾಲ್?!
•ಮಂಗಳೂರು ಮೂಲದ ರೋಷನ್ ಸಲ್ದಾನಾ ಪ್ರಕರಣ ಮತ್ತಷ್ಟು ಸಸ್ಪೆನ್ಸ್
• ಕಾರ್ಕಳ: ಗಂಧದ ಮರ ಕದ್ದ ಕಳ್ಳರು..!
•ಕಾಪು: ಕೊಂಕಣ ರೈಲ್ವೆ ಗ್ಯಾಂಗ್ ಮ್ಯಾನ್ ವಿರುದ್ಧ ಕೇಸ್
• ಪುತ್ತೂರು: ತೋಡಿನಲ್ಲಿ ಪತ್ತೆಯಾದ ಮಹಿಳೆಯ ಶವ!
• ಉಡುಪಿ: ಡ್ರಗ್ಸ್ ಮಾರಾಟದ ವೇಳೆ ಪೊಲೀಸರ ದಾಳಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಮನಗಳೂರು ಮೂಲದ ಗಂಡ ಹೆಂಡತಿ ಸೇರಿ ಸಿನಿಮಾ ಮಾದರಿಯಲ್ಲಿ ಬಹುಕೋಟಿ ವಂಚನೆ ಮಾಡಿರುವ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಪ್ರಕರಣಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಮಂಗಳೂರು ಮೂಲದ ರೋಷನ್ ಸಲ್ದಾನಾ ಮತ್ತು ಅವರ ಪತ್ನಿಗೆ ಸೇರಿದ ಆಸ್ತಿಗಳ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ಆರಂಭಿಸಿದೆ.
ನಗರದ ಐದು ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಕಡಿಮೆ ಬಡ್ಡಿದರದಲ್ಲಿ ಸಾಲ ವ್ಯವಸ್ಥೆ ಮಾಡುವ ನೆಪದಲ್ಲಿ ವಿವಿಧ ಉದ್ಯಮಿಗಳಿಂದ ಹಣ ಸಂಗ್ರಹಿಸಿ, ಸ್ಟಾಂಪ್ ಡ್ಯೂಟಿಗೆ ಹಣವನ್ನು ಪಡೆದು, ಭರವಸೆ ನೀಡಿದ ಸಾಲಗಳನ್ನು ನೀಡುವಲ್ಲಿ ವಿಫಲರಾದ ಆರೋಪದ ಮೇಲೆ ರೋಷನ್ ಸಲ್ದಾನಾ ಮತ್ತು ಅವರ ಪತ್ನಿ ಡಫ್ರಿ ನೀತು ಡಿಸೋಜಾ ವಿರುದ್ಧ ಪೊಲೀಸರು ಈ ಹಿಂದೆ ಪ್ರಕರಣ ದಾಖಲಿಸಿದ್ದರು.
ಆರೋಪಿಗಳು ನಕಲಿ ಕಂಪನಿಗಳ ಮೂಲಕ ಸುಮಾರು 39 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ವಹಿವಾಟುಗಳಿಗೆ ಸಂಬಂಧಿಸಿದ ಡೈರಿಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಹಣವನ್ನು ವೈಯಕ್ತಿಕ ಉದ್ದೇಶಗಳಿಗಾಗಿ, ತಮ್ಮದೇ ಆದ ವ್ಯವಹಾರಗಳಿಗೆ ಬಳಸಿಕೊಂಡಿದ್ದಾರೆ ಮತ್ತು ಗಮನಾರ್ಹ ಭಾಗವನ್ನು ಬೇರೆಡೆ ವರ್ಗಾಯಿಸಿದ್ದಾರೆ ಎಂದು ಬೆಳಕಿಗೆ ಬಂದಿದೆ.
ಶೋಧದ ಸಮಯದಲ್ಲಿ ಬ್ಯಾಂಕ್ ಖಾತೆಗಳಲ್ಲಿ 3.75 ಕೋಟಿ ರೂ.ಗಳನ್ನು ಸ್ಥಗಿತಗೊಳಿಸಲಾಯಿತು. ರೋಷನ್ ಸಲ್ದಾನಾ ತನ್ನ ಕಾಲ್ಪನಿಕ ಕಂಪನಿಗಳ ಮೂಲಕ ವಂಚನೆಯ ಮೂಲಕ ಪಡೆದ 5.75 ಕೋಟಿ ರೂ.ಗಳನ್ನು ತನ್ನ ಪತ್ನಿ ಡಾಫ್ಟಿ ನೀತು ಡಿ’ಸೋಜಾ ಹೆಸರಿನಲ್ಲಿ ಐದು ಮೀನುಗಾರಿಕೆ ದೋಣಿಗಳನ್ನು ಖರೀದಿಸಲು ವರ್ಗಾಯಿಸಿದ್ದಾರೆ ಎಂದು ಇಡಿ ಕಂಡುಕೊಂಡಿದೆ.
ಕಾರ್ಯಾಚರಣೆಯ ಸಮಯದಲ್ಲಿ ಒಟ್ಟಾರೆಯಾಗಿ ಸುಮಾರು 9.5 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಕಾರ್ಕಳ: ಗಂಧದ ಮರ ಕದ್ದ ಕಳ್ಳರು..!
ಕಾರ್ಕಳ: ದಿನೇಶ್ ಶೆಟ್ಟಿಗಾರ್ ಎನ್ನುವವರಿಗೆ ಸಂಬಂಧಿಸಿದ ತೋಟದಲ್ಲಿ ಬೆಳೆಸಿದ್ದು ಎನ್ನಲಾದ, ಶ್ರೀಗಂಧದ ಮರವನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಕಾರ್ಕಳದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ದುಷ್ಕರ್ಮಿಗಳನ್ನು ಗಣೇಶ್, ಸಂತೋಷ್ ಮತ್ತು ಮೊಯ್ದಿನ್ ಎಂದು ಗುರುತಿಸಲಾಗಿದ್ದು, ಕಳುವು ಮಾಡಿದ್ದ ಸುಮಾರು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಶ್ರೀಗಂಧದ ಮರದ ತುಂಡುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದುಷ್ಕರ್ಮಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
• ಕಾಪು: ಕೊಂಕಣ ರೈಲ್ವೆ ಗ್ಯಾಂಗ್ ಮ್ಯಾನ್ ವಿರುದ್ಧ ಪ್ರಕರಣ ದಾಖಲು
ಕಾಪು: ಶಾಲೆಗೆ ರಜೆ ಇದ್ದ ಸಂದರ್ಭದಲ್ಲಿ ಇಬ್ಬರು ಬಾಲಕರು ಆಡುತ್ತಿರುವಾಗ, ರೈಲ್ವೆ ಹಳಿಯ ಬಳಿ ದೊರೆತ ಕಬ್ಬಿಣದ ತುಂಡೊಂದನ್ನು ಹೆಕ್ಕಿ, ತೆಗೆದುಕೊಂಡಿದ್ದಾರೆ ಎನ್ನುವ ಕಾರಣದಿಂದ ಕೊಂಕಣ ರೈಲ್ವೆ ಗ್ಯಾಂಗ್ ಮ್ಯಾನ್ ಆ ಇಬ್ಬರು ಬಾಲಕರ ಮೇಲೆ ಹಲ್ಲೆ ನಡೆಸಿದ್ದಾರೆ. ತಾನು ಕೋಲಿನಿಂದ ಹೊಡೆದ ಸನ್ನಿವೇಶವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಹಲ್ಲೆಗೆ ಒಳಗಾದ ಓರ್ವ ಬಾಲಕನ ತಂದೆಯು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಸಾರ್ವಜನಿಕ ಪ್ರದೇಶದಲ್ಲಿ ಅಪ್ರಾಪ್ತ ಬಾಲಕರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಆತನ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೋರ್ವ ಬಾಲಕ ಅಜ್ಜನ ಮನೆಗೆ ತನ್ನ ಗೆಳೆಯನೊಂದಿಗೆ ಹೋಗಿದ್ದ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದು, ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕೊಂಕಣ ರೈಲ್ವೆ ಗ್ಯಾಂಗ್ ಮ್ಯಾನ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
• ಪುತ್ತೂರು: ತೋಡಿನಲ್ಲಿ ಪತ್ತೆಯಾದ ಮಹಿಳೆಯ ಶವ
ಪುತ್ತೂರು: ಕೆದಿಲ ಸಮೀಪ ಕಾಂತಕೋಡಿ ಎನ್ನುವ ಪ್ರದೇಶದಲ್ಲಿ ತೋಡಿನಲ್ಲಿ ಮೂವತ್ತೈದು ವರ್ಷದ ಮಹಿಳೆಯೊಬ್ಬರ ಶವ ಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಈ ಮಹಿಳೆಯನ್ನು ಕಾಂತಕೋಡಿ ನಿವಾಸಿ ರಾಮಣ್ಣ ಗೌಡ ಎನ್ನುವವರ ಪತ್ನಿ ಮಮತಾ ಎಂದು ಗುರುತಿಸಲಾಗಿದೆ. ಘಟನೆಯು ಬೆಳಕಿಗೆ ಬರುತ್ತಿದ್ದಂತೆ, ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಸ್ಥಳೀಯರು ಮಹಿಳೆಯ ಕೊಲೆಯಾಗಿರಬಹುದು ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ತನಿಖೆಯ ಬಳಿಕವೇ ಸತ್ಯ ಸಂಗತಿ ಏನು ಎನ್ನುವುದು ಇನ್ನು ತಿಳಿಯಬೇಕಾಗಿದೆ.
• ಉಡುಪಿ: ಮಾದಕ ವಸ್ತುಗಳ ಮಾರಾಟದ ವೇಳೆ ಪೊಲೀಸರ ದಾಳಿ
ಉಡುಪಿ: ಮಂಗಳೂರು ನಗರದ ಬಂಗ್ರಕಳೂರು ಎನ್ನುವ ಸಮೀಪ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ, ಪೊಲೀಸರು ಸ್ಥಳಕ್ಕೆ ಧಾವಿಸಿ ದಾಳಿಯನ್ನು ನಡೆಸಿದ್ದು, ಐವತ್ತು ಗ್ರಾಂ ತೂಕವುಳ್ಳ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎಯನ್ನು , ಜೊತೆಗೆ ಆರೋಪಿಗಳು ಈ ದುಷ್ಕೃತ್ಯಕ್ಕೆ ಬಳಸಿಕೊಂಡ ಏಳು ಮೊಬೈಲ್ ಗಳನ್ನು, ಕಾರ್ ಗಳನ್ನು, 11.990 ರೂಪಾಯಿ ನಗದು ಹಣವನ್ನು ಮತ್ತು ಆರೋಪಿಗಳಿಗೆ ಸಂಬಂಧಿಸಿದ ಇತರೆ ವಸ್ತುಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ ಒಂದು ಗ್ರಾಂ ಎಂಡಿಎಂಎಗೆ ಸುಮಾರು 2500 ಬೆಲೆ ಇದೆ ಎಂದು ತಿಳಿದುಬಂದಿದೆ. ಇದನ್ನು ಚಿಕ್ಕ ಚಿಕ್ಕ ಪ್ಯಾಕೆಟ್ ಗಳಲ್ಲಿ ತುಂಬಿಸಿ, ಮಾರಾಟ ಮಾಡುತ್ತಿರುವ ವಿಧಾನ ತನಿಖೆಯ ವೇಳೆ ಕಂಡುಬಂದಿದೆ. ತನಿಖೆಯನ್ನು ಮುಂದುವರಿಸಲಾಗಿದೆ ಎನ್ನುವ ಮಾಹಿತಿ ಬಂದಿದೆ. ಆರೋಪಿಗಳನ್ನು ಉಡುಪಿ ಮೂಲದ ದೇವರಾಜ್ ಪೂಜಾರಿ, ಜೀವನ್ ಅಮೀನ್, ಮಂಗಳೂರಿನ ಇಮ್ರಾನ್, ಮೊಹಮ್ಮದ್ ಹನೀಫ್ ಎಂದು ಗುರುತಿಸಲಾಗಿದೆ. ಅಪರಾಧಿಗಳ ವಿರುದ್ಧ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 44/ 2025 ರ ಎನ್ ಡಿ ಪಿ ಎಸ್ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಮಂಗಳೂರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಮಂಗಳೂರಿನ ಸೆನ್ ಪೋಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಕರಣವನ್ನು ಬಯಲಿಗೆಳೆದಿದ್ದಾರೆ ಎನ್ನುವ ಸಂಗತಿ ತಿಳಿದು ಬಂದಿದೆ.