Categories
ಕರಾವಳಿ ಶಿವಮೊಗ್ಗ

ಅಡಿಕೆ ಕೊಯ್ಲು ಉಪಕರಣಕ್ಕೆ ಸಹಾಯಧನ ಹೆಚ್ಚಿಸಿದ ಕೇಂದ್ರ

ಅಡಿಕೆ ಕೊಯ್ಲು ಉಪಕರಣಕ್ಕೆ ಸಹಾಯಧನ ಹೆಚ್ಚಿಸಿದ ಕೇಂದ್ರ
– ಸರ್ಕಾರ ಮಹತ್ವದ ಹೆಜ್ಜೆಯಿಂದ ತೋಟಗಾರಿಕೆ ಬೆಳೆಗಾರರಲ್ಲಿ ಸಂತಸ
– ಅಡಿಕೆ ಬೆಳೆಗಾರರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ

NAMMUR EXPRESS NEWS
ಶಿವಮೊಗ್ಗ : ಅಡಿಕೆ ಬೆಳೆಗಾರರನ್ನು ಬೆಂಬಲಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಡಿಕೆ ಕೊಯ್ಲು ಉಪಕರಣಗಳ ಮೇಲಿನ ಸಹಾಯ ಧನವನ್ನು ಹೆಚ್ಚಿಸಿ, ಆತ್ಯಾಧುನಿಕ ಕೃಷಿ ಉಪಕರಣಗಳನ್ನು ಕೈಗೆಟುಕುವಂತೆ ಮಾಡುವಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿರುವುದು ತೋಟಗಾರಿಕೆ ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಈ ಬಗ್ಗೆ ಮಾಹಿತಿ ನೀಡಿದ್ದು,
ಕಳೆದ ತಿಂಗಳಲ್ಲಿ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘವು ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಕೇಂದ್ರ ಸರ್ಕಾರದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶಿವರಾಜ್ ಸಿಂಗ್ ಚೌವ್ಹಾಣ್ ಭಾಗವಹಿಸಿದ್ದರು. ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ರೈತರನ್ನು ಬೆಂಬಲಿಸಲು ಅಡಿಕೆ ಕೊಯ್ದು ಉಪಕರಣಗಳ ಮೇಲಿನ ಸಹಾಯಧನವನ್ನು ಹೆಚ್ಚಿಸುವಂತೆ ಮನವಿಯನ್ನು ಮಾಡಲಾಗಿತ್ತು. ಅಲ್ಲದೇ ಪತ್ರ ಬರೆದು ಒತ್ತಾಯಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಕೃಷಿ ಯಾಂತ್ರೀಕರಣ ಉಪ ಅಭಿಯಾನ ಆಡಿ ಟೆಲಿಸ್ಕೊಪಿಕ್ ಟ್ರಿ -ಪೂನರ್ ಗೆ ಸಹಾಯಧನದ ಮೊತ್ತವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆಯು ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಸರಿ ಸುಮಾರು 1,37,407 ಹೆಕ್ಟೇರ್ ಪ್ರದೇಶವನ್ನು ಆವರಿಸಿಕೊಂಡಿದೆ. ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಟೆಲಿಸ್ಕೋಪಿಕ್ ಟ್ರಿ -ಪೂನರ್ ಉಪಕರಣವು ಅಡಿಕೆ ಕಟಾವು ಮಾಡಲು ಹಾಗೂ ಔಷಧಿ ಸಿಂಪರಣೆ ಮಾಡಲು ಅತ್ಯುಪಯುಕ್ತವಾಗಿರುವುದನ್ನು ಅರಿತು ಎಲ್ಲಾ ಅಡಿಕೆ ಬೆಳೆಗಾರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಹಕರಿಸುವ ನಿಟ್ಟಿನಲ್ಲಿ ಕೇಂದ್ರಕ್ಕೆ ಮಾಡಿದ ಮನವಿ ಸಫಲವಾಗಿದೆ.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಕಾಲದಲ್ಲಿ ಔಷಧಿ ಸಿಂಪರಣೆ ಮಾಡುವ ನೈಪುಣ್ಯತೆವುಳ್ಳ ಕೂಲಿ ಕಾರ್ಮಿಕರ ಅಭಾವವಿರುವುದರಿಂದ ಸದರಿ ಉಪಕರಣವು ಅತ್ಯಂತ ಉಪಯುಕ್ತವಾಗಲಿದೆ. ಮಾತ್ರವಲ್ಲ ಕೂಲಿಕಾರರನ್ನು ಹುಡುಕುವುದರಿಂದ ಮುಕ್ತಿ ದೊರೆಯಲಿದೆ ಎಂದವರು ಆಶಿಸಿದ್ದಾರೆ. ಕೋರಿಕೆಯನ್ನು ಪುರಸ್ಕರಿಸಿ, ಅಡಿಕೆ ಕೊಯ್ಲು ಉಪಕರಣಗಳ ಮೇಲಿನ ಸಹಾಯಧನವನ್ನು ಹೆಚ್ಚಿಸಿ, ಆತ್ಯಾಧುನಿಕ ಕೃಷಿ ಉಪಕರಣಗಳನ್ನು ಕೈಗೆಟುಕುವಂತೆ ಮಾಡುವಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿ, ಸಹಾಯಧನ ಬಿಡುಗಡೆಗೊಳಿಸಿ ಪ್ರೋತ್ಸಾಹಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಸಂಸದ ಬಿ ವೈ ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.