ಕರಾವಳಿ ಟಾಪ್ ನ್ಯೂಸ್!
ಆಗುಂಬೆ ಘಾಟ್ ತಿರುವಿನಲ್ಲಿ ಕಾರ್ ಪಲ್ಟಿ: ಬಚಾವ್!
– ಉಡುಪಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ, ಪೊಲೀಸರ ದಾಳಿ!
– ಕಾರ್ಕಳ: ಕುಂಭಮೇಳಕ್ಕೆ ತೆರಳಿದ್ದ ವ್ಯಕ್ತಿ ನಾಪತ್ತೆ
– ದೇರಳಕಟ್ಟೆ: ಮುತ್ತೂಟ್ ಫೈನಾನ್ಸ್ ಕಚೇರಿ ದರೋಡೆಗೆ ಯತ್ನ
NAMMUR EXPRESS NEWS
ಉಡುಪಿ: ರೆನಾಲ್ಟ್ ಟ್ರೈಬರ್ ಕಾರೊಂದು ಆಗುಂಬೆ ಘಾಟ್ ನ ಏಳನೇ ತಿರುವಿನಲ್ಲಿ ಇದ್ದಂತೆ ಪಲ್ಟಿಯಾಗಿದ್ದು, ದಂಪತಿ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸದೆ ಬಚಾವಾದ ಅಪರೂಪದ ಘಟನೆ.
ದಂಪತಿ ಉಡುಪಿಯಿಂದ ಶಿವಮೊಗ್ಗಕ್ಕೆ ಪ್ರಯಾಣ ಮಾಡುತ್ತಿದ್ದಾಗ ಎದುರುಗಡೆ ಟಿಪ್ಪರ್ ಬಂದಿತ್ತು. ಸಂಭವಿಸಬಹುದಾಗಿದ್ದ ದುರಂತ ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.
ಈ ಸಂದರ್ಭ ಕಾರಿನ ಮೇಲ್ಛಾವಣಿಗೆ ಹಾನಿ ಸಂಭವಿಸಿದೆ ದಂಪತಿಗೆ ಮಾತ್ರ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
– ಉಡುಪಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ, ಪೊಲೀಸರ ದಾಳಿ!
ಉಡುಪಿ: ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಉಡುಪಿ ಮಹಿಳಾ ಠಾಣೆಯ ಪೊಲೀಸರು ಶಾರದಾ ನಗರದಲ್ಲಿರುವ ಮನೆಯ ಮೇಲೆ ದಾಳಿ ಮಾಡಿ ಓರ್ವ ಯುವತಿಯನ್ನು ರಕ್ಷಣೆ ಮಾಡಿದ್ದಾರೆ.
ಸತೀಶ್ ಎಂಬಾತ ಸಂತ್ರಸ್ಥೆಗೆ ಕೆಲಸ ಕೊಡುವುದಾಗಿ ಪುಸಲಾಯಿಸಿ ಮೂಡಬಿದ್ರೆಯಿಂದ ಶಾರದ ನಗರದಲ್ಲಿರುವ ಶ್ರೀಲತಾ ಎಂಬವರ ಮನೆಗೆ ಕಳುಹಿಸಿದ್ದನು.ಅಲ್ಲಿ ಶ್ರೀಲತಾ ಆಕೆಯನ್ನು ವೇಶ್ಯಾವಾಟಿಕೆ ಚಟುವಟಿಕೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.
ಈ ವೇಳೆ ರೂಮಿನಲ್ಲಿ ಕೂತುಕೊಂಡು ಇರು ಎಂದು ಒತ್ತಾಯದಿಂದ ಇರಿಸಿಕೊಂಡಿರುವುದಾಗಿ ದೂರಲಾಗಿದೆ. ಈ ಕುರಿತು ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಸಂತ್ರಸ್ಥೆಯನ್ನು ರಕ್ಷಿಸಿದರು. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಕಾರ್ಕಳ: ಕುಂಭಮೇಳಕ್ಕೆ ತೆರಳಿದ್ದ ವ್ಯಕ್ತಿ ನಾಪತ್ತೆ
ಉಡುಪಿ:ಕಾರ್ಕಳ ತಾಲೂಕು ಕಾಬೆಟ್ಟು ನಿವಾಸಿ ಸುಧಾಕರ ಪೂಜಾರಿ (69) ಎಂಬವರು ಉತ್ತರಪ್ರದೇಶದಲ್ಲಿ ನಡೆದ ಕುಂಭಮೇಳದಲ್ಲಿ ಭಾಗವಹಿಸಲು ಪ್ರಯಾಗ್‌ರಾಜ್ ಮತ್ತು ಕಾಶಿಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೋದವರು ಜ.27ರಿಂದ ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಇದುವರೆಗೂ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.
5 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ಹಿಂದಿ, ಇಂಗ್ಲೀಷ್, ತುಳು ಹಾಗೂ ಮರಾಠಿ ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ನಗರ ಠಾಣೆ 08258-230213, 233100, 9480805461ಅನ್ನು ಸಂಪರ್ಕಿಸಬಹುದು ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
– ದೇರಳಕಟ್ಟೆ: ಮುತ್ತೂಟ್ ಫೈನಾನ್ಸ್ ಕಚೇರಿ ದರೋಡೆಗೆ ಯತ್ನ
ಮಂಗಳೂರು : ದೇರಳಕಟ್ಟೆ ಜಂಕ್ಷನಿನಲ್ಲಿರುವ ಮುತ್ತೂಟ್ ಫೈನಾನ್ಸ್ ಕಚೇರಿ ದರೋಡೆಗೆ ಯತ್ನಿಸಿದ ಘಟನೆ ತಡರಾತ್ರಿ ನಡೆದಿದೆ.
ಅದೃಷ್ಟವಶಾತ್ ಖದೀಮರು ಬೀಗ ಒಡೆಯುತ್ತಿರುವಾಗಲೇ ಫೈನಾನ್ಸ್ ಮಳಿಗೆಯ ಸೈರನ್ ಮೊಳಗಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.
ಮಾ. 29ರಂದು ಶನಿವಾರ ತಡರಾತ್ರಿ ಸುಮಾರು 1.30 ಗಂಟೆಗೆ ಘಟನೆ ನಡೆದಿದೆ. ದೇರಳಕಟ್ಟೆ ಜಂಕ್ಷನ್ ನಲ್ಲಿರುವ ಹೆಚ್.ಎಂ. ಟಿಂಬರ್ಸ್ ಸಂಸ್ಥೆಗೆ ಸೇರಿದ ವಾಣಿಜ್ಯ ಕಟ್ಟಡದ ಮೇಲಂತಸ್ತಿನಲ್ಲಿ ಕಾರ್ಯಾಚರಿಸುತ್ತಿರುವ ಮುತ್ತೂಟ್ ಫೈನಾನ್ಸ್ ಗೆ ಕೇರಳ ಮೂಲದ ಮೂವರು ಖದೀಮರು ಕನ್ನ ಹಾಕಿದ್ದಾರೆ. ಫೈನಾನ್ಸ್ ಸಂಸ್ಥೆಯ ಮೇಲಾಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.