Categories
ಕರಾವಳಿ

ಬೆಳ್ತಂಗಡಿ: ತಲೆ ಬುರುಡೆ ರಹಸ್ಯ ಬಯಲು

• ಬೆಳ್ತಂಗಡಿ: ತಲೆ ಬುರುಡೆ ರಹಸ್ಯ ಬಯಲು

• ಕುಂದಾಪುರ: ಎಕ್ಸ್ ಪ್ರೆಸ್ ರೈಲು ಢಿಕ್ಕಿ; ಯುವಕನ ಸಾವು

• ಉಳ್ಳಾಲ: ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ

• ಅಂಕೋಲಾ: ಅನುಮಾನಾಸ್ಪದ ಸೂಟ್ ಕೇಸ್ ಪತ್ತೆ

• ಮಂಗಳೂರು: ಅಪ್ರಾಪ್ತೆ ಅತ್ಯಾಚಾರದ ಆರೋಪಿಗೆ ಜಾಮೀನು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

• ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ಹಿನ್ನೆಲೆಯಲ್ಲಿ ಎಸ್ಐಟಿ ತನಿಖಾಧಿಕಾರಿಗಳ ವಿಚಾರಣೆಯನ್ನು ಎದುರಿಸುತ್ತಿರುವ, ಮುಸುಕುಧಾರಿಯಾಗಿದ್ದ ಚಿನ್ನಯ್ಯ ತಂದ ತಲೆಬುರುಡೆ ಪುರುಷನದ್ದು ಎನ್ನುವ ಸಂಗತಿ ಎಫ್ಎಸ್ಎಲ್ ವರದಿಯಿಂದ ತಿಳಿದುಬಂದಿದೆ. ಮತ್ತು ವಿಚಾರಣೆಗೆ ಸಂಬಂಧಿಸಿದಂತೆ ಧರ್ಮಸ್ಥಳ ವಿರೋಧಿ ಹೋರಾಟಗಾರನಾದ ಮಹೇಶ್ ತಿಮ್ಮರೋಡಿ ಮನೆಯಲ್ಲಿ ಚಿನ್ನಯ್ಯನ ಮೊಬೈಲ್ ಪತ್ತೆಯಾಗಿದೆ. ಈಗಾಗಲೇ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದಿರುವ ಎಸ್ಐಟಿ ಅಧಿಕಾರಗಳು ಇಡೀ ಮನೆಯನ್ನು ಪರಿಶೀಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಆತನ ಮನೆಯಲ್ಲಿ ಬಟ್ಟೆಗಳು, ಅನುಮಾನಾಸ್ಪದ ಮತ್ತು ಪ್ರಕರಣಕ್ಕೆ ಪೂರಕವಾಗಿರುವಂತಹ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

• ಕುಂದಾಪುರ: ಎಕ್ಸ್ ಪ್ರೆಸ್ ರೈಲು ಢಿಕ್ಕಿ; ಯುವಕನ ಸಾವು

ಕುಂದಾಪುರ: ರೈಲು ಹಳಿಯನ್ನು ದಾಟುತ್ತಿದ್ದ ಸಂದರ್ಭದಲ್ಲಿ, ಮಡಗಾಂವ್ ನಿಂದ ಎರ್ನಾಕುಲಂಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲು ಢಿಕ್ಕಿ ಹೊಡೆದ ಪರಿಣಾಮ, ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮೂಡ್ಲಕಟ್ಟೆ ರೈಲು ನಿಲ್ದಾಣದ ಸಮೀಪ ನಡೆದಿದೆ. ಸಿಗ್ನಲ್ ಬದಲಾಯಿಸುವ ಸಂದರ್ಭದಲ್ಲಿ ಯುವಕ ಹಳಿ ದಾಟಲು ಪ್ರಯತ್ನಿಸಿದ್ದು, ಆಗ ರೈಲು ಢಿಕ್ಕಿ ಹೊಡೆದಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಮೃತಪಟ್ಟ ವ್ಯಕ್ತಿಯನ್ನು ಮಧ್ಯಪ್ರದೇಶ ಮೂಲದ ಸಂತೋಷ್ ಕುಮಾರ್ ಎಂದು ಗುರುತಿಸಲಾಗಿದೆ. ತಲೆ ಮತ್ತು ಕೈಗೆ ಬಲವಾದ ಹೊಡೆತ ಬಿದ್ದ ಕಾರಣ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

• ಉಳ್ಳಾಲ: ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ

ಉಳ್ಳಾಲ: ಉತ್ತರ ಕರ್ನಾಟಕ ಮೂಲದ ಸಂಜೀವ್ ಎನ್ನುವವರು, ಅಸೈಗೋಳಿಯಲ್ಲಿ ಕರ್ನಾಟಕ ಮೀಸಲು ಪಡೆಯ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು . ಇವರು ತಾವು ವಾಸಿಸುತ್ತಿದ್ದ ಕ್ವಾರ್ಟರ್ಸ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪತ್ನಿ ಮತ್ತು ಮಕ್ಕಳು ಊರಿಗೆ ತೆರಳಿದ್ದ ಸಂದರ್ಭದಲ್ಲಿ, ಸಂಜೀವ್ ಅವರು ಸಾವಿಗೆ ಶರಣಾಗಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಆಗಮಿಸಿದ ಕೊಣಾಜೆ ಪೊಲೀಸರು ತನಿಖೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡರು.

• ಅಂಕೋಲಾ: ಅನುಮಾನಾಸ್ಪದ ಸೂಟ್ ಕೇಸ್ ಪತ್ತೆ

ಅಂಕೋಲಾ: ಪೊಲೀಸ್ ಠಾಣಾ ವ್ಯಾಪ್ತಿಯ ಪುರಸಭೆಯ ಎದುರುಗಿರುವ, ಪಂಚಾಯತ್ ರಾಜ್ ಕಚೇರಿಯ ಪಕ್ಕದಲ್ಲಿ, ಮಂಗಳವಾರದಂದು ಅನುಮಾನಾಸ್ಪದ ಸೂಟ್ ಕೇಸ್ ಒಂದು ಪತ್ತೆಯಾಗಿದ್ದು, ಆತಂಕದ ವಾತಾವರಣ ಸೃಷ್ಟಿ ಮಾಡಿತು. ಸಾರ್ವಜನಿಕರು ಸೂಟ್ ಕೇಸ್ ನಲ್ಲಿ ಬಾಂಬ್ ಇರಬಹುದು ಎಂದು ಅನುಮಾನಿಸಿ ಪೊಲೀಸರಿಗೆ ತಿಳಿಸಿದರು.‌ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸೂಟ್ ಕೇಸ್ ಇದ್ದ ಜಾಗದಲ್ಲಿ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಿದರು. ಬಳಿಕ ಕಾರವಾರದಿಂದ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದಾಗ ಯಾವುದೇ ಅಪಾಯಕಾರಿ ವಸ್ತುಗಳು ಕಂಡುಬಂದಿಲ್ಲ. ಬದಲಿಗೆ ಕೇವಲ ಬಟ್ಟೆಗಳು, ಔಷಧಿಗಳು, ಯಲ್ಲಾಪುರ ಮೂಲದ ಸಂಬಂಧಿತ ವ್ಯಕ್ತಿಯ ಮತದಾರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ ಮಾತ್ರ ಲಭಿಸಿತು ಎನ್ನುವ ಸಂಗತಿ ತಿಳಿದ ಮೇಲೆ ಜನರು ನಿರಾಳರಾದರು.

• ಮಂಗಳೂರು: ಅಪ್ರಾಪ್ತೆ ಅತ್ಯಾಚಾರದ ಆರೋಪಿಗೆ ಜಾಮೀನು

ಮಂಗಳೂರು: ಹದಿನೈದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಕುರಿತು, ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಂದೇಶ್ ಎಂಬ ಆರೋಪಿಯನ್ನು ಬಂಧಿಸಿದ್ದರು. ಈಗ ಆರೋಪಿಯ ಜಾಮೀನು ಅರ್ಜಿಯನ್ನು ಪರಿಗಣಿಸಿದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಎಫ್. ಟಿ. ಎಸ್. ಸಿ. ನ್ಯಾಯಾಧೀಶರಾದ ಮಾನು ಕೆ ಎಸ್ ಅವರು ಆರೋಪಿಗೆ ಷರತ್ತು ಬದ್ಧ ಜಾಮೀನನ್ನು ಮಂಜೂರು ಮಾಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.