• ಉಡುಪಿ: ಗಣೇಶ ಚತುರ್ಥಿಯ ಪ್ರಯುಕ್ತ ಮದ್ಯ ನಿಷೇಧ
• ಬಂಟ್ವಾಳ: ದೈವೀವನಕ್ಕೆ ಬೇಕಿದೆ ತುರ್ತು ಚಿಕಿತ್ಸೆ
• ಪುತ್ತೂರು: ಗೌರಿಹೊಳೆಯ ದಡದಲ್ಲಿ ಮೊಸಳೆ; ಜನರಲ್ಲಿ ಆತಂಕ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಉಡುಪಿ: ಗಣೇಶ ಚತುರ್ಥಿ ಪ್ರಯುಕ್ತ ಮದ್ಯ ನಿಷೇಧ
ಉಡುಪಿ: ಗಣೇಶ ಚತುರ್ಥಿಯ ದಿನವಾದ ಬುಧವಾರದಂದು ಬೆಳಿಗ್ಗೆ ಆರು ಗಂಟೆಯಿಂದ, ರಾತ್ರಿ ಹನ್ನೆರಡು ಗಂಟೆಯವರೆಗೆ ಹಾಗೂ 29 ಮತ್ತು 31 ರಂದು ಮಧ್ಯಾಹ್ನ ಎರಡು ಗಂಟೆಯಿಂದ, ರಾತ್ರಿ ಹನ್ನೆರಡು ಗಂಟೆಯವರೆಗೆ ಉಡುಪಿ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ, ಮದ್ಯ ಮಾರಾಟವನ್ನು ನಿಷೇಧಿಸುವಂತೆ ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ.ಕೆ ಅವರು ಆದೇಶವನ್ನು ಹೊರಡಿಸಿದ್ದಾರೆ.
• ಬಂಟ್ವಾಳ: ದೈವೀವನಕ್ಕೆ ಬೇಕಿದೆ ತುರ್ತು ಚಿಕಿತ್ಸೆ
ಬಂಟ್ವಾಳ: ನರಹರಿ ಪರ್ವತ ಸದಾಶಿವ ದೇವಸ್ಥಾನದ ಬಳಿ, ಅರಣ್ಯ ಇಲಾಖೆಯವರು ಅಳಿವಿನಂಚಿನಲ್ಲಿರುವ ಔಷಧೀಯ ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವ ಉದ್ದೇಶದಿಂದ ನಿರ್ಮಿಸಿದ್ದ ದೈವೀವನ, ಈಗ ಭಕ್ತರು ಪ್ರವೇಶಿಸಲು ಆತಂಕಪಡುವ ರೀತಿಯಲ್ಲಿ ಅವ್ಯವಸ್ಥೆಗೆ ಗುರಿಯಾಗಿದೆ. ಅರಣ್ಯ ಇಲಾಖೆಯವರ ಪ್ರಕಾರ ಸಾಮಾನ್ಯವಾಗಿ ದೇವರಕಾಡುಗಳಿಗೆ ಸಾರ್ವಜನಿಕರು ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ವಿಶ್ರಮಿಸಿಕೊಳ್ಳಲು ಬೆಂಚುಗಳು, ಕುಡಿಯುವ ನೀರು, ಸುಗಮ ಕಾಲ್ನಡಿಗೆಯ ಹಾದಿ ಮತ್ತು ಮೆಟ್ಟಿಲುಗಳ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತದೆ. ಆದರೆ, ನರಹರಿ ಪರ್ವತದಲ್ಲಿ ಕಲ್ಲು ಬೆಂಚುಗಳು ಸಹ ಪೊದೆಗಳಿಂದ ಕೂಡಿ, ಒಳಗೆ ಪ್ರವೇಶಿಸಲು ಭಯಪಡುವಂತಾಗಿದೆ. ಮತ್ತು ಈ ರೀತಿಯ ಪೊದೆಗಳಿರುವ ಸ್ಥಳಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆದರೂ ಸಂಶಯವಿಲ್ಲ. ಹೀಗಾಗಿ ಅರಣ್ಯ ಇಲಾಖೆಯವರು ಈ ವಿಚಾರದ ಕುರಿತು ಪರಿಶೀಲನೆ ನಡೆಸಿ, ಉತ್ತಮ ರೀತಿಯಲ್ಲಿ ನಿರ್ಮಿಸಬೇಕು ಎಂದು ಸಾರ್ವಜನಿಕರು ಆಗ್ರಹ ಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಂಗಳೂರು ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕ್ಲಿಫರ್ಡ್ ಲೋಗೋ ಅವರು “ದೈವೀವನ ನಿರ್ವಹಣೆಗೆ ಸಂಬಂಧಿತ ಇಲಾಖೆಯಿಂದ ಅನುದಾನ ಬರುತ್ತಿರುವುದು ನಿಜ. ಆದರೆ, ಈ ಬಾರಿಯ ವಿಪರೀತ ಮಳೆಯಿಂದಾಗಿ ಪೊದೆಗಳ ಸಂಖ್ಯೆ ಅಧಿಕವಾಗಿದೆ. ಅಲ್ಲದೆ ಈ ವರ್ಷ ನಿರ್ವಹಣೆಗೆ ಸಂಬಂಧಿಸಿದ ಅನುದಾನ ಬಿಡುಗಡೆಗೊಂಡಿದೆಯೇ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಿ, ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ
• ಪುತ್ತೂರು: ಗೌರಿಹೊಳೆಯ ದಡದಲ್ಲಿ ಮೊಸಳೆ; ಜನರಲ್ಲಿ ಆತಂಕ
ಪುತ್ತೂರು: ಗೌರಿಹೊಳೆಯ ದಡದಲ್ಲಿ ಮರಳಿನ ನಡುವೆ ಮೊಸಳೆಯೊಂದು ಕಂಡಿದ್ದು, ಸ್ಥಳೀಯ ಕೃಷಿಕರಾದ ಕೇಶವಚಂದ್ರ ಅವರು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಸುತ್ತಮುತ್ತಲು ಗದ್ದೆ ತೋಟಗಳನ್ನು ಹೊಂದಿರುವ ಇತರ ಕೃಷಿಕರು ಓಡಾಡಲು ಆತಂಕಪಡುವಂತಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ನದಿಯಿಂದ ದಡದ ಮೇಲೆ ಬಂದಿರುವ ಮೊಸಳೆ, ಮುಂದೆ ರಸ್ತೆಗೆ ಬರಬಹುದು ಎಂಬ ಭಯದ ವಾತಾವರಣ ಸೃಷ್ಟಿಯಾಗಿದೆ. 2024ರ ಡಿಸೆಂಬರ್ ಸಮಯದಲ್ಲೂ ಗೌರಿಹೊಳೆಯಲ್ಲಿ ಮೊಸಳೆ ಕಂಡುಬಂದಿತ್ತು ಎಂಬ ಸಂಗತಿ ತಿಳಿದುಬಂದಿದೆ. ಹೆದರಿದವರ ಮೇಲೆ ಹಾವು ಎಸೆದಂತೆ, ಈಗಾಗಲೇ ಕಾಡಾನೆ ದಾಳಿಯಿಂದ ಭೀತರಾದ ಜನರಿಗೆ, ಮೊಸಳೆ ಮತ್ತೊಂದು ರೀತಿಯ ಸಮಸ್ಯೆಯನ್ನು ತಂದೊಡ್ಡಿದೆ. ಹೀಗಾಗಿ ಸಾರ್ವಜನಿಕರು ಅರಣ್ಯ ಇಲಾಖೆಯ ಅಧಿಕಾರಿಗಳು ಮೊಸಳೆಯನ್ನು ಹಿಡಿದು, ಸುರಕ್ಷಿತ ಸ್ಥಳಕ್ಕೆ ಬಿಡುವ ಮೂಲಕ, ರೈತರು ನಿರಾತಂಕವಾಗಿ ಓಡಾಡಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.