ಒಂದು ವರ್ಷದಲ್ಲಿ 80ಕ್ಕೂ ಹೆಚ್ಚು ಜನ ತುಂಗೆಗೆ ಬಲಿ!!
– ಯುಗಾದಿ ಹಬ್ಬದ ದಿನವೇ ಈಜಲು ಹೋಗಿ ಜೀವ ಬಿಟ್ಟ ಯುವಕ
– ಮಲೆನಾಡಲ್ಲಿ ನದಿ ಈಜು ಮೋಜು ಜೀವಕ್ಕೆ ಅಪಾಯ
– ಮಕ್ಕಳು, ಯುವಕರೇ ಹೆಚ್ಚು: ಇನ್ನಾದ್ರೂ ಹುಷಾರ್ ಹುಷಾರ್
NAMMUR EXPRESS NEWS
ತೀರ್ಥಹಳ್ಳಿ/ ಶೃಂಗೇರಿ: ಮಲೆನಾಡ ಜೀವ ನದಿ ತುಂಗೆ ಇತ್ತೀಚಿಗೆ ಅನೇಕ ಕಾರಣಗಳಿಂದ ನೀರಿಲ್ಲದೆ ಬತ್ತುತ್ತಿದ್ದಾಳೆ. ಆದರೂ ಅಲ್ಲಿ ನೀರಿನಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಳ್ಳುವರ ಸಂಖ್ಯೆ ಕಡಿಮೆ ಇಲ್ಲ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹರಿಯುವ ತುಂಗೆಗೆ ಒಂದು ವರ್ಷದಲ್ಲಿ 80ಕ್ಕೂ ಹೆಚ್ಚು ಮಂದಿ ಈಜಲು ಹೋಗಿ ಬಲಿ ಆಗಿದ್ದಾರೆ. ಇದು ನದಿ ತಪ್ಪಲ್ಲ, ಈಜು ಮೋಜು ಅನೇಕರ ಕುಟುಂಬಕ್ಕೆ ಶಾಶ್ವತ ಕಣ್ಣೀರು ತರಿಸಿದೆ.
ಹೌದು. ಇಂತಹದ್ದೇ ಒಂದು ಘಟನೆ ತೀರ್ಥಹಳ್ಳಿಯಲ್ಲಿ ಯುಗಾದಿ ದಿನವೇ ನಡೆದಿದೆ. ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಯುವಕರಲ್ಲಿ ಓರ್ವ ಸಾವನ್ನಪ್ಪಿದ್ದು, ಕಿರಣ್ ( 20 ವರ್ಷ) ಮೃತಪಟ್ಟ ದುರ್ದೈವಿ. ತೀರ್ಥಹಳ್ಳಿ ತಾಲೂಕಿನ ಜಿಗಳಗೊಡು ಸಮೀಪದ ನಾಲ್ವರು ಯುವಕರು ತುಂಗಾ ನದಿಯಲ್ಲಿ ರಾಮೇಶ್ವರ ದೇವಸ್ಥಾನದ ಹಿಂಭಾಗ ಈಜಲು ತೆರಳಿದ್ದು ಓರ್ವ ಯುವಕ ಮೃತಪಟ್ಟಿದ್ದಾನೆ. ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಹೊರತೆಗೆಯಲಾಗಿದ್ದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಪದೇ ಪದೇ ಇಂಥ ಘಟನೆ ನಡೆದರೂ ಜನ ಬುದ್ದಿ ಕಲಿಯುತ್ತಿಲ್ಲ. ಪೊಲೀಸ್ ಇಲಾಖೆ ಕೂಡ ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ.
ಕಳೆದ ವರ್ಷ ಮೂವರು ಮಕ್ಕಳು ಇಲ್ಲಿಯೇ ಸಾವನ್ನು ಕಂಡಿದ್ದರು. ಅಲ್ಲದೆ ಪ್ರತಿ ತಿಂಗಳು ಒಂದಲ್ಲ ಒಂದು ಪ್ರಕರಣ ವರದಿ ಆಗುತ್ತಿದೆ. ಶೃಂಗೇರಿ, ಕೊಪ್ಪ, ಶಿವಮೊಗ್ಗದಲ್ಲಿ ಇಂತಹ ಘಟನೆ ಜರುಗುತ್ತಿವೆ. ಅದರಲ್ಲೂ ಮಕ್ಕಳು, ಯುವಕರು ಪ್ರಾಣ ಕಳೆದುಕೊಂಡವರಲ್ಲಿ ಹೆಚ್ಚಿನವರು. ಪೋಷಕರು ಕೂಡ ಈ ಬಗ್ಗೆ ಜಾಗೃತಿ ವಹಿಸಬೇಕಿದೆ.
