ಕರಾವಳಿ ಟಾಪ್ ನ್ಯೂಸ್
ಬ್ರಹ್ಮಾವರದಲ್ಲಿ ಮಚ್ಚಿನಿಂದ ಕೊಲೆ ಮಾಡಲು ಯತ್ನ!
– ಉಪ್ಪಿನಂಗಡಿ: ಅಪ್ರಾಪ್ತೆಯ ಜೊತೆ ದೈಹಿಕ ಸಂಪರ್ಕ; ಪೋಕ್ಸೋ ಕೇಸ್ ದಾಖಲು!
– ಮೂಡಬಿದಿರೆ: ಸರ್ಕಾರಿ ಬಸ್ ಮತ್ತು ಬೈಕ್ ಢಿಕ್ಕಿ, ಯುವತಿ ಸಾವು
– ಬೆಳ್ತಂಗಡಿ: ಹಾಡಹಗಲೇ ಮನೆಗೆ ನುಗ್ಗಿ ಲಕ್ಷಾಂತರ ಕಳವು
– ನೆಲ್ಯಾಡಿ: ಕಾರು-ಆಟೋ ರಿಕ್ಷಾ ನಡುವೆ ಅಪಘಾತ; ಆಟೋ ಚಾಲಕ ಸಾವು!
– ಮಂಗಳೂರು: ಭೀಕರ ಅಪಘಾತಕ್ಕೆ; ಯುವಕ ಸಾವು!
NAMMUR EXPRESS NEWS
ಬ್ರಹ್ಮಾವರ: ಪುಷ್ಪರಾಜ್ ಎಂಬವರು ಯೋಗೀಶ್ ಎಂಬವರ ಮೇಲೆ ಹಳೇ ವೈಷಮ್ಯ ಕಾರಣಕ್ಕಾಗಿ ಮಾರಕಾಸ್ತ್ರದಿಂದ ಹತ್ಯೆ ಮಾಡಲು ಯತ್ನಿಸಿದ ಘಟನೆ ಬ್ರಹ್ಮಾವರದ ಉಪ್ಪೂರು ತೆಂಕಬೆಟ್ಟು ಸ್ವಾಗತ ಗೋಪುರ ಬಳಿ ನಡೆದಿದೆ.
ಮೂರು ವರ್ಷದ ಹಿಂದೆ ಮರಳುಗಾರಿಕೆಯ ವಿಚಾರದಲ್ಲಿ ಇವರಿಗೆ ಗಲಾಟೆ ನಡೆದಿತ್ತು. ಅದೇ ದ್ವೇಷದಲ್ಲಿ ಕೊಲೆ ಮಾಡಲು ಯತ್ನಿಸಿದ್ದಾರೆ. ಆಗ ಮಚ್ಚು ಕುತ್ತಿಗೆಯ ಭಾಗಕ್ಕೆ ತಾಗಿದೆ.
ಮತ್ತೊಮ್ಮೆ ಬೀಸಿದಾಗ ತಡೆಯಲು ಹೋದ ರಮೇಶ್ ಎಂಬವರ ಕೈಗೆ ಕೂಡಾ ಗಾಯವಾಗಿದೆ. ಈ ಬಗ್ಗೆ ಯೋಗಿಶ್ ಅವರು ಗಂಭೀರ ಆರೋಪ ಮಾಡಿದ್ದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಉಪ್ಪಿನಂಗಡಿ: ಅಪ್ರಾಪ್ತೆಯ ಜೊತೆ ದೈಹಿಕ ಸಂಪರ್ಕ; ಪೋಕ್ಸೋ ಕೇಸ್ ದಾಖಲು!
ನೆಲ್ಯಾಡಿ: ಅಪ್ರಾಪ್ತೆಯ ಜೊತೆ ಬಲತ್ಕಾರವಾಗಿ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿದ ಆರೋಪದಲ್ಲಿ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿ ರಮೇಶ ಎಂಬಾತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧನ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸಂತ್ರಸ್ತೆ 16 ವರ್ಷದವಳಾಗಿದ್ದು, ಪಿಯುಸಿ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಬಿಟ್ಟು, ಮನೆಯಲ್ಲಿದ್ದು, ದೂರದ ಸಂಬಂಧಿಕನಾದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿ ರಮೇಶ ಎಂಬಾತನ ಮನೆಗೆ ಫೆ.10ರಂದು ಹೋಗಿದ್ದಾಳೆ. ಆ ದಿನ ರಾತ್ರಿ ಊಟ ಮಾಡಿ ಮಲಗಿದ್ದ ಸಮಯದಲ್ಲಿ ಆರೋಪಿ ರಮೇಶ ಆಕೆ ಮಲಗಿದ್ದಲ್ಲಿಗೆ ಬಂದು ಬಲಾತ್ಕಾರವಾಗಿ ದೈಹಿಕ ಸಂಪರ್ಕ ಮಾಡಿದ್ದಾನೆ.
ಅನಂತರ ಮಾ.9, 27, 28 ರಂದು ಸಂತ್ರಸ್ತೆಯ ಇಚ್ಛೆಯ ವಿರುದ್ಧ ದೈಹಿಕ ಸಂಪರ್ಕ ಮಾಡಿದ್ದಾನೆ. ಸಂತ್ರಸ್ತೆಯನ್ನು ಮಂಗಳೂರು ಕಾವೂರಿನಲ್ಲಿರುವ ಬಾಲಕಿಯರ ಬಾಲ ಮಂದಿರಕ್ಕೆ ಸೇರಿಸಿರುವ ಕುರಿತು ವರದಿಯಾಗಿದೆ.
– ಮೂಡಬಿದಿರೆ: ಸರ್ಕಾರಿ ಬಸ್ ಬೈಕ್ ಢಿಕ್ಕಿ, ಯುವತಿ ಸಾವು!
ಮೂಡಬಿದಿರೆ: ಸರ್ಕಾರಿ ಬಸ್ ಗೆ ಬೈಕೊಂದು ಢಿಕ್ಕಿ ಹೊಡೆದು ಸಹಸವಾರೆಯೊರ್ವಳು ಗಂಭೀರ ಗಾಯಗೊಂಡು ಮೃತಪಟ್ಟಿರುವ ಘಟನೆ ಮೂಡುಬಿದ್ರೆಯಲ್ಲಿ ನಡೆದಿದೆ.
ಇಂಜಿನಿಯರಿಂಗ್ ವಿದ್ಯಾರ್ಥಿನಿ, ಇಪ್ಪತ್ತು ವರ್ಷದ ನಿಕ್ಷಿತಾ ಸಾವನ್ನಪ್ಪಿದ ಯುವತಿ. ಈಕೆ ತನ್ನ ಗೆಳೆಯನೊಂದಿಗೆ ಬರುತ್ತಿದ್ದಾಗ ಈ ದುರಂತ ನಡೆದಿದೆ. ಬೆಳುವಾಯಿ ಮೂಲದ ಈಕೆ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಳು.
ಸವಾರನ ನಿರ್ಲಕ್ಷ್ಯದಿಂದ ಈ ಅಪಘಾತ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗದೆ ಮೃತಪಟ್ಟಿದ್ದಾಳೆ. ಮೃತ ಯುವತಿಯ ಗೆಳೆಯ ಮಾರ್ನಾಡಿನ ರಂಜಿತ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
– ಬೆಳ್ತಂಗಡಿ: ಹಾಡಹಗಲೇ ಮನೆಗೆ ನುಗ್ಗಿ ಲಕ್ಷಾಂತರ ಕಳವು
ಬೆಳ್ತಂಗಡಿ: ಹಾಡಹಗಲೇ ಮನೆಯ ಬೀಗ ಮುರಿದು ಒಳನುಗ್ಗಿ ಸುಮಾರು ಹದಿಮೂರು ಲಕ್ಷ ಬೆಲೆಬಾಳುವ ಚಿನ್ನಾಭರಣ, ಹಣ ಕಳವು ಮಾಡಿ ಪರಾರಿಯಾದ ಘಟನೆ ಬೆಳ್ತಂಗಡಿಯ ಮಾಲಾಡಿ ಗ್ರಾಮದ ಕೊಲ್ಪೆದಬೈಲು ಎಂಬಲ್ಲಿ ನಡೆದಿದೆ.
ಮನೆಯ ಯಜಮಾನಿ ವಸಂತಿ ಹೆಗ್ಡೆ ಮತ್ತು ಅವರ ಮಗ-ಸೊಸೆ ಮನೆಗೆ ಬೀಗ ಹಾಕಿ ಬೆಳ್ತಂಗಡಿಗೆ ತೆರಳಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡು ಖದೀಮರು ಬೀಗ ಮುರಿದು ಮನೆಗೆ ನುಗ್ಗಿದ್ದಾರೆ.
ಮನೆಯ ಕೋಣೆಯ ಕಪಾಟಿನಲ್ಲಿಟ್ಟಿದ್ದ ಹದಿಮೂರು ಲಕ್ಷ, ಎಪ್ಪತ್ತು ಸಾವಿರ ಬೆಲೆಬಾಳುವ ಚಿನ್ನಾಭರಣ ಮತ್ತು ಮೂವತ್ತು ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ನೆಲ್ಯಾಡಿ: ಕಾರು-ಆಟೋ ರಿಕ್ಷಾ ನಡುವೆ ಅಪಘಾತ; ಆಟೋ ಚಾಲಕ ಸಾವು!
ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಪೆರಿಯಶಾಂತಿ ಸಮೀಪ ವಾಲ್ತಾಜೆ ಸೇತುವೆ ಬಳಿ ಕಾರು ಹಾಗೂ ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ್ದು, ಆಟೋ ರಿಕ್ಷಾ ಚಾಲಕ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಎ.20 ರಂದು ನಡೆದಿದೆ.
ಶಿರಾಡಿ ಗ್ರಾಮದ ಅಡ್ಡಹೊಳೆ ಸಮೀಪದ ಪೇರಮಹಲು ನಿವಾಸಿ ಪ್ರಭಾಕರ (40) ಮೃತಪಟ್ಟ ವ್ಯಕ್ತಿ.
ನೆಲ್ಯಾಡಿಯಿಂದ ಗುಂಡ್ಯ ಕಡೆಗೆ ಪ್ರಭಾಕರ ಅವರು ತೆರಳುತ್ತಿದ್ದು, ಪೆರಿಯಶಾಂತಿ ಬರುವಷ್ಟರಲ್ಲಿಯೇ ಬೆಂಗಳೂರಿನಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ. ಈ ದುರ್ಘಟನೆಯಲ್ಲಿ ಆಟೋ ಚಾಲಕ ಪ್ರಭಾಕರ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
– ಮಂಗಳೂರು: ಭೀಕರ ಅಪಘಾತಕ್ಕೆ; ಯುವಕ ಸಾವು!
ಮಂಗಳೂರು: ಕೆಂಜಾರ್ ಸಮೀಪ ನಡೆದ ಭೀಕರ ಅಪಘಾತದಲ್ಲಿ ಜೋಶ್ವಾ ಪಿಂಟೋ (27 ವ) ಎಂಬುವವರು ಸಾವಿಗೀಡಾದ ಘಟನೆ ನಡೆದಿದೆ.
ವರದಿಯ ಪ್ರಕಾರ, ಈಸ್ಟರ್ ವಸ್ತುಗಳನ್ನು ಖರೀದಿ ಮಾಡಿ, ಮಂಗಳೂರಿನಿಂದ ಸ್ನೇಹಿತರೊಂದಿಗೆ ವಾಪಾಸು ಬರುತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿದ್ದ ಆಳಕ್ಕೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ನಿಯಂತ್ರಣ ತಪ್ಪಿ ವಾಹನವು ತಿರುವಿನಲ್ಲಿ ಪಲ್ಟಿಯಾಗಿದ್ದು, ಈ ಘಟನೆ ನಡೆದಿದೆ.